ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಸಂಚಾರ

ಪಾಳ್ಯದಿಂದ ಮಾರನಹಳ್ಳಿವರೆಗೆ ಹದಗೆಟ್ಟ ರಸ್ತೆ: ಮಾರ್ಗಮಧ್ಯೆ ನಿತ್ಯ ಕೆಟ್ಟು ನಿಲ್ಲುವ ವಾಹನಗಳು
Last Updated 18 ಅಕ್ಟೋಬರ್ 2021, 7:28 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಪಾಳ್ಯದಿಂದ ಮಾರನಹಳ್ಳಿ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದಕ್ಕೆ ಸಾಧ್ಯವಾಗದ ಮಟ್ಟಿಗೆ ಗುಂಡಿ ಬಿದ್ದು ಹಾಳಾಗಿದೆ.

ರಾಜಧಾನಿ ಹಾಗೂ ಕರಾವಳಿಗೆ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಲವು ವರ್ಷಗಳಿಂದಲೂ ರಸ್ತೆ ಹದಗೆಟ್ಟಿದ್ದರೂ ದುರಸ್ತಿಯಾಗಿಲ್ಲ. ಪ್ರಸಕ್ತ ವರ್ಷ ಜನವರಿಯಿಂದಲೂ ಪ್ರತಿ ತಿಂಗಳು ಮಳೆ ಆಗುತ್ತಿರುವುದರಿಂದ ಗುಂಡಿ ಬಿದ್ದ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೂ ಸಾಕಷ್ಟು ಸಮಸ್ಯೆಯಾಗಿದೆ.

ಗುಂಡಿಯಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ. ಹಲವು ಬಾರಿ ವಾಹನಗಳು ಮಾರ್ಗ ಮಧ್ಯೆ ಕೆಟ್ಟು ನಿಂತು, ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣ ನರಕಯಾತನೆಯಾಗಿದೆ.

ಹಾಸನ–ಬಂಟ್ವಾಳ ನಡುವೆ ಚತುಷ್ಪಥ ಕಾಮಗಾರಿ ಆಮೆ ನಡಿಗೆ ಆಗಿರುವುದು ರಸ್ತೆ ತೀವ್ರ ಪ್ರಮಾಣದಲ್ಲಿ ಹಾಳಾಗುವುದಕ್ಕೆ ಪ್ರಮುಖ ಕಾರಣವಾಗಿದೆ. 2017ರಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನದಿಂದ–ಮಾರನಹಳ್ಳಿ ವರೆಗಿನ ಕಾಮಗಾರಿಯ ಗುತ್ತಿಗೆಯನ್ನು ಐಸೋಲೆಕ್ಸ್‌ ಕಂಪನಿಗೆ, ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಎಲ್‌ ಆ್ಯಂಡ್‌ ಟಿ ಕಂಪನಿಗೆ ನೀಡಿತ್ತು.

ಆದರೆ, ಸದರಿ ಕಂಪನಿ ದಿವಾಳಿ ಆಗಿ ರಾಜ್‌ಕಮಲ್‌ ಕಂಪನಿಗೆ ಸಹ ಗುತ್ತಿಗೆ ನೀಡಲಾಗಿತ್ತು. ಸಕಲೇಶಪುರ ಪಟ್ಟಣದ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಹೇಮಾವತಿ ನದಿಗೆ ಸೇತುವೆ ನಿರ್ಮಾಣಕಾಮಗಾರಿಯೇ ಇನ್ನೂ ಶುರುವಾಗಿಲ್ಲ.ದೋಣಿಗಾಲ್‌ನಲ್ಲಿ 200 ಅಡಿಗೂ ಹೆಚ್ಚು ಆಳದ ಕಂದಕಕ್ಕೆ ತಡೆಗೋಡೆನಿರ್ಮಾಣ ಮಾಡಿಲ್ಲ.

ಹಾಕಿದ್ದ ಮಣ್ಣೆಲ್ಲವೂ ಕೊಚ್ಚಿ ಹೋಗಿ, ಈಗಿರುವ ರಸ್ತೆಯೂ ಕುಸಿದು ಈ ಮಾರ್ಗದಲ್ಲಿತಿಂಗಳುಗಟ್ಟಲೆ ವಾಹನಗಳ ಸಂಚಾರ ಬಂದ್‌ ಆಗಿ ಪ್ರಯಾಣಿಕರು ನರಕ ಯಾತನೆ ಅನುಭವಿಸಿದರೆ, ಸರಕು ಸಾಗಣೆ ಲಾರಿಗಳ ಸಂಚಾರ ಸ್ಥಗಿತಗೊಂಡು ಭಾರಿ ನಷ್ಟ ಅನುಭವಿಸಿವೆ.

‘ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ಎನ್‌ಎಚ್‌ಎಐ ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ರಸ್ತೆ ದುರಸ್ತಿ ಮಾಡಿಲ್ಲ. ಇದರಿಂದ ಪ್ರಯಾಣಿಕರಿಗೆ ನರಕಯಾತನೆ ಉಂಟಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಮೊದಲಿನಿಂದಲೂ ಮಲೆನಾಡು ಭಾಗವನ್ನು ಕಡೆಗಣಿಸಲಾಗುತ್ತಿದೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಹೆದ್ದಾರಿ ಕಾಮಗಾರಿಗೆ ಗುಣಮಟ್ಟದ ಮಣ್ಣು ಬಳಸಬೇಕು. ಸುತ್ತಮುತ್ತಲಿನ ಕೆರೆಯಲ್ಲಿ ತುಂಬಿದ ಹೂಳನ್ನೇ ತಂದು ರಸ್ತೆಗೆ ಉಪಯೋಗಿಸಲಾಗುತ್ತಿದೆ. ಕಳಪೆ ಕಾಮಗಾರಿಗೆ ಅವಕಾಶ ನೀಡಿದರೆ ಬೇಗ ರಸ್ತೆ ಹಾಳಾಗುತ್ತದೆ. ಜನತ ತೆರಿಗೆ ಹಣವನ್ನು ನೀರಿಗೆ ಹಾಕಿದಂತೆ ಆಗುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಬೈರಾಪುರ ನಿವಾಸಿ ಬಾಲು ಮನವಿ ಮಾಡಿದರು.

‘ಮೂರು ವರ್ಷದಿಂದ ವ್ಯವಸ್ಥಿತವಾಗಿ ಕಾಮಗಾರಿ ನಡೆಯುತ್ತಿಲ್ಲ. ಸರ್ಕಾರ ಅಧಿಕಾರಿಯೊಬ್ಬರನ್ನು ಉಸ್ತುವಾರಿಗೆ ನೇಮಿಸಬೇಕು. ಹಲವು ಸಂಘಟನೆಗಳು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಲವು ತಮ್ಮ ಮನೆ ಮತ್ತು ಜಮೀನು ಕಳೆದುಕೊಂಡಿದ್ದಾರೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ, ಸಾರ್ಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಹೊಸಗದ್ದೆ ನಿವಾಸಿ ಗೋಪಾಲ್‌ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT