ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಗೆ ಗಾಯಗೊಂಡ ಕಾರ್ಮಿಕ ಸಾವು: ಆಕ್ರೋಶ

ಶಾಸಕ ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಡಿ.ಸಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ
Last Updated 11 ಫೆಬ್ರುವರಿ 2021, 10:47 IST
ಅಕ್ಷರ ಗಾತ್ರ

ಹಾಸನ: ಬುಧವಾರ ರಾತ್ರಿ ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಕಲೇಶಪುರ ತಾಲ್ಲೂಕು ಹಲಸುಲಿಗೆ ಗ್ರಾಮದ ಕಾಫಿ ತೋಟದ ಕಾರ್ಮಿಕ ಪುತ್ತೂರಿನ ವಸಂತ (55) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 12ರ ಸುಮಾರಿಗೆ ಮೃತಪಟ್ಟಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹಲವು ಗ್ರಾಮಗಳ ಜನರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಘಟನೆ ವಿವರ: ಹಲಸುಲಿಗೆ ಗ್ರಾಮದಲ್ಲಿ ಕೊಯ್ಲು ಮಾಡಿದ್ದ ಕಾಫಿ ತುಂಬಿಕೊಂಡು ಬರಲು ತೋಟಕ್ಕೆ ಹೋಗಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿ ವಸಂತನನ್ನು ಕೋರೆಯಿಂದ ಹಿಂಭಾಗಕ್ಕೆ ತಿವಿದು ಸುಮಾರು 10 ಅಡಿ ದೂರ ಎಸೆದಿತ್ತು.

ಪ್ರತಿಭಟನೆ: ಸಕಲೇಶಪುರ ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ಕಾಡಾನೆ ದಾಳಿ ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಕಂಡು ಹಿಡಿಯುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿ ಶಾಸಕ ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಹಲವು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲ ಎರಡು ದಿನಗಳ ಒಳಗಾಗಿ ಅರಣ್ಯ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಅರಣ್ಯ ಇಲಾಖೆ ಉನ್ನತ ಅಧಿಕಾರಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಬೇಕು. ಈ ಬಗ್ಗೆ ದಿನಾಂಕ ನಿಗದಿ ಮಾಡುವವರೆಗೂ ಶವವನ್ನು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಾಗೂ ಸಿಎಂ ಜೊತೆ ಮಾತನಾಡಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸುವುದು ವಿಳಂಬವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಿದ್ದು, ಒಂದು ಆನೆ ಸೆರೆ ಹಿಡಿಯಲಾಗಿದೆ. ಜಿಲ್ಲಾಡಳಿತ ಪ್ರಾಮಾಣಿಕವಾಗಿರೈತರ ಪರ ಇದೆ. ಸೋಮವಾರ ಅಥವಾ ಮಂಗಳವಾರ ಸಕಲೇಶಪುರದಲ್ಲಿ ಸಭೆ ಆಯೋಜನೆಗೆ ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದರು.

ಇದಕ್ಕೆ ಜಗ್ಗದ ಪ್ರತಿಭಟನಕಾರರು, ‘20 ವರ್ಷದಿಂದ ಜಿಲ್ಲಾಡಳಿತ ಮತ್ತು ಸರ್ಕಾರ ಇದೇ ರೀತಿ ಭರವಸೆಗಳನ್ನು ನೀಡುತ್ತಾ ಬಂದಿದೆ. ಸಣ್ಣ ಮಕ್ಕಳಿಗೆ ಅರ್ಥವಾಗುವ ವಿಚಾರ ಸರ್ಕಾರ ಹಾಗೂ ಸಚಿವರಿಗೆ ಅರ್ಥವಾಗುತ್ತಿಲ್ಲ. ಮೌಖಿಕಭರವಸೆಯಿಂದ ಪ್ರಯೋಜನೆ ಇಲ್ಲ. ಸಭೆ ನಡೆಸುವುದಾಗಿ ಲಿಖಿತವಾಗಿ ನೀಡಿದರೆ ಮಾತ್ರವೇ ಪ್ರತಿಭಟನೆ ಹಿಂಪಡೆಯುತ್ತೇವೆ’ ಎಂದು ಪಟ್ಟು ಹಿಡಿದರು.

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಸಭೆ ನಡೆಸುವ ದಿನಾಂಕವನ್ನು ಖಚಿತ ಪಡಿಸಿಕೊಂಡರು. ‘ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿಯಕಾಡಾನೆ ಹಾವಳಿ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಆನೆ ಹಾವಳಿ ಇರುವ ಭಾಗದ ಶಾಸಕರು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈತರನ್ನು ಒಳಗೊಂಡ ಸಭೆಯನ್ನು ಫೆ. 16ರಂದು ಸಕಲೇಶಪುರದಲ್ಲಿ ಏರ್ಪಡಿಸಿದೆ’ ಎಂದು ಲಿಖಿತ ರೂಪದಲ್ಲಿ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂಚಲ ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಹಲಸುಲಿಗೆಯ ಚೈತ್ರಾ ನವೀನ್‌, ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಆರ್‌. ಮಂಜುನಾಥ್‌, ಪತ್ರಕರ್ತ ಹೆತ್ತೂರು ನಾಗರಾಜ್‌, ಬಾಳ್ಳುಪೇಟೆ ಪ್ರದೀಪ್‌ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT