ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ| ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಖಾಸಗಿ ಕ್ಲಿನಿಕ್‌, ಆಸ್ಪತ್ರೆಗಳಲ್ಲಿ ವೈದ್ಯರು ಸಿಗದೆ ರೋಗಿಗಳ ನರಳಾಟ
Last Updated 8 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಹಾಸನ: ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ (ಒಪಿಡಿ) ಬಂದ್‌ ಕರೆಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇದ್ದರೆ, ರಾಜೀವ್ ಆಸ್ಪತ್ರೆ, ಜನಪ್ರಿಯ, ನಿರಂತರ ಹೆಲ್ತ್‌ ಕೇರ್‌, ಎಸ್‌ಎಸ್‌ಎಂ, ಮಣಿ, ಹೊಯ್ಸಳ ಆಸ್ಪತ್ರೆ, ನಿರಂತರ ಹೆಲ್ತ್‌ ಕೇರ್‌ ನಲ್ಲಿ ಒಪಿಡಿ ಸೇವೆ ಇಲ್ಲದ ಕಾರಣ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಯಿತು.

ಕೆಲ ಆಸ್ಪತ್ರೆಗಳ ಮುಂದೆ ಬಂದ್‌ ಹಿನ್ನಲೆಯಲ್ಲಿ ತುರ್ತು ಸೇವೆ ಲಭ್ಯ ಎಂದು ಬರೆದು ಅಂಟಿಸಲಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಒಪಿಡಿ ಬಂದ್‌ ಮಾಡಿರಲಿಲ್ಲ. ಹಾಗಾಗಿ ರೋಗಿಗಳ ಸಂಖ್ಯೆ ಹೆಚ್ಚು ಕಂಡು ಬಂತು. ಒಳರೋಗಿಗಳ ವಿಭಾಗದಲ್ಲಿ ಯಥಾರೀತಿ ಚಿಕಿತ್ಸೆ ಮುಂದುವರೆಯಿತು.

ದೂರದ ಊರುಗಳಿಂದ ಬಂದಿದ್ದ ರೋಗಿಗಳು, ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಪರದಾಡಿದರು. ಮಧ್ಯಾಹ್ನ ನಂತರ ಕೆಲ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಆರಂಭಿಸಿದವು.

‘ಹಲ್ಲೆ ನಡೆಸಿದ ಅಶ್ವಿನಿ ಗೌಡ ಹಾಗೂ 13 ಜನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನದ ಹಿನ್ನಲೆಯಲ್ಲಿ 3 ಗಂಟೆಗೆ ಪ್ರತಿಭಟನೆ ಹಿಂತೆಗೆದು, ಒಪಿಡಿ ಸೇವೆ ಒದಗಿಸಲಾಯಿತು’ ಎಂದು ಐಎಂಎ ಜಿಲ್ಲಾ ವಕ್ತಾರ ಕೆ.ನಾಗೇಶ್‌ ತಿಳಿಸಿದರು.
ಕರ್ತವ್ಯನಿರತ ವೈದ್ಯರ ಮೇಲೆ ನಡೆದಿರುವುದನ್ನು ಖಂಡಿಸಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್‌) ವೈದ್ಯಕೀಯ ವಿದ್ಯಾರ್ಥಿಗಳು, ಕಿರಿಯ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

‘ಔಷಧಿಯಿಂದ ಆಗುವ ತೊಂದರೆಗೆ ವೈದ್ಯರನ್ನು ಬಲಿಪಶು ಮಾಡಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸಬಾರದು. ತಪ್ಪಿಸ್ಥರ ವಿರುದ್ಧ ಶಿಕ್ಷೆಯಾಗಬೇಕು. ಈ ರೀತಿ ಘಟನೆಗಳು ನಡೆದಯದಂತೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT