ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಸ್‌ನಲ್ಲಿ ನಿರ್ವಾತ ನಳಿಕೆ ತಂತ್ರಜ್ಞಾನ: ಬಿ.ಸಿ. ರವಿಕುಮಾರ್

ಕಡಿಮೆ ಖರ್ಚಿನೊಂದಿಗೆ ಸಮಯ ಉಳಿತಾಯ; ನಿರ್ದೇಶಕ ಬಿ.ಸಿ. ರವಿಕುಮಾರ್ ಮಾಹಿತಿ
Last Updated 28 ಮೇ 2022, 4:00 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ (ಹಿಮ್ಸ್) ಹೊಸದಾಗಿ ನಿರ್ಮಿಸಿದ 450 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ₹1.6 ಕೋಟಿ ವೆಚ್ಚದ (Pneumatic chute system) ನಿರ್ವಾತ ನಳಿಕೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥೆ ನಿರ್ದೇಶಕ ಬಿ.ಸಿ. ರವಿಕುಮಾರ್ ತಿಳಿಸಿದರು.

ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮೊದಲು ನೂತನ ತಂತ್ರಜ್ಞಾನದ ಬಗ್ಗೆ ಪ್ರಾಜೆಕ್ಟರ್‌ ಮೂಲಕ ವೀಕ್ಷಿಸಿ ನಂತರ ಮಾತನಾಡಿದರು.

‘ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯವನ್ನು ಜಾರಿಮಾಡಲಾಗುತ್ತಿದ್ದು, ಸದರಿ ತಂತ್ರಜ್ಞಾನದಿಂದ ಆಸ್ಪತ್ರೆಯ ವಿವಿಧ ಮೂಲೆಗಳಲ್ಲಿರುವ ವಾರ್ಡ್‍ಗಳು ಮತ್ತು ಬೇರೆ ಬೇರೆ ಭಾಗಗಳಿಂದ ಕೇಂದ್ರೀಯ ಪ್ರಯೋಗಾಲಯಕ್ಕೆ ರೋಗಿಗಳರಕ್ತದ ಮಾದರಿಗಳನ್ನು ತಡ ಮಾಡದೇ ಕ್ಷಣಾರ್ಧದಲ್ಲಿ ರವಾನಿಸಬಹುದಾಗಿದೆ. ರೋಗಿಗಳು ಪರೀಕ್ಷಾ ವರದಿಗೆ ಕಾಯುವ ಸಮಯ
ವನ್ನು ಗಣನೀಯವಾಗಿ ತಗ್ಗಿಸಲು ಸಹಕಾರಿಯಾಗಲಿದೆ’ ಎಂದರು.

‘ತುರ್ತುಪರಿಸ್ಥಿತಿಗಳಲ್ಲಿ ಲ್ಯಾಬ್ ಸೇವೆಗಳ ಸಮಯವನ್ನು ತಗ್ಗಿಸಿ ಹಲವಾರು ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ. ರಕ್ತದ ಮಾದರಿಗಳನ್ನು ರವಾನಿಸುವ ಕಾರ್ಯದಲ್ಲೇ ವ್ಯರ್ಥವಾಗುತ್ತಿರುವ ಮಾನವ ಸಂಪನ್ಮೂಲವನ್ನು ಬೇರೆಡೆಗೆ ಬಳಸಿಕೊಳ್ಳಬಹುದಾಗಿದೆ. ಈ ವ್ಯವಸ್ಥೆಯಿಂದ ಮಾನವ ಸಹಜ ತಪ್ಪುಗಳನ್ನು ತಡೆಯಬಹುದಾಗಿದೆ’ ಎಂದು ಹೇಳಿದರು.

‘ಮೊದಲ ಬಾರಿ 6 ರಿಂದ 8 ವಾರ್ಡ್‍ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್ ಗಳಿಗೆ ಅಳವಡಿಸಿಕೊಂಡು ಉತ್ತಮ ಸೇವೆಯನ್ನು ನೀಡಲಾಗುವುದು ಎಂದರು.

‘ಮುಂದಿನ ದಿನಗಳಲ್ಲಿ ಇದನ್ನು ರಕ್ತನಿಧಿಯ ರಕ್ತದ ಚೀಲಗಳು ಮತ್ತು ಔಷಧಗಳ ಸಾಗಣೆಗೂ ಬಳಸಬಹುದು. ಬಡ ರೋಗಿಗಳ ಆರೈಕೆಯಲ್ಲಿ ಸದಾ ಮಂಚೂಣಿಯಲ್ಲಿರುವ ಹಿಮ್ಸ್ ತಂಡದ ಅನೇಕ ವಿಶೇಷ ಹಾಗೂ ಜನೋಪಯೋಗಿ ಕಾರ್ಯಕ್ರಮಗಳಿಗೆ ಈಗ ಇನ್ನೊಂದು ವಿಶಿಷ್ಟ ತಂತ್ರಜ್ಞಾನ ಸೇರ್ಪಡೆಯಾದಂತಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT