ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ಸಕಲೇಶಪುರ | ಆನೆಗಳ ಕಾಟ: ಪ್ರಯಾಣಕ್ಕೂ ಪರದಾಟ

ಗುಂಡಿಮಯ ಬಾಳ್ಳುಪೇಟೆ–ಮಾಗಲು ರಾಜ್ಯ ಹೆದ್ದಾರಿ
ಜಾನೇಕೆರೆ ಆರ್. ಪರಮೇಶ್
Published 3 ಸೆಪ್ಟೆಂಬರ್ 2024, 6:10 IST
Last Updated 3 ಸೆಪ್ಟೆಂಬರ್ 2024, 6:10 IST
ಅಕ್ಷರ ಗಾತ್ರ

ಸಕಲೇಶಪುರ: ಕೊಡಗು–ಹಾಸನ–ಚಿಕ್ಕಮಗಳೂರು ಜಿಲ್ಲೆಗಳ ಸಂಪರ್ಕದ ಜೀವನಾಡಿಯಾಗಿರುವ ಬೇಲೂರು–ಸೋಮವಾರಪೇಟೆ ರಾಜ್ಯ ಹೆದ್ದಾರಿ 112ರಲ್ಲಿ ಬಾಳ್ಳುಪೇಟೆ–ಮಾಗಲು ನಡುವಿನ ರಸ್ತೆ ಸಂಪೂರ್ಣ ಗುಂಡಿಬಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ, ಶನಿವಾರಸಂತೆ ಭಾಗದಿಂದ ಬಾಳ್ಳುಪೇಟೆ ಮಾರ್ಗವಾಗಿಯೇ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಹೆದ್ದಾರಿ ಇದಾಗಿದೆ. ಮಾಗಲು ವೃತ್ತದಿಂದ ಬಾಳ್ಳುಪೇಟೆವರೆಗೆ ಕೆಂಚಮ್ಮನ ಹೊಸಕೋಟೆ, ಕಾಡ್ಲೂರು ಕೂಡಿಗೆ, ವಡೂರು, ಜಮ್ನಳ್ಳಿ, ಚಿನ್ನಹಳ್ಳಿ, ಬನವಾಸೆ, ಕಾಗನೂರು ಬಂದಿಹಳ್ಳಿ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳ ಶಾಲಾ– ಕಾಲೇಜುಗಳಿಗೆ ವಿದ್ಯಾರ್ಥಿಗಳು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಡೇರಿಗೆ ಹಾಲು ಸಾಗಣೆ ಸೇರಿದಂತೆ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.

ಪ್ರತಿಯೊಬ್ಬರಿಗೂ ಅತ್ಯವಶ್ಯಕ ಆಗಿರುವ ಈ ಹೆದ್ದಾರಿ, ಮೂರು ವರ್ಷಗಳಿಂದ ಗುಂಡಿ ಬಿದ್ದು ಹಾಳಾಗುತ್ತಲೇ ಇದೆ. ದುರಸ್ತಿ ಮಾತ್ರ ಆಗಿಲ್ಲ. ಈಗಂತೂ ರಸ್ತೆ ತುಂಬಾ ಆಳವಾದ ಗುಂಡಿಗಳು ಬಾಯ್ತೆರೆದುಕೊಂಡಿವೆ.

ಒಂದೆಡೆ ಗುಂಡಿಮಯ ರಸ್ತೆ ಇದ್ದರೆ, ಇನ್ನೊಂದೆಡೆ ಯಾವಾಗ ಆನೆ ಎದುರಾಗುತ್ತದೆಯೋ ಎನ್ನುವ ಆತಂಕದಲ್ಲಿಯೇ ಚಾಲಕರು ವಾಹನಗಳನ್ನು ಕಷ್ಟಪಟ್ಟು ಓಡಿಸಬೇಕು. ಗುಂಡಿ ಬಿದ್ದಿರುವ ಈ ರಸ್ತೆಯಲ್ಲಿ ವಾಹನಗಳು ಮಾರ್ಗದ ಮಧ್ಯದಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

‘ಗರ್ಭಿಣಿಯರು, ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವುದೇ ಕಷ್ಟ. ಆಸ್ಪತ್ರೆಗೆ ತಲುಪುವ ಮೊದಲೇ ಅನಾಹುತಗಳು ಸಂಭವಿಸುತ್ತವೆ. ಇಂತಹ ಮುಖ್ಯ ರಾಜ್ಯ ಹೆದ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಪರಿಣಾಮ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸಬೇಕಾಗಿದೆ’ ಎಂದು ಧರ್ಮೇಂದ್ರ ಹೊಂಕರವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತವೆ. ವಾಹನಗಳನ್ನು ವೇಗವಾಗಿ ಓಡಿಸಿ ಆನೆಗಳಿಂದ ತಪ್ಪಿಸಿಕೊಳ್ಳುವುದಕ್ಕೂ ಸಹ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ ಈ ರಸ್ತೆ.
ಹರೀಶ್ ಹೊಂಕರವಳ್ಳಿ, ಗ್ರಾಮಸ್ಥ
ಬಾಳ್ಳುಪೇಟೆಯಿಂದ ಜಮ್ನಳ್ಳಿವರೆಗೆ 2.9 ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹10 ಕೋಟಿ ಬಿಡುಗಡೆ ಆಗಿದ್ದು ಟೆಂಡರ್‌ ಹಂತದಲ್ಲಿದೆ. ಹೆದ್ದಾರಿಯನ್ನು 7 ಮೀಟರ್‌ ವಿಸ್ತರಣೆ ಮಾಡಲಾಗುವುದು.
ಮುರುಗೇಶ್‌, ಪಿಡಬ್ಲ್ಯುಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ–ಮಾಗಲು ನಡುವೆ ಬೇಲೂರು–ಸೋಮವಾರಪೇಟೆ ರಾಜ್ಯ ಹೆದ್ದಾರಿ ಗುಂಡಿಬಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ–ಮಾಗಲು ನಡುವೆ ಬೇಲೂರು–ಸೋಮವಾರಪೇಟೆ ರಾಜ್ಯ ಹೆದ್ದಾರಿ ಗುಂಡಿಬಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT