ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: 4 ವಾಹನ ಸೇರಿ ₹25 ಲಕ್ಷ ಮೌಲ್ಯದ ವಸ್ತು ವಶ

ಅಂತರ ರಾಜ್ಯ ಕಳ್ಳರ ಬಂಧನ: 12 ಪ್ರಕರಣ ಭೇದಿಸಿದ ಪೊಲೀಸರು
Last Updated 9 ಜುಲೈ 2022, 6:09 IST
ಅಕ್ಷರ ಗಾತ್ರ

ಹಾಸನ: ಅಂತರರಾಜ್ಯ ವಾಹನ ಕಳವು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಇಲ್ಲಿನ ಪೊಲೀಸರು, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದ 12 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌, ‘ಪುಣೆ ಜಿಲ್ಲೆಯ ಶಂಕರ್ ಮಂಜುಗೌಡ, ಹಾಸನ ಜಿಲ್ಲೆಯ ವಿಜಯ್ ಕುಮಾರ್, ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುನ್ನಾ ಕೋಟ್ಯಾನ್, ತಮಿಳುನಾಡಿನ ಅಬ್ದುಲ್ ರಜಾಕ್ ಎಂಬುವವರನ್ನು ಬಂಧಿಸಲಾಗಿದೆ. ಇನ್ನೂ ಮೂವರಿಗಾಗಿ ಶೋಧ ನಡೆದಿದೆ’ ಎಂದರು.

ಆರೋಪಿಗಳಿಂದ ಟಾಟಾ ಸುಮೋ, ಅಶೋಕ್ ಲೇಲ್ಯಾಂಡ್ ದೋಸ್ತ್ ಗೂಡ್ಸ್ ವಾಹನ, ಒಂದು ಬುಲೆರೋ , ರಾಯಲ್ ಎನ್‌ಫಿಲ್ಡ್ ಸೇರಿದಂತೆ 4 ವಾಹನ ಹಾಗೂ ₹ 4 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

ಅರೇಹಳ್ಳಿ ಪೊಲೀಸರು ಮದಘಟ್ಟ ವೃತ್ತದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಸಕಲೇಶಪುರ ಕಡೆಯಿಂದ ಬೇಲೂರು ಮಾರ್ಗವಾಗಿ ಬಂದ ವಾಹನವನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಆರೋಪಿಗಳು ದರೋಡೆ ಹಾಗೂ ವಾಹನ ಕಳ್ಳತನಕ್ಕೆ ಪ್ರಯತ್ನಿಸುತ್ತಿರುವ ಶಂಕೆ ವ್ಯಕ್ತವಾಗಿತ್ತು. ವಾಹನದಲ್ಲಿದ್ದ ಆಲನ್ ಕೀ, ಕಟ್ಟರ್, ಬ್ಯಾಟರಿ, ಅರಸ್ಪ್ಯಾನರ್ ಬಾಕ್ಸ್, ರಾಡ್, ವೀಲ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ವಾಹನ ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಎಎಸ್ಪಿ ಡಾ.ನಂದಿನಿ ಮಾರ್ಗದರ್ಶನ ಹಾಗೂ ಅರಸೀಕೆರೆ ಡಿವೈಎಸ್ಪಿ ಅಶೋಕ ನೇತೃತ್ವದಲ್ಲಿ ಹಳೇಬೀಡು ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸುರೇಶ್‌ ಸಿ.ಎಸ್‌., ಸರ್ದಾರ್‌ ಪಾಷಾ, ದೇವರಾಜು, ಸಿಬ್ಬಂದಿ ಜಮೃದ್ ಖಾನ್‌, ನಂದೀಶ್‌, ಪುನೀತ್‌, ಜಗದೀಶ್‌, ಹನುಮಂತ ವಡ್ಡರ, ಶಿವಸ್ವಾಮಿ, ಮಂಜುನಾಥ, ಕಿರಣ, ಶಿವಕುಮಾರ್, ಪೀರ್‌ಖಾನ್‌, ಸೋಮಶೇಖರ್‌ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

ಎಎಸ್ಪಿ ಡಾ.ನಂದಿನಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್ ಇದ್ದರು.

12 ಕರುಗಳ ರಕ್ಷಣೆ
ಹಾಸನ:
ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ 12 ಗಂಡು ಕರುಗಳನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಹರಿರಾಂ ಶಂಕರ್ ಹೇಳಿದರು.

ಗುರುವಾರ ಹೊಳೆನರಸೀಪುರ ತಾಲ್ಲೂಕು ದೊಡ್ಡಳ್ಳಿ ಬಾರೆಸಂತೆ ಗ್ರಾಮದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಕರುಗಳ ಸಾಗಣೆ ಮಾಡುತ್ತಿರುವುದಾಗಿ ಹಳ್ಳಿ ಮೈಸೂರು ಪೊಲೀಸರಿಗೆ ಮಾಹಿತಿ ದೊರೆತಿತ್ತು. ಡಿವೈಎಸ್ಪಿ ಪಿ.ಕೆ. ಮುರಳೀಧರ, ಸರ್ಕಲ್‌ ಇನ್‌ಸ್ಪೆಕ್ಟರ್‌ ಪ್ರದೀಪ್‌ ಮಾರ್ಗದರ್ಶನದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಅಶ್ವಿನಿ ನಾಯ್ಕ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

ಭರತ್ ಕೆ.ಆರ್., ಗುರುರಾಜ್, ಗಣೇಶ್, ವರದರಾಜು ಬಂಧಿತ ಆರೋಪಿಗಳು. ಬಂಧಿತರಿಂದ ಟಾಟಾ ಏಸ್‌ ಗೂಡ್ಸ್‌ ವಾಹನ ವಶಕ್ಕೆ ಪಡೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT