ಹಾಸನ: ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿರುವ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ಮೀಸಲಾತಿ ಪ್ರಕಟಗೊಂಡಿದೆ. ಇದೀಗ ಜೆಡಿಎಸ್–ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದು, ಸ್ಥಳೀಯ ಮಟ್ಟದಲ್ಲೂ ಮೈತ್ರಿ ಮುಂದುವರಿಯಲಿದೆಯೇ ಎನ್ನುವ ಕುತೂಹಲ ಜನರನ್ನು ಕಾಡುತ್ತಿದೆ.
ಮೀಸಲಾತಿ ಗೊಂದಲ ಮತ್ತಿತರ ಕಾರಣಗಳಿಂದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನನೆಗುದಿಗೆ ಬಿದ್ದಿತ್ತು. ಇದೀಗ ಪ್ರಕಟಗೊಂಡಿದ್ದು, ಹಾಸನ ಹಾಗೂ ಅರಸೀಕೆರೆ ನಗರಸಭೆಯ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.
ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ, ಜೆಡಿಎಸ್‌ನ 17, ಬಿಜೆಪಿಯ 14, ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ ಇಬ್ಬರು ಸದಸ್ಯರಿದ್ದಾರೆ. ಸಹಜವಾಗಿ ಜೆಡಿಎಸ್ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಒಬ್ಬ ಸದಸ್ಯ ಅಗತ್ಯವಿದೆ. ಬಿಜೆಪಿಯ 14 ಸದಸ್ಯರಲ್ಲಿ ಇಬ್ಬರು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸುಲಭದಲ್ಲಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್ ಪಾಲಾಗಲಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನು ಸ್ಥಳೀಯ ಮಟ್ಟದಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿದಲ್ಲಿ, ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಪಡೆಯಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹಾಸನ ನಗರಸಭೆಯಲ್ಲಿ ಮೈತ್ರಿಯ ಸಾಧ್ಯತೆಗಳು ಕಡಿಮೆ ಎನ್ನುವ ಚರ್ಚೆಗಳು ಆಗುತ್ತಿವೆ.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಮಂಡ್ಯದಲ್ಲೂ ಪ್ರೀತಂ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಸನ ನಗರಸಭೆಯಲ್ಲಿ ಪ್ರೀತಂಗೌಡರ ಜೊತೆಗೆ ಕೈಜೋಡಿಸುವುದು ಅಸಾಧ್ಯ ಎನ್ನುವ ಮಾತುಗಳು ಜೆಡಿಎಸ್ ಪಾಳೆಯದಲ್ಲಿ ಕೇಳಿ ಬರುತ್ತಿವೆ.
ಹಲವು ಆಕಾಂಕ್ಷಿಗಳು: ಬಿ.ಸಿ.–ಎ ಅಭ್ಯರ್ಥಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನ ಗಿರೀಶ್ ಚೆನ್ನವೀರಪ್ಪ, ಅಶ್ವಿನಿ ಮಹೇಶ್ ಸೇರಿದಂತೆ ಒಟ್ಟು ಆರು ಮಂದಿ ಹಿಂದುಳಿದ–ಎ ವರ್ಗಕ್ಕೆ ಸೇರಿದ ಸದಸ್ಯರಿದ್ದಾರೆ.
ಜೆಡಿಎಸ್‌ನಿಂದ ಹಿರಿಯ ಸದಸ್ಯ ಗಿರೀಶ್ ಚನ್ನವೀರಪ್ಪಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿದಲ್ಲಿ, ಆ ಪಕ್ಷದ ಮುಖಂಡರ ಅಭಿಪ್ರಾಯವನ್ನೂ ಕೇಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನ ಬೇರೆಯರ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.