ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ ಸ್ಪರ್ಧಿಸಿದ ಕಡೆ ಹೊಂದಾಣಿಕೆ ಇಲ್ಲ’

ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅಭಿಮತ
Last Updated 6 ಡಿಸೆಂಬರ್ 2021, 16:35 IST
ಅಕ್ಷರ ಗಾತ್ರ

ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಈ ಬಾರಿ ಬಿಜೆಪಿ ಗೆಲುವು ಖಚಿತ ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜೆಡಿಎಸ್ ಕೇವಲ ಆರು ಕಡೆ ಮಾತ್ರ ಸ್ಪರ್ಧೆ ಮಾಡಿದೆ. ಆದ್ದರಿಂದ ಜೆಡಿಎಸ್ಅಭ್ಯರ್ಥಿಗಳಿಲ್ಲದ ಕಡೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಆದರೆ, ಜೆಡಿಎಸ್ ಅಭ್ಯರ್ಥಿಗಳಿರುವ ಕಡೆ ಹೊಂದಾಣಿಕೆ ಇಲ್ಲ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಸ್ತೆ ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಗೌರವ ಧನ ಹೆಚ್ಚಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಶೇ 61 ರಷ್ಟು ಶೌಚಾಲಯಗಳನ್ನು ನಿರ್ಮಿಸಿದೆ ಎಂದರು.

ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ಸಕಲೇಶಪುರ ಕ್ಷೇತ್ರದಲ್ಲಿ ನಾನು ಕಟ್ಟಿದ ಹುತ್ತಕ್ಕೆ ಹಾವುಗಳು ಬಂದು ಸೇರಿವೆ. ಪರಿಷತ್ ಗೆ ಆಯ್ಕೆ ಮಾಡಿದರೆ ಮಲೆನಾಡು ಭಾಗದಲ್ಲಿರುವ ಎಲ್ಲಾ ಕಾಡಾನೆಗಳನ್ನು ಮೂರು ತಿಂಗಳೊಳಗೆ ಸ್ಥಳಾಂತರಿಸಲು ಸಿದ್ಧ’ ಎಂದು ಹೇಳಿದರು.

‘ಜೆ.ಪಿ ಚಳವಳಿ, ತುರ್ತು ಪರಿಸ್ಥಿತಿ ಸಂದರ್ಭ, ದಲಿತ ಚಳವಳಿ, ರೈತ ಚಳವಳಿಗಳಲ್ಲಿ ಭಾಗವಹಿಸಿ 8ಬಾರಿ ಜೈಲಿಗೆ ಹೋಗಿದ್ದೇನೆ. ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ, ಕಾಡಾನೆ ಸಮಸ್ಯೆ, ಕಾಫಿ, ಭತ್ತ ಬೆಳೆಗಾರರ ಬಗ್ಗೆ ಚಕಾರ ಎತ್ತದವರು ಮಲೆನಾಡಿನ ಜನರ ಮತ ಕೇಳುತ್ತಿದ್ದಾರೆ’ ಎಂದರು.

‘ಜೆಡಿಎಸ್ ಪಕ್ಷದಲ್ಲಿ ರಾಜೇಗೌಡ, ಕರೀಗೌಡ, ಕಣದಾಳು ಮಂಜೇಗೌಡ ಅವರಂತಹ ಹಿರಿಯ ಮುಖಂಡರನ್ನು ಕಡೆಗಣಿಸಿ ತಮ್ಮ ಕುಟುಂಬದ 8ನೇ ಸದಸ್ಯನನ್ನು ವಿಧಾನ ಪರಿಷತ್ ಗೆ ಕಳುಹಿಸಲು ಹೊರಟಿದ್ದಾರೆ. ಅವರಿಗೆ ಕಾನೂನು ಹಾಗೂ ಸಂವಿಧಾನದ ಬಗ್ಗೆ ಕಿಂಚಿತ್ತು ಗೌರವ ಇಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್, ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಈಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT