ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಾಯಂ ಮಾಡಲು ಆಗ್ರಹ

ನೇರ ಪಾವತಿ, ಹೊರಗುತ್ತಿಗೆ ಪೌರಕಾರ್ಮಿಕರ ಧರಣಿ
Last Updated 22 ಮಾರ್ಚ್ 2022, 16:05 IST
ಅಕ್ಷರ ಗಾತ್ರ

ಹಾಸನ: ನೇರ ಪಾವತಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಕನಿಷ್ಠ ವೇತನನಿಗದಿ ಮಾಡಬೇಕು ಎಂದು ಆಗ್ರಹಿಸಿ ನಗರಸಭೆ ಆವರಣದಲ್ಲಿ ಮಂಗಳವಾರ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಪ್ರತಿಭಟಿಸಿದರು.

ನೇರ ಪಾವತಿ, ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸಬೇಕು. ಅಲ್ಲಿಯವರೆಗೂ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಮಾಸಿಕ ₹ 26 ಸಾವಿರ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.

ನೇರ ಪಾವತಿ ನೌಕರರಿಗೂ ನಗರಸಭೆಯಿಂದ ಉಚಿತವಾಗಿ ಮನೆ, ನಿವೇಶನ ನೀಡಬೇಕು. ಕಾರ್ಮಿಕರಿಗೆ ಸರಿಯಾಗಿ ಇಎಸ್‌ಐ ಸೌಲಭ್ಯಸಿಗುವಂತೆ ನೋಡಿಕೊಳ್ಳಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿಸಂಪೂರ್ಣವಾಗಿ ರದ್ದು ಮಾಡಬೇಕು. ನಾಲ್ಕು ತಿಂಗಳ ಬಾಕಿವೇತನ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರಿಗೆ ಸಮವಸ್ತ್ರ, ರಕ್ಷಣಾ ಪರಿಕರ, ಕೆಲಸದ ಪರಿಕರ ಹಾಗೂ ಗುರುತಿನ ಪತ್ರ ನೀಡಬೇಕು. ಹಾಸನ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ನಗರದ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಸಂಹಿತೆ ರದ್ದು ಮಾಡಬೇಕು ಎಂದು ಆಗ್ರಹಿಸಿ ನಗರಸಭೆ ಅಧ್ಯಕ್ಷ ಆರ್‌.ಮೋಹನ್‌ಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಧರ್ಮೇಶ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮಂಜುನಾಥ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ.ಪೃಥ್ವಿ, ಸಿಐಟಿಯು ಕಾರ್ಯದರ್ಶಿ ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT