ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯ ಪುಷ್ಪದಂತ ಸಾಗರ ಮಹಾರಾಜರಿಗೆ ಸ್ವಾಗತ

Last Updated 23 ಡಿಸೆಂಬರ್ 2018, 17:13 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: 2300 ವರ್ಷಗಳ ಹಿಂದೆ ಆಚಾರ್ಯ ಶೃತಕೇವಲಿ ಭದ್ರಬಾಹು ಮುನಿಗಳು ಆಗಮಿಸಿದಾಗಿನಿಂದ ಇಂದಿನವರೆಗೂ ಶ್ರವಣಬೆಳಗೊಳ ಕ್ಷೇತ್ರ ನಿರಂತವಾಗಿ ಶ್ರಮಣರ ಆಗಮನದ ಪವಿತ್ರ ಕ್ಷೇತ್ರವಾಗಿ ಪರಿವರ್ತನೆ ಹೊಂದಿದೆ ಎಂದು ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ಹೇಳಿದರು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಚಾರ್ಯ ಪುಷ್ಪದಂತಸಾಗರ ಮಹಾರಾಜರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಆಚಾರ್ಯ ಪುಷ್ಪದಂತಸಾಗರ ಮಹಾರಾಜರು ಆಗಮ, ಲೌಕಿಕ ಲೋಕೋದ್ಧಾರಕ್ಕೆ ಪ್ರಭಾವ ಬೀರಿದವರಾಗಿದ್ದು, ಇಂದು ಅವರು ಕ್ಷೇತ್ರಕ್ಕೆ ಪುನಾರಾಗಮನವಾಗಿ, ದರ್ಶನಲಾಭ ದೊರೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇವರು ಸಮಾಜದಲ್ಲಿ ಅನೇಕ ಕ್ರಾಂತಿ ಮಾಡುವಂತಹ ತ್ಯಾಗಿಗಳಾದ ತರುಣ್‌ಸಾಗರ ಮಹಾರಾಜರು, ಪ್ರಜ್ಞಾಸಾಗರ, ಪ್ರಸನ್ನಸಾಗರ ಮಹಾರಾಜ ಮುನಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಕಟು ಪ್ರವಚನಗಳಿಂದ ಪ್ರಖ್ಯಾತಿ ಪಡೆದಿದ್ದ ತರುಣ್‌ ಸಾಗರ ಮಹಾರಾಜರ ಪ್ರವಚನಗಳು ಎಲ್ಲಾ ಪತ್ರಿಕೆಗಳಲ್ಲಿಯೂ ಉಲ್ಲೇಖಗೊಂಡಿವೆ ಎಂದು ತಿಳಿಸಿದರು.

2018ರಲ್ಲಿ ಜರುಗಿದ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದಲ್ಲಿ ಸಾನ್ನಿಧ್ಯ ವಹಿಸಿ ತಮಿಳುನಾಡಿನ ಚೆನ್ನೈಗೆ ತೆರಳಿ ಚಾತುರ್ಮಾಸ ಆಚರಿಸಿ ಪುನಃ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇಲ್ಲಿಂದ 2019ರ ಫೆಬ್ರುವರಿಯಲ್ಲಿ ಧರ್ಮಸ್ಥಳದಲ್ಲಿ ಜರುಗಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಡಿ.ವೀರೇಂದ್ರ ಹೆಗ್ಗಡೆಯವರ ಆಗ್ರಹದ ಮೇರೆಗೆ ತೆರಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಮಹಾವೀರ ನಗರದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಯಿತು. ಮೆರವಣಿಗೆಯು ವಿಂಧ್ಯಗಿರಿ ಮುಂಭಾಗದಲ್ಲಿ ಆಗಮಿಸಿದಾಗ ಚಾರುಕೀರ್ತಿ ಸ್ವಾಮೀಜಿ ಪುಷ್ಪವೃಷ್ಠಿ ಮಾಡಿ ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ಕಲಶ ಹೊತ್ತ ಮಹಿಳೆಯರು, ಚಿಟ್ಟಿಮೇಳ, ಮೈಸೂರು ಬ್ಯಾಂಡ್‌ಸೆಟ್‌, ಮಂಗಲವಾದ್ಯ, ಧರ್ಮಧ್ವಜ ಹಿಡಿದ ಬಾಲಕರು ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಆಚಾರ್ಯರಿಗೆ ಪಾದಪೂಜೆ ನೆರವೇರಿಸಿ ಅರ್ಘ್ಯಗಳನ್ನು ಅರ್ಪಿಸಿ ಆರತಿ ಬೆಳಗಿದರು. ಪ್ರಜ್ಞಾಸಾಗರ ಮಹಾರಾಜರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಆಚಾರ್ಯ ವಿದ್ಯಾನಂದ ಸಾಗರ ಮಹಾರಾಜರು, ಅಮೋಘಕೀರ್ತಿ ಮಹಾರಾಜರು, ಅಮರಕೀರ್ತಿ ಮಹಾರಾಜರು, ಗಣಿನಿ, ಮಾತಾಜಿಯವರು, ಸಂಘಸ್ಥ ತ್ಯಾಗಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT