ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ | ವಿದ್ಯಾರ್ಥಿಗಳು ಜ್ಞಾನ ಜ್ಯೋತಿಗಳಾಗಲಿ -ಶ್ರೀರಾಮುಲು

ರಾಮೇನಹಳ್ಳಿ: ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಉದ್ಘಾಟಿಸಿದ ಸಚಿವ
Last Updated 14 ಮಾರ್ಚ್ 2021, 2:36 IST
ಅಕ್ಷರ ಗಾತ್ರ

ಅರಸೀಕೆರೆ: ವಿದ್ಯಾರ್ಥಿಗಳು ಜ್ಞಾನ ಜ್ಯೋತಿಗಳಾಗಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ, ಸಂಸ್ಕಾರ ಹೊಂದಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕಣಕಟ್ಟೆ ಹೋಬಳಿಯ ರಾಮೇನಹಳ್ಳಿ ಗ್ರಾಮದ ಸಮೀಪ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಶಿಕ್ಷಕರಿಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ನೀಡಿ, ಸಮಾನತೆಯ ಅರಿವು ಮೂಡಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನದ ತಪಸ್ಸಿನಿಂದ ವಿಶ್ವದಲ್ಲೇ ಮಹಾ ನಾಯಕರಾದರು.ರಾಜ್ಯದಲ್ಲಿ ಸುಮಾರು 830 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತರಾಗದೇ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿ ಒಲಿಂಪಿಕ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮಾಡಬೇಕು’ ಎಂದರು.

ಇದೇ ವೇಳೆ ಸಮಾಜ ಕಲ್ಯಾಣ ಸಚಿವರು ಶಾಸಕ ಶಿವಲಿಂಗೇಗೌಡರ ಸಾಮಾಜಿಕ‌ ಕಾಳಜಿ, ಅಧ್ಯಯನದೊಂದಿಗೆ ಸದನದಲ್ಲಿ ಮಾಡುವ ವಿಷಯ‌ ಮಂಡನೆ, ಹೋರಾಟ ಮನೋಭಾವಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ₹ 16 ಕೋಟಿ ವೆಚ್ಚದಲ್ಲಿ ರಾಮನಹಳ್ಳಿಯಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ.ಅರಸೀಕೆರೆ ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರಿಗೆ ಸಹಕಾರ ನೀಡಲಾಗುವುದು. ಎತ್ತಿನಹೊಳೆ ಯೋಜನೆಯಿಂದ ಸದ್ಯದಲ್ಲೇ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುವುದು.ಇನ್ನೂ ಮೂರು ವಸತಿ ಶಾಲೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಛಲವಾದಿ ಸಮುದಾಯ ಭವನ ನಿರ್ಮಾಣಕ್ಕೆ ಖಾಸಗಿ ಶಿಕ್ಷಣ ಸಂಸ್ಥಯೊಂದರಿಂದ ಅಡ್ಡಿಯಾಗಿದೆ ಮತ್ತು ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ಮಿಸುತ್ತಿರುವಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು. ಭದ್ರಾ ಮೇಲ್ದಂಡೆ ಯೋಜನೆಯಿಂದ ಆಗಿರುವ ಅನ್ಯಾಯದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.

‘ಅರಸೀಕೆರೆ ತಾಲ್ಲೂಕಿನಲ್ಲಿ 20 ಸಾವಿರ ಮಂದಿ ಪರಿಶಿಷ್ಟ ಜಾರಿ, ಪಂಗಡದ ಮಕ್ಕಳ ಶಿಕ್ಷಣ ಸೌಲಭ್ಯಕ್ಕೆ 20 ಎಕರೆ ಜಾಗ ಮೀಸಲಿಡಲಾಗಿದೆ. ಇಲ್ಲಿಏಕಲವ್ಯ ವಸತಿ ಶಾಲೆ ನಿರ್ಮಿಸಬೇಕೆಂಬ ಆಸೆ ಇದೆ. ಆದರೆ ಅದರ ಸಾಧ್ಯತೆ ಕಡಿಮೆ ಇರುವುದರಿಂದ ವಾಜಪೇಯಿ ವಸತಿ ಶಾಲೆಯನ್ನಾದರೂ ನಿರ್ಮಿಸಿ ಕೊಡುವಂತೆ’ ಮನವಿ ಮಾಡಿದರು.

‘ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರ ಜೀವ ರಕ್ಷಣೆಗೆ ತಡೆಗೋಡೆ ನಿರ್ಮಿಸಬೇಕು. ಅಲ್ಲದೇ ಕಣಕಟ್ಟೆ ಮತ್ತು ಬಾಣಾವರ ಹೋಬಳಿಗಳ 28 ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರು ದೊರೆಯಬೇಕಿತ್ತು. ಅದನ್ನು ಚಿಕ್ಕಮಗಳೂರು ತಾಲ್ಲೂಕಿನ ಕಸಬಾಗೆ ವರ್ಗಾಯಿಸಲಾಗಿದೆ. ಅವರಿಗೂ ನೀರು ಕೊಡಿ. ಆದರೆ, ಅರಸೀಕೆರೆ ತಾಲ್ಲೂಕಿಗೆ ಅನ್ಯಾಯವಾಗದಂತೆ ನೀರು ಪೂರೈಸಬೇಕು’ ಎಂದು ತಿಳಿಸಿದರು.

ಅಕಾಲಿಕ ಮರಣ ಹೊಂದಿದ ತಾಲ್ಲೂಕಿನ ರಂಗಾಪುರ ವಸತಿ ಶಾಲೆಯ ಶಿಕ್ಷಕ ರಘು ಅವರ ಕುಟುಂಬದವರಿಗೆ ಜಿಲ್ಲಾ ವಸತಿ ಶಾಲೆಯ ನೌಕರರ ಸಂಘದ ವತಿಯಿಂದ ₹ 7 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.

ಅಂಬೇಡ್ಕರ್ ಅವರು 1954ರಲ್ಲಿ ಹಾಸನದಲ್ಲಿ ಭಾಷಣ ಮಾಡಿದ ಎ. ಕೆ. ಬೋರ್ಡಿಂಗ್ ಅನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ದಲಿತ ಸಂಘಟನೆಗಳು ಮನವಿ ಸಲ್ಲಿಸಿದವು.

ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಟರಾಜ್, ಸಹಾಯಕ ನಿರ್ದೇಶಕ ಗೋಪಾಲಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್‌.ಡಿ.ಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT