ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ

ಮುಂದುವರಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
Last Updated 1 ಮಾರ್ಚ್ 2023, 5:16 IST
ಅಕ್ಷರ ಗಾತ್ರ

ಹಾಸನ: ನಗರದ ವಾರ್ಡ್‌ಗಳಲ್ಲಿ ನಾಯಿಗಳು ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು, ರಸ್ತೆಯಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಇತ್ತೀಚೆಗೆ ಸತ್ತ ಹಸುವನ್ನು ನಾಯಿಗಳ ಹಿಂಡು ಕಿತ್ತು ತಿನ್ನುತ್ತಿರುವ ಬಗ್ಗೆ ನಗರಸಭೆಯ ಗಮನಕ್ಕೆ ತರಲಾಗಿತ್ತು. ಇದರಿಂದ ಸುತ್ತಮುತ್ತಲಿನ ಪರಿಸರ ಗಬ್ಬು ನಾರುತ್ತಿದ್ದು ನಾಯಿಗಳ ಹಾವಳಿ ವಿಪರೀತವಾಗಿದೆ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ನಗರಸಭೆ ಸದಸ್ಯ ಗಿರೀಶ್ ಚೆನ್ನವೀರಪ್ಪ, ನಾಯಿ ಹಾವಳಿ ನಗರದಲ್ಲಿ ಹಲವು ವರ್ಷಗಳಿಂದ ಇದೆ. ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಆದರೆ ಈ ಕಾರ್ಯಾಚರಣೆಗೆ ಪ್ರಾಣಿ ದಯಾ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನಮ್ಮ ಮಕ್ಕಳಿಗೆ ನಾಯಿಗಳಿಂದ ಏನಾದರೂ ಪ್ರಾಣಕ್ಕೆ ತೊಂದರೆ ಆದರೆ ಮನೇಕಾ ಗಾಂಧಿಯು ಬರುವುದಿಲ್ಲ. ಪ್ರಾಣಿ ದಯಾ ಸಂಘದವರು ಬರುವುದಿಲ್ಲ ಎಂದು ದೂರಿದರು.

ಸದಸ್ಯ ಶಂಕರ್ ಮಾತನಾಡಿ, ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತ. ಆದರೆ ಇತ್ತೀಚಿನ ಕಾರ್ಯಾಚರಣೆ ವೇಳೆ ಸಾಕು ನಾಯಿಗಳಿಗೂ ಈ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಲೋಪ ಎಸಗಲಾಗಿದೆ. ಈ ಬಗ್ಗೆಯೂ ಗಮನ ಹರಿಸಬೇಕು. ಕೇವಲ ಉಪಟಳ ನೀಡುವ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಬಹುತೇಕ ಸದಸ್ಯರು ನಗರದ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೋಟಿಸ್‌ ನೀಡಲು ಆಗ್ರಹ: ನಗರದಲ್ಲಿನ ಪ್ರತಿಷ್ಠಿತ ಹೋಟೆಲ್ ಹಾಗೂ ನರ್ಸಿಂಗ್ ಹೋಂಗಳು ಪಾರ್ಕಿಂಗ್‌, ಮತ್ತಿತರ ಸೌಲಭ್ಯಕ್ಕೆ ಬಿಟ್ಟಿರುವ ಜಾಗ (ಕನ್ಸರ್ವೆನ್ಸಿ)ದಲ್ಲಿ ಕ್ಯಾಂಟೀನ್, ಸಿಟಿ ಸ್ಕ್ಯಾನ್ ಸೆಂಟರ್, ವಾಹನಗಳ ನಿಲುಗಡೆಗೆ ಬಳಸುತ್ತಿದ್ದಾರೆ. ಈ ಬಗ್ಗೆ ನಗರಸಭೆ ಗಂಭೀರ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿದ ಹೋಟೆಲ್ ಹಾಗೂ ನರ್ಸಿಂಗ್ ಹೋಂ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಸದಸ್ಯರೆಲ್ಲ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಸದಸ್ಯ ಬಾಬು ಮನವಿ ಮಾಡಿದರು.

ನಗರದ ಮಲ್ಲಿಗೆ ರೆಸಿಡೆನ್ಸಿ ಎದುರಿನ ಜಾಗವನ್ನು ನಗರಸಭೆ ವಶಕ್ಕೆ ಪಡೆಯಬೇಕು. ಈ ಜಾಗವನ್ನು ಹೋಟೆಲ್‌ನವರು ಪಾರ್ಕಿಂಗ್‌ಗೆ ಬಳಸಿಕೊಳ್ಳುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಮ್ಮ ವಾರ್ಡ್‌ನಲ್ಲಿ ಯುಜಿಡಿ ಸಂಪರ್ಕದ ಸಮಸ್ಯೆ ಇದೆ. ನಗರೋತ್ಥಾನ ಯೋಜನೆ ಅಡಿ ಕಾಮಗಾರಿಗಳನ್ನು ನಮ್ಮ ವಾರ್ಡ್‌ನಲ್ಲಿ ಮಾಡಲಾಗಿಲ್ಲ ಎಂದು ಸದಸ್ಯೆ ವಿಜಯಾ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಮೋಹನ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಪರಮೇಶ್ವರಪ್ಪ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT