ವರ್ಷಕ್ಕೆ ಹತ್ತು ಲಕ್ಷ ಉದ್ಯೋಗ ಸೃಷ್ಟಿಸಿಲ್ಲ

ಶನಿವಾರ, ಏಪ್ರಿಲ್ 20, 2019
31 °C
ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

ವರ್ಷಕ್ಕೆ ಹತ್ತು ಲಕ್ಷ ಉದ್ಯೋಗ ಸೃಷ್ಟಿಸಿಲ್ಲ

Published:
Updated:
Prajavani

ಹಾಸನ: ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಂಟಿಯಾಗಿ ಯುವ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಉಭಯ ಪಕ್ಷಗಳ ನಾಯಕರು, ‘ದೇಶದ ಹಿತದೃಷ್ಟಿಯಿಂದ ಕೋಮುವಾದಿ ಬಿಜೆಪಿಯನ್ನು ಹಣಿಯಲು ಇದು ಸಕಾಲ. ಎಲ್ಲರೂ ಒಟ್ಟಾಗಿ ಕಮಲ ಅಭ್ಯರ್ಥಿಯನ್ನು ಸೋಲಿಸಿ ಎಂದು ಕರೆ ನೀಡಿದರು.

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಈವರೆಗೆ ದೇಶ ಆಳಿರುವ ಯಾವುದೇ ಪ್ರಧಾನಿ ಸೇನೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ. ಇದರಲ್ಲೂ ಕೆಟ್ಟ ರಾಜಕೀಯ ಮಾಡುತ್ತಿರುವ ಮೋದಿ ಅವರು ಮತ್ತೆ ಏಕೆ ದೇಶಕ್ಕೆ ಬೇಕು’ ಎಂದು ಪ್ರಶ್ನಿಸಿದರು.

‘ಬಡವರ ಖಾತೆಗೆ ಹಣ, ಉದ್ಯೋಗ ಸೃಷ್ಟಿ ಭರವಸೆ ಒಂದೂ ಈಡೇರಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾಗಾಂಧಿ ಕೊಂದವನನ್ನು ಹೊಗಳುವುದು ಯಾವ ದೇಶಭಕ್ತಿ’ ಎಂದು ಖಾರವಾಗಿ ಪ್ರಶ್ನಿಸಿದರು.

ಹಾಸನದಲ್ಲಿ ಮೂರು ವರ್ಷಗಳ ಹಿಂದೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯುವಾಗ ಹಿಂದು-ಮುಸ್ಲಿಂ ಗಲಾಟೆ ಮಾಡಿಸಿದ್ದು, ಹಾಲಿ ಶಾಸಕ ಪ್ರೀತಂಗೌಡ ಎಂದು ದೂರಿದರು.

‘ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ನೀಡಿದ್ದ ಆಶ್ವಾಸನೆಗಳು ಈಡೇರಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಉದ್ಯೋಗ ದೊರೆಯುವ ಭರವಸೆಯಿಂದ ಯುವಕರು ಮೋದಿಗೆ ಬೆಂಬಲ‌ ನೀಡಿದರು. ಆದರೆ, ವರ್ಷಕ್ಕೆ ಹತ್ತು ಲಕ್ಷ ಉದ್ಯೋಗವನ್ನು ಸೃಷ್ಟಿಸಿಲ್ಲ’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಇಂದಿರಾಗಾಂಧಿ ಅವರು ಪಾಕಿಸ್ತಾನದ ಮೇಲೆ ಯುದ್ದ ಮಾಡಿ ಜಯಗಳಿಸಿದರು. ಆದರೆ ಅವರು ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಸೇನೆ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ನಾಚಿಕೆ ಆಗಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳೂರು-ಚಿಕ್ಕಮಗಳೂರಿನಲ್ಲಿ ನಡೆಯುವ ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ಆರ್.ಎಸ್.ಎಸ್.ಗೆ ಸಿದ್ದಾಂತ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಪರ ಪ್ರಚಾರ ಮಾಡಬೇಡಿ. ಮೋದಿ ಮತ್ತೆ ಪ್ರಧಾನಿಯಾದರೆ ವಿದೇಶ ಸುತ್ತುತ್ತಾರೆ. ಯುವಕರು ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಭಿವೃದ್ಧಿ ಮಾಡಲು ಬಿಜೆಪಿ ಅಭ್ಯರ್ಥಿ ಮಂಜಗೆ ಆಗಲಿಲ್ಲ. ಯುವಕರಿಗೆ ಉದ್ಯೋಗ ಕೊಡಿಸಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಮತ್ತೊಮ್ಮೆ ಅವಕಾಶ ಕೊಡಿ ಎನ್ನುತ್ತಿರುವುದು ಸ್ವಂತ ಅಭಿವೃದ್ಧಿಗೋ, ಇಲ್ಲಾ ಜಿಲ್ಲೆಯ ಅಭಿವೃದ್ಧಿಗೋ’ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸುಜನ್‌ ಗೌಡ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಆನಂದ್, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್, ಎಚ್‌.ಸಿದ್ದಯ್ಯ, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !