ಗುರುವಾರ , ಜನವರಿ 20, 2022
15 °C
ತಾಲ್ಲೂಕು ಆಡಳಿತ ವಿರುದ್ಧ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ

ಹಿಂದೂ ಧರ್ಮ ಸಂರಕ್ಷಣೆಗೆ ಮುಂದಾಗಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ರಾಷ್ಟ್ರೀಯತೆ, ಹಿಂದುತ್ವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಅವಹೇಳನಕಾರಿ ಕೆಲ ಘೋಷಣೆಗಳು ಮತ್ತು ಸನ್ನಿವೇಶಗಳು ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಕೆಲ ಮುಸ್ಲಿಮರಿಂದ ನಡೆದಿವೆ. ಆದರೂ ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪಿ.ಪಿ. ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರತಿಭಟನಕಾರ ರನ್ನುದ್ದೇಶಿಸಿ ಕಡೂರು ತಾಲ್ಲೂಕು ಯಳನಡು ಮಠದ ಪೀಠಾಧಿಪತಿ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಎಲ್ಲಿಯವರೆಗೆ ಸಂಘಟನೆ ಆಗುವುದಿಲ್ಲವೋ ಅಲ್ಲಿಯ ವರೆಗೂ ಒಗ್ಗಟ್ಟು ಸಾಧ್ಯವಿಲ್ಲ. ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರ ಶಾಹಿಗಳಾಗಲಿ ಅಧಿಕಾರಕ್ಕಾಗಿ ದೇಶದ ಧ್ಯೇಯೋದ್ದೇಶಗಳನ್ನು ಬಲಿ ಕೊಡಬಾರದು’ ಎಂದು ಹೇಳಿದರು.

‘ಹಿಂದೂ ಧರ್ಮ ಭದ್ರವಾಗಿರುವುದರಿಂದ ಭಾರತ ದೇಶ ಸುಭದ್ರವಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ದೇಶದ ಭದ್ರತೆಗೆ ಒತ್ತು ನೀಡಬೇಕು. ಒಗ್ಗಟ್ಟು ಸಮಾಜಕ್ಕೆ ದಾರಿದೀಪವಾಗಲಿದೆ. ಪ್ರತಿಯೊಬ್ಬರಿಗೂ ಧರ್ಮದ ತಳಹದಿಯ ಜೀವನ ಅತ್ಯಗತ್ಯವಾಗಿದೆ. ಅದಕ್ಕಾಗಿ ಧರ್ಮದ ಸಂರಕ್ಷಣಗೆ ಮುಂದಾಗಿ’ ಎಂದರು.

‘ಮತಾಂತರಕ್ಕೆ ಬಲವಂತವಾಗಿ ಯಾರನ್ನೂ ಒತ್ತಾಯಿಸಬಾರದು, ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಮತಾಂತರ ಗೊಳ್ಳುವುದು ಕಡಿಮೆ. ದೇಶ, ಧರ್ಮ, ನಾಡು ಉಳಿಯ ಬೇಕೆಂದರೆ ಹೋರಾಟ ಅನಿವಾರ್ಯ, ಸತ್ತ ಆನೆಯಂತಿರುವುದಕ್ಕಿಂತ ಬುಸುಗುಡುವ ಹಾವಿನಂತಾದರೂ ಜೀವಿಸಬೇಕು. ಇಂದಿನ ಪ್ರತಿಭಟನಾ ಮೆರವಣಿಗೆಯಿಂದ ಯಾರಿಗೆ ಯಾವ ಸಂದೇಶ ರವಾನೆ ಆಗಬೇಕೋ ಅದು ಆದರೆ ಸಾಕು’ ಎಂದರು.

ವಿಶ್ವ ಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ‘ಸ್ಥಳೀಯ ಆಡಳಿತದ ವೈಫಲ್ಯದಿಂದ ತಾಲ್ಲೂಕಿನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆಯಾಗುವಂತಹ ಸನ್ನಿವೇಶಗಳು ಘಟಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ನಮ್ಮ ಪರಿಸ್ಥಿತಿ ಏನು’ ಎಂದು ಪ್ರಶ್ನಿಸಿದರು.

ನಗರದ ಹಾಸನ ರಸ್ತೆ, ಪೇಟೆಬೀದಿ, ಶಾನುಭೋಗರ ರಸ್ತೆ, ಗ್ರಂಥಾಲಯದ ರಸ್ತೆ, ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಸಾಗಿ ಬಂದ ಪ್ರತಿಭಟನಾ ಮೆರವಣಿಗೆ ಪಿ. ಪಿ. ವೃತ್ತದಲ್ಲಿ ಜಮಾ ಯಿಸಿ ತಾಲ್ಲೂಕು ಆಡಳಿತದ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು