ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಅರಕಲಗೂಡು ತಾಲ್ಲೂಕಿನ ಶ್ರೀರಾಂಪುರ ಗ್ರಾಮ: ವರದಕ್ಷಿಣೆ ತರದ ಪತ್ನಿಗೆ ಚಿತ್ರಹಿಂಸೆ

Published:
Updated:

ಹಾಸನ: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ತನ್ನ ಎರಡು ವರ್ಷದ ಮಗುವಿಗೆ ಥಳಿಸಿರುವ ಘಟನೆ ಅರಕಲಗೂಡು ತಾಲ್ಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕು ಶಿವಪುರ ಗ್ರಾಮದ ಸೌಂದರ್ಯ ಅವರನ್ನು, ಶ್ರೀರಾಂಪುರದ ರಂಗನಾಥನಿಗೆ ನಾಲ್ಕು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

‘ಮದುವೆ ವೇಳೆ 50 ಗ್ರಾಂ ಚಿನ್ನ ನೀಡಲಾಗಿತ್ತು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

‘ಪುತ್ತೂರಿನಲ್ಲಿ ಜ್ಯೋತಿಷಿ ವೃತ್ತಿ ನಡೆಸುತ್ತಿರುವ ಈತ, ತವರಿನಿಂದ ಹಣ ತರುವಂತೆ ಹಿಂಸೆ ಕೊಡುತ್ತಿದ್ದ. ಮಗುವಾದರೂ ಹಿಂಸೆ ಕೊಡುವುದು ನಿಲ್ಲಿಸಲಿಲ್ಲ. ಕಿರುಕುಳ ತಾಳಲಾರದೆ, ಹಲವು ಬಾರಿ ತವರು ಮನೆಗೆ ಹೋಗಿದ್ದೆ. ಮುಂದೆ ಚೆನ್ನಾಗಿ ನೋಡಿಕೊಳ್ಳುವೆ ಎಂದು ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಮನೆಯವರೊಂದಿಗೆ ಸೇರಿಕೊಂಡು ನನಗೆ ಮತ್ತು ಮಗುವಿಗೆ  ಚಿತ್ರಹಿಂಸೆ ನೀಡಿದ್ದಾರೆ’ ಎಂದು ಸೌಂದರ್ಯ ಆರೋಪಿಸಿದರು.

ದೈಹಿಕ ಹಲ್ಲೆಯಿಂದ ಗಾಯಗೊಂಡಿರುವ ಸೌಂದರ್ಯ, ತನ್ನ ಮಗನ ಜತೆ ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೊಣನೂರು ಪೊಲೀಸರು, ಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Post Comments (+)