ಶುಕ್ರವಾರ, ನವೆಂಬರ್ 22, 2019
27 °C

ಯಡಿಯೂರಪ್ಪ ಮನೆಗೆ ನೆಂಟಸ್ತಿಕೆ ಮಾಡೋಕೆ ಹೋಗ್ಬೇಕಿತ್ತೇನ್ರಿ?: ದೇವೇಗೌಡ ಆಕ್ರೋಶ

Published:
Updated:
prajavani

ಹಾಸನ: ‘ನಾನು ಯಡಿಯೂರಪ್ಪ ಮನೆಗೆ ಸಂಬಂಧ ಮಾಡೋಕೆ ಹೋಗ್ಬೇಕಿತ್ತೇನ್ರಿ? ರಾಜಕೀಯ ಮಾಡೋದು ನನಗೆ ಗೊತ್ತಿದೆ’ ಎಂದು  ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿಕಾರಿದರು.

‘ಸಿದ್ದರಾಮಯ್ಯ ಆಗಲೀ, ಯಡಿಯೂರಪ್ಪ ಆಗಲೀ, ಅವರ ಮನೆಗೆ ನಾನೇನು ನೆಂಟಸ್ತಿಕೆ ಮಾಡೋಕೆ ಹೋಗ್ಬೇಕಿತ್ತಾ? ಆದರೆ, ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಬೇರೆ  ರೀತಿ ಬಿಂಬಿಸಲಾಗುತ್ತಿದೆ. ಮಾಧ್ಯಮಗಳಿಗೆ ಒಂದು ಸಾಮಾನ್ಯ ಜ್ಞಾನ ಬೇಡವೆ’ ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದ ಗೌಡರು, ‘ನಾನು ಹೋರಾಟದಿಂದ ಬಂದವನು. ಹೋರಾಟ ಮಾಡೋದು ನನಗೆ ಗೊತ್ತಿದೆ’ ಎಂದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ನಾನು ಏನೋ ಮಾತನಾಡಿದ್ರೆ, ದೊಡ್ಡ ರಾಜಕೀಯ ಅಂತ, ದೃಶ್ಯ ಮಾಧ್ಯಮಗಳಲ್ಲಿ ಏನೇನೋ ತೋರಿಸುತ್ತಿದ್ದೀರಾ’ ಎಂದು ಅಸಮಾಧಾನ ಹೊರ ಹಾಕಿದರು.

ಪ್ರಸಕ್ತ ರಾಜಕೀಯ ಚರ್ಚೆ, ಚಟುವಟಿಕೆ ಬಗ್ಗೆ ಕಿಡಿ ಕಾರಿದ ಗೌಡರು, ಸಚಿವ ಜಗದೀಶ್ ಶೆಟ್ಟರ್ ಅವರು ಬಿಜೆಪಿ-ಜೆಡಿಎಸ್ ನಡುವೆ ಮರು ಮದುವೆ ಕುರಿತ ಹೇಳಿಕೆಗೂ ತುಸು ಸಿಟ್ಟಾದರು.
‘ಜಗದೀಶ್ ಶೆಟ್ಟರ್ ಅದೇನೋ ಮರು ಮದುವೆ ,ಬೇಳೆ ಕಾಳ್ ಎಂದಿದ್ದಾರೆ. ಆದರೆ, ನಾನು ಈ ವಯಸ್ಸಿನಲ್ಲಿ ಯಾರೊಂದಿಗೂ ಸಂಬಂಧ ಮಾಡೋಕೆ ಹೋಗುವ ಅಗತ್ಯವಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಖ ಮತ್ತೆ ನೋಡ್ತೀನಾ ಅಂತ ಸಿಟ್ಟಾದರು.  ಆರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆ ಇದೆ’ ಎಂದು ಉತ್ತರಿಸಿದರು.

ವರ್ಗಾವಣೆ ನಂತರವೂ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿರುವ ಯಾದಗಿರಿ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಮತ್ತೆ ಕೆಂಡಾಮಂಡಲರಾದ ಗೌಡರು, ‘ಅವರ ಮೇಲೆ ಸರ್ಕಾರ ಕ್ರಮ ಜರುಗಿಸದೇ ಹೋದರೆ ಸಿ.ಎಂ ಮನೆ ಮುಂದೆ ಧರಣಿ ಕೂರುತ್ತೇನೆ ಎಂದಿದ್ದೆ. ಆದರೆ ಟಿವಿಗಳಲ್ಲಿ ಅದೇನೇನೋ ತೋರ್ಸಿದ್ದೀರಾ’ ಎಂದು ಮತ್ತೆ ಗರಂ ಆದರು. ‘ನಾನು ಧರಣಿಗೆ ಕೂರುವೆ ಎಂದ ಕೂಡಲೇ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿದ್ದಾರೆ. ಅವನ್ಯಾವನ್ರೀ ಜನ್ರ ಬಾಯಿಗೆ ಗನ್ ಇಟ್ಟು ಹೆದರಿಸುತ್ತಾನಂತೆ’ ಎಂದು ಪಿ ಎಸ್ ಐ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)