ಶನಿವಾರ, ಡಿಸೆಂಬರ್ 5, 2020
25 °C
ಪ್ರತಿ ಮನೆಯಿಂದ ಬಾಳೆಹಣ್ಣು ನೈವೇದ್ಯ

ಊರೊಡೆಯಪ್ಪ ದೇವರಿಗೆ ಪೂಜಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಹೋಬಳಿಯ ಕಾರ್ಗಲ್ ಗ್ರಾಮದಲ್ಲಿ ಊರೊಡೆಯಪ್ಪಸ್ವಾಮಿಯ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.

ಅರಕಲಗೂಡು ತಾಲ್ಲೂಕಿನ ಗಡಿಭಾಗದ ಗ್ರಾಮವಾದ ಕಾರ್ಗಲ್‌ನಲ್ಲಿ ಪ್ರತಿವರ್ಷ ದೀಪಾವಳಿಯ ಹಿಂದಿನ ದಿನ ಆಚರಿಸುವ ವಿಶೇಷ ಊರೊಡೆಯಪ್ಪ ದೇವರ ಹಬ್ಬವನ್ನು ಶುಕ್ರವಾರ ರಾತ್ರಿ ಉತ್ಸವಾದಿಗಳೊಂದಿಗೆ ನೆರವೇರಿಸಲಾಯಿತು.

ಗ್ರಾಮದ ಮುಖಂಡರ ನೇತೃತ್ವದಲ್ಲಿ ರಾತ್ರಿ ಗ್ರಾಮದ ಕೆರೆಯಿಂದ ಕಳಸ ಸಮೇತ ಹೊರಟ ಗ್ರಾಮಸ್ಥರ ಗುಂಪು ನೈವೇದ್ಯಕ್ಕಾಗಿ ಪ್ರತಿ ಮನೆಯಿಂದ ಹೊತ್ತು ತಂದಿದ್ದ ಬಾಳೆಹಣ್ಣಿನ ಬುಟ್ಟಿಯನ್ನು ಹೊತ್ತು ಮಂಗಳವಾದ್ಯದೊಂದಿಗೆ, ಮಡಿಯನ್ನು ಹಾಸುತ್ತಾ ದೇವರ ಕಳಸವನ್ನು ಬರಮಾಡಿಕೊಂಡು ದೈವಸನ್ನಿಧಿಯನ್ನು ತಲುಪಿದರು.

ದೇವರ ಸುತ್ತ ಕುಳಿತ ಭಕ್ತರ ಗುಂಪು ಬಾಳೆಹಣ್ಣಿನ ನೈವೇದ್ಯವನ್ನು ನೀಡುತ್ತಾ, ಪೂಜೆಯ ನಂತರ ಪರಸ್ಪರ ಬಾಳೆಹಣ್ಣನ್ನು ನೀಡಿ ಭಕ್ತಿ ಮೆರೆದರು.

ದೇವಾಲಯದ ಆವರಣದಲ್ಲಿ ಅಗ್ನಿಕೊಂಡ ಹಾಕಲಾಗಿತ್ತು. ಗ್ರಾಮದ ಮತ್ತು ಸುತ್ತಮುತ್ತಲಿನ ಯುವಕರು ಗುಂಡು ಎತ್ತಿ ಶಕ್ತಿಪ್ರದರ್ಶಿಸುತ್ತಿದ್ದರು. ಜಾನುವಾರುಗಳಿಗೆ ಒಳಿತಾಗಲಿ ಎಂಬ ನಂಬಿಕೆಯಿಂದ ಅನೇಕರು ತಮ್ಮ ಮನೆಯಲ್ಲಿನ ರಾಸುಗಳನ್ನು ದೈವದ ಸುತ್ತ ಪ್ರದಕ್ಷಿಣೆ ಹಾಕಿಸಿದರು.

ಪೂಜೆಯ ವೇಳೆ ಪಟಾಕಿ, ಬಾಣಬಿರುಸುಗಳ ಪ್ರದರ್ಶನ ಮನಸೆಳೆಯಿತು. ವರ್ಷಕ್ಕೊಮ್ಮೆ ಮಾತ್ರ ಬಾಳೆಹಣ್ಣಿನ ಪೂಜೆ. ಊರೊಡೆಯಪ್ಪ ದೇವರ ವಿಶೇಷವೆಂದರೆ ಗ್ರಾಮಸ್ಥರೆಲ್ಲರೂ ಹಬ್ಬಕ್ಕಿಂತ ಒಂದು ವಾರ ಮುಂಚೆಯೇ ಬಾಳೆಗೊನೆಗಳನ್ನು ಕಡಿದು ನೈಸರ್ಗಿಕವಾಗಿ ಹಣ್ಣು ಮಾಡಿ ಅದೇ ಹಣ್ಣಿನಿಂದ ನೈವೇದ್ಯ ಮಾಡುತ್ತಾರೆ. ವರ್ಷಕೊಮ್ಮೆ ಜರುಗುವ ಹಬ್ಬದಲ್ಲಿ ಮಾತ್ರ ಈ ದೇವರಿಗೆ ಬಾಳೆಹಣ್ಣಿನ ಸಮೇತ ಪೂಜೆ ಮಾಡುವುದನ್ನು ಹೊರತುಪಡಿಸಿ ವರ್ಷದ ಬೇರಾವುದೇ ದಿನದಲ್ಲಿ ಇಲ್ಲಿ ಪೂಜೆಗೆ ಬಾಳೆಹಣ್ಣನ್ನು ಬಳಸುವುದಿಲ್ಲ.

ದೇವರಿಗೆ ಹರಕೆಹೊತ್ತ ಭಕ್ತರು ಕೆರೆಯಲ್ಲಿ ಸ್ನಾನ ಮಾಡಿ ನಾರುಮಡಿಯಲ್ಲಿ ದೇವಾಲಯದವರೆಗೆ ಹಿಮ್ಮುಖವಾಗಿಯೇ ಸಾಗುವುದು ಇಲ್ಲಿನ ವಿಶೇಷ. ಹುಣಸೆ ಮರವೇ ದೇವರು. ದಶಕಗಳಿಂದ ಗ್ರಾಮದ ಸಮೀಪವಿರುವ ಹುಣಸೆಮರವನ್ನು ಊರೊಡೆಯಪ್ಪ ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಕಾರ್ಗಲ್ ಗ್ರಾಮವಷ್ಟೇ ಅಲ್ಲದೆ ಸುತ್ತಮುತ್ತಲಿನ ತರಿಗಳಲೆ, ಹೊಡೆನೂರು, ಹೊನಗಾನಹಳ್ಳಿ ಮತ್ತಿತರ ಗ್ರಾಮಗಳ ಜನರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು