ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬಂದ್ ಮಾಡದಂತೆ ಹಳ್ಳಿಗರ ಆಗ್ರಹ

ಪೂರ್ವಜರ ಕಾಲದ ರಸ್ತೆ ಉಳಿವಿಗೆ ಕೆಲ್ಲೆಂಗೆರೆ ಸುತ್ತಲಿನ ಗ್ರಾಮಸ್ಥರ ಪ್ರತಿಭಟನೆ
Last Updated 25 ಆಗಸ್ಟ್ 2021, 5:01 IST
ಅಕ್ಷರ ಗಾತ್ರ

ಅರಸೀಕೆರೆ: ಸುಮಾರು 8 ಗ್ರಾಮಗಳಿಂದ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಸುಗಮವಾಗಿ ಸಂಚರಿಸಲು ಇರುವ ಏಕೈಕ ರಸ್ತೆಯನ್ನು ಮುಚ್ಚದಂತೆ ಒತ್ತಾಯಿಸಿ ಕೆಲ್ಲೆಂಗೆರೆ, ಚಲ್ಲಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಗರ ಹೊರವಲಯದ ಕೆರೆ ಕೋಡಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಲ್ಲೆಂಗೆರೆ ಕುಮಾರ್ ಮಾತನಾಡಿ, ‘ಈಗ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ನಗರ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಪೂರ್ವಜರ ಕಾಲದ ರಸ್ತೆಯನ್ನು ಮುಚ್ಚುವುದರಿಂದ ಕೆಲ್ಲೆಂಗೆರೆ, ಚಲ್ಲಾಪುರ, ಗೊಲ್ಲರಹಟ್ಟಿ, ಈಡಿಗರ ಹಟ್ಟಿ, ಅಜ್ಜನಹಳ್ಳಿ, ತಿಪ್ಪನಹಳ್ಳಿ, ನಾಗೇನಹಳ್ಳಿ, ಕುಣಗಟ್ಟೇಹಳ್ಳಿ, ಹೊನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಸಂಚರಿಸಲು ರಸ್ತೆ ಇಲ್ಲದಂತಾಗುತ್ತದೆ’ ಎಂದರು.

‘ಈ ಎಲ್ಲ ಗ್ರಾಮಗಳಿಂದ ನಿತ್ಯ ನಗರಕ್ಕೆ ಸಂಚರಿಸುವ ಗಾರ್ಮೆಂಟ್ಸ್ ಹಾಗೂ ಇನ್ನಿತರ ಕೂಲಿ ಕಾರ್ಮಿಕರು ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತದೆ. ಆದ್ದರಿಂದ ಈ ರಸ್ತೆಯನ್ನು ಮುಚ್ಚದೇ ಹಾಗೇ ಉಳಿಸಬೇಕು’ ಎಂದು ಒತ್ತಾಯಿಸಿದರು.

‘ಈ ಸಂಪರ್ಕ ರಸ್ತೆಗೆ ಬದಲು ಬಂಡಿಹಳ್ಳಿ ಗೇಟ್ ಬಳಿಯಿಂದ ಪರ್ಯಾಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿದೆ, ಇದು ಮಕ್ಕಳು ಮತ್ತು ಮಹಿಳೆಯರಿಗೆ ಹಾಗೂ ರಾತ್ರಿ ವೇಳೆ ಸಂಚರಿಸಲು ಸುರಕ್ಷಿತವಲ್ಲ ಜತೆಗೆ 3 ಕಿ.ಮೀ. ಹೆಚ್ಚು ದೂರ ಓಡಾಡುವ ಪರಿಸ್ಥಿತಿ ಇದೆ’ ಎಂದು ಹೇಳಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು, ‘ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ಕೆಲ್ಲೆಂಗೆರೆ ಮತ್ತು ಚಲ್ಲಾಪುರ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT