ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಕೊಡುವ ಮತ ಬಿಜೆಪಿಗೆ: ಸುರ್ಜೇವಾಲ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ
Last Updated 4 ಮಾರ್ಚ್ 2023, 4:35 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌ಗೆ ಕೊಡುವ ಒಂದೊಂದು ಮತವೂ ಬಿಜೆಪಿಗೆ ಹಾಕಿದಂತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮೈಸೂರು ಪಾಲಿಕೆಯಲ್ಲಿ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಿತು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದರು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಅದರೆ, ನಮ್ಮನ್ನು ಬೆಂಬಲಿಸಲಿಲ್ಲ. ಹಾಗಾಗಿ ಬಿಜೆಪಿಯ ನಾಲ್ಕನೇ ಅಭ್ಯರ್ಥಿ ಗೆಲ್ಲುವಂತಾಯಿತು ಎಂದು ಹೇಳಿದರು.

ಜೆಡಿಎಸ್‌ನಲ್ಲಿ‌ ಕುಟುಂಬದವರಿಗೇ ಟಿಕೆಟ್ ಕೊಡುವುದರಲ್ಲಿ ನಿರತರಾಗಿದ್ದಾರೆ. ಮಂಡ್ಯ, ಹಾಸನ ಜಿಲ್ಲೆಯ ಅರ್ಧದಷ್ಟು ಸೀಟುಗಳು ಅವರ ಕುಟಂಬಕ್ಕೆ ಮೀಸಲಾಗಿವೆ. ರೈತರಿಗೆ ತೊಂದರೆ ಕೊಡುವ‌ ಕೆಲಸವನ್ನು ಜೆಡಿಎಸ್ ಮುಖಂಡರು ಮಾಡುತ್ತಿದ್ದಾರೆ ಎಂದರು.

'ನಾವು ಉಳುವವನೇ ಹೊಲದೊಡೆಯ ಎಂಬ ಕಾನೂನು ಮಾಡಿದ್ದರೆ, ಬಿಜೆಪಿ, ಜೆಡಿಎಸ್‌ನವರು ಉಳ್ಳವನೇ ಭೂಮಿಯ ಒಡೆಯ ಎಂದು ಮಾಡಿದ್ದಾರೆ’ ಎಂದು ಟೀಕಿಸಿದರು.

ಬಸವರಾಜ ಬೊಮ್ಮಾಯಿ ಹೋದಲ್ಲಿ ಜನರು ಶೇ 40 ಕಮಿಷನ್ ಸರ್ಕಾರದ ಮುಖ್ಯಮಂತ್ರಿ ಎಂದೇ‌ ಗುರುತಿಸುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಪ್ರಧಾನಿಗೆ ದೂರು ನೀಡಿದ್ದಾರೆ. ಆದರೆ, 8 ಬಾರಿ ರಾಜ್ಯಕ್ಕೆ ಬಂದಿರುವ‌ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಬೆಳಗಾವಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ‌ ಸಂತೋಷ್ ಪಾಟೀಲ ಮನೆಗೆ ಹೋಗಿ‌ ಸಾಂತ್ವನ ಹೇಳುವ‌ ಕೆಲಸ ಮಾಡಿಲ್ಲ. ಆದರೆ, ನಾವು ಕಾಂಗ್ರೆಸ್ ಮುಖಂಡರು ಅವರ ಮನೆಗೆ ಹೋಗಿ‌ ಸಾಂತ್ವನ ಹೇಳಿದ್ದೇವೆ. ಬಿಜೆಪಿ ಸರ್ಕಾರ ತಮ್ಮ ಕಾರ್ಯಕರ್ತರೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದೊಡ್ಡಿದೆ. ಬಿಜೆಪಿ ಯಾರನ್ನೂ ಬಿಡುತ್ತಿಲ್ಲ ಎಂದು ಟೀಕಿಸಿದರು.

ಇದೀಗ ಮೈಸೂರು ಸ್ಯಾಂಡಲ್ ‌ತಯಾರಿಸುವ‌ ನಿಗಮದಲ್ಲೂ ಭ್ರಷ್ಟಾಚಾರ‌ ನಡೆಸಲಾಗುತ್ತಿದೆ. ಅವರ ಮನೆಯಲ್ಲಿ‌₹6 ಕೋಟಿ ನಗದು ಸಿಕ್ಕಿದೆ. ₹20 ಬೆಲೆಯ ಸೋಪಿನ ಕಂಪನಿಯಲ್ಲಿ ಇಷ್ಟೊಂದು ಹಣ ಮಾಡಿದ್ದಾರೆ ಎಂದರೆ, ಎಷ್ಟೊಂದು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂಬುದನ್ನು ಅಂದಾಜಿಸಬಹುದು ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಬಂಗಾರಪ್ಪ ಅವರ ಕಾಲದಲ್ಲಿ ಎಲ್ಲ ರೈತರಿಗೆ ಉಚಿತ ವಿದ್ಯುತ್ ಒದಗಿಸಿದ್ದಾರೆ. ಬಿಜೆಪಿಯವರು ಬೆಲೆ ಏರಿಕೆ, ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ. ಹಾಸನದಲ್ಲಿ ಬದಲಾವಣೆ ತರಬೇಕು. ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಮ್ಮ ಮಡಿಲಿಗೆ ಹಾಕುತ್ತೇವೆ. ಅವರನ್ನು ಗೆಲ್ಲಿಸಬೇಕು. ಕೊಟ್ಟ ಮಾತು ಉಳಿಸಿಕೊಳ್ಳುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ಸಾವಿನಲ್ಲಿ ರಾಜಕೀಯ ಮಾಡುವ ಬಿಜೆಪಿ ತೊಡೆದು ಹಾಕದೇ ಇದ್ದಲ್ಲಿ ಮಾನವೀಯತೆಯೇ ಇಲ್ಲದಂತಾಗುತ್ತದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಮಾಜಿ ಸಚಿವ ಬಿ.ಶಿವರಾಂ, ರಾಜ್ಯಸಭೆ ಮಾಜಿ ಸದಸ್ಯ ಜವರೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಇ.ಎಚ್‌. ಲಕ್ಷ್ಮಣ, ಜಿಲ್ಲಾ ವಕ್ತಾರ ದೇವರಾಜೇಗೌಡ, ಮುಖಂಡರಾದ ಪುಟ್ಟೇಗೌಡ, ಗೋಪಾಲಸ್ವಾಮಿ, ಬಾಗೂರು ಮಂಜೇಗೌಡ, ಕೃಷ್ಣೇಗೌಡ, ರಾಜಶೇಖರ್, ತಾರಾ ಚಂದನ್, ಲಲಿತಮ್ಮ, ದಿನೇಶ್, ರಂಜಿತ್, ವಿಜಿಕುಮಾರ್, ಸಮದ್ ಇದ್ದರು.

ಜನರ ಧ್ವನಿಯಾಗಿ ಕಾಂಗ್ರೆಸ್

ಚುನಾವಣೆಗೆ ಇನ್ನು ಎರಡು ತಿಂಗಳಿದೆ. ಎರಡೂವರೆ ವರ್ಷದಿಂದ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ, ಜನಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ ಎಂದು ಸಂಸದ ಡಿ.ಕೆ‌. ಸುರೇಶ್ ಹೇಳಿದರು.

ರಾಜ್ಯ ಸರ್ಕಾರ ಶೇ 40 ಕಮಿಷನ್ ಸರ್ಕಾರ. ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ನಿಯಂತ್ರಣದಲ್ಲಿ ಇಡಲಾಗಿತ್ತು. ಆದರೆ, ಈಗ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಹಣ ಲೂಟಿ ಹೊಡೆಯುವುದು ಪ್ರಧಾನಿಗೆ ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಅದಕ್ಕಾಗಿ ಸುರ್ಜೇವಾಲಾ ನೇತೃತ್ವದಲ್ಲಿ ಪ್ರತಿ ಜಿಲ್ಲೆಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಅದನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT