ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಹೊಂಗಡಹಳ್ಳ, ವಣಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆ ಕಾಟಿಗಳ ಹಾವಳಿ
Last Updated 14 ಮೇ 2019, 17:27 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಹೊಂಗಡಹಳ್ಳ ಹಾಗೂ ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ, ಕಾಟಿ ಹಾಗೂ ವನ್ಯ ಜೀವಿಗಳ ಹಾವಳಿಯಿಂದಾಗಿ ಬೆಳೆ ಹಾಗೂ ಪ್ರಾಣ ಹಾನಿ ಹೆಚ್ಚಾಗುತ್ತಿದ್ದು, ಸರ್ಕಾರ ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಭಾಗದ ಅರಣಿ, ಮಂಕನಹಳ್ಳಿ, ಬೋರನಮನೆ, ಎತ್ತಳ್ಳ, ಬಟ್ಟೆಕುಮರಿ, ಬಾಜೆಮನೆ ಎಸ್ಟೇಟ್‌, ಬಾಳೇಹಳ್ಳ, ಯಡಕುಮೇರಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ, ಕಾಟಿಗಳ ಹಾವಳಿಗೆ ರೈತರು ಹಲವು ವರ್ಷಗಳಿಂದ ಭತ್ತದ ಬೆಳೆಯನ್ನೇ ಬೆಳೆಯುವುದು ನಿಲ್ಲಿಸಲಾಗಿದೆ.

ಪ್ರಮುಖ ವಾಣಿಜ್ಯ ಬೆಳೆ ಕಾಫಿ, ಏಲಕ್ಕಿ, ಅಡಿಕೆ ಬೆಳೆಯನ್ನೂ ಸಹ ಕಾಡಾನೆಗಳು ನಾಶ ಮಾಡುತ್ತಿವೆ. ಇತ್ತೀಚೆಗೆ ಎ.ಆರ್‌. ಜಗದೀಶ್‌, ಎ.ಕೆ. ಸುಬ್ಬೇಗೌಡ, ಎ.ಬಿ. ದಿನೇಶ್‌ ಹಾಗೂ ಗ್ರಾಮದ ಹಲವು ರೈತರ ಜಮೀನುಗಳಿಗೆ ಕಾಡಾನೆಗಳು ಹಾಗೂ ಕಾಟಿಗಳು ನುಗ್ಗಿ ಕಾಫಿ, ಅಡಿಕೆ, ತೆಂಗು ಬೆಳೆಯನ್ನು ನಾಶ ಮಾಡಿವೆ. ಕಳೆದ ಒಂದು ದಶಕದಿಂದ ವನ್ಯ ಜೀವಿಗಳ ಉಪಟಳ ಹೆಚ್ಚಾಗಿ, ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಎ.ಆರ್‌. ಜಗದೀಶ್ ಸಮಸ್ಯೆ ಹೇಳಿಕೊಂಡರು.

ನನೆಗುದಿಗೆ ಬಿದ್ದಿರುವ ಅರಣ್ಯ ವಿಸ್ತರಣೆ: ‘ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಅರಣಿ, ಮಂಕನಹಳ್ಳಿ, ಬೋರನಮನೆ, ಎತ್ತಳ್ಳ, ಬಟ್ಟೆಕುಮರಿ, ಬಾಜೆಮನೆ ಎಸ್ಟೇಟ್‌, ಬಾಳೇಹಳ್ಳಿ, ಯಡಕುಮೇರಿ ಈ ಗ್ರಾಮಗಳಲ್ಲಿ ಸುಮಾರು 3 ಸಾವಿರ ಎಕರೆ ಹಿಡುವಳಿ ಭೂಮಿಯನ್ನು ಅರಣ್ಯ ವಿಸ್ತರಣೆಗಾಗಿ ಸರ್ಕಾರಕ್ಕೆ ಬಿಟ್ಟು ಕೊಡಲು ಗ್ರಾಮಸ್ಥರೇ ಮುಂದೆ ಬಂದಿದ್ದೇವೆ. 3 ಸಾವಿರ ಹಿಡುವಳಿ ಸೇರಿದಂತೆ ಸುಮಾರು 15 ಸಾವಿರ ಎಕರೆ ಭೂಮಿ ಬಿಸಿಲೆ, ಕಾಗಿನಹರೆ ಹಾಗೂ ಕೆಂಚನಕುಮರಿ ರಕ್ಷಿತ ಅರಣ್ಯ ವಿಸ್ತರಣೆಗೆ ಸೇರುತ್ತದೆ. ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿ, ಮುಖ್ಯಮಂತ್ರಿಗಳು ₹ 150 ಕೋಟಿ ಬಿಡುಗಡೆ ಮಾಡಿದ್ದಾರೆ.

ಕೇಂದ್ರದ ಪರಿಸರ ಸಚಿವಾಲಯಕ್ಕೆ ಮಾಹಿತಿ ಕಳುಹಿಸಿದೆ. ಆದರೆ ಯೋಜನೆ ಆಮೇಗತಿಯಾಗಿದ್ದು, ಯೋಜನೆ ಕೂಡಲೇ ಜಾರಿಯಾಗಬೇಕು. ಇದರಿಂದ ವನ್ಯಜೀವಿಗಳ ಉಪಟಳದಿಂದ ಹಲವು ಗ್ರಾಮಗಳು ಮುಕ್ತವಾಗುತ್ತವೆ. 15 ಸಾವಿರ ಎಕರೆ ಪ್ರದೇಶದಲ್ಲಿ ಕಾಡಾನೆ ಹಾಗೂ ಇತರ ವನ್ಯ ಜೀವಿಗಳಿಗೆ ಆಹಾರವಾಗುವಂತಹ ಗಿಡಗಳನ್ನು ಬೆಳೆಸಬಹುದು. ರೈತರೇ ನಿರ್ಮಾಣ ಮಾಡಿರುವ ಕೆರೆ ಕಟ್ಟೆಗಳಿವೆ. ಹಳ್ಳ, ಕೊಳ್ಳಗಳಿವೆ. ತಾಲ್ಲೂಕಿನಲ್ಲಿರುವ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳನ್ನು ಈ ಪ್ರದೇಶಕ್ಕೆ ಬಿಡುವುದರಿಂದ ಇಡೀ ತಾಲ್ಲೂಕಿನಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಜಗದೀಶ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT