ಶನಿವಾರ, ಜುಲೈ 31, 2021
27 °C
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಅಭಯ

ಎಸ್ಸೆಸ್ಸೆಲ್ಸಿ: ಭಯ, ಗೊಂದಲ ಬಿಟ್ಟು ಪರೀಕ್ಷೆ ಬರೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪರೀಕ್ಷಾ ಕೇಂದ್ರ ಸಂಪೂರ್ಣ ಸುರಕ್ಷಿತವಾಗಿದೆಯೇ? ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯೇ? ಫಲಿತಾಂಶ ಯಾವಾಗ ಪ್ರಕಟವಾಗಲಿದೆ? ಮೂರು ಬಣ್ಣದ ಒಎಂಆರ್‌ ಶೀಟ್‌ಗಳನ್ನು ಒಟ್ಟಿಗೆ ನೀಡಬೇಕೆ? ಮಾಸ್ಕ್‌ಗಳನ್ನು ನೀಡುತ್ತಾರೆಯೇ? ವಿದ್ಯಾರ್ಥಿಗಳಿಗೆ ಯಾವ ರೀತಿ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ...?

ಈ ರೀತಿಯ ಹಲವು ಪ್ರಶ್ನೆಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬಂದಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಶುಕ್ರವಾರ ‘ಪ್ರಜಾವಾಣಿ’ ಆಯೋಜಿಸಿದ್ದ ಫೋನ್‌ ಇನ್  ಕಾರ್ಯಕ್ರಮದಲ್ಲಿ.

ವಿದ್ಯಾರ್ಥಿಗಳು ಮತ್ತು ಪಾಲಕರ ಸಂದೇಹಗಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್‌ ಉತ್ತರಿಸಿದರು. ಜಿಲ್ಲೆಯ 121 ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಮಾರ್ಗಸೂಚಿ ಅಳವಡಿಸಿದ್ದು, ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಬರೆಯಿರಿ ಎಂದು ಆತ್ಮವಿಶ್ವಾಸ ತುಂಬಿದರು.

ಎಲ್ಲ ಕರೆಗಳನ್ನೂ ತಾಳ್ಮೆಯಿಂದ ಸ್ವೀಕರಿಸಿದ ಡಿಡಿಪಿಐ ಅವರು, ವಿದ್ಯಾರ್ಥಿಗಳ ಗೊಂದಲ, ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.

ಕೋವಿಡ್‌ ಕಾಲಘಟ್ಟದಲ್ಲಿ ಆರು ದಿನದ ಬದಲು ಎರಡು ದಿನ ನಡೆಯುವ ಪರೀಕ್ಷೆ ಸರಳ, ನೇರವಾಗಿ ಇರಲಿದೆ. ಪರೀಕ್ಷಾ ಕೇಂದ್ರ ಸಂಪೂರ್ಣ ಸುರಕ್ಷಿತವಾಗಿದ್ದು, ಭಯ, ಗೊಂದಲ ಬಿಟ್ಟು ಪರೀಕ್ಷೆ ಬರೆಯಬೇಕು. ಬಸ್‌ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿದ 20 ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದರು.

ಈ ಬಾರಿ 20,826 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜನವರಿಯಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಆನ್‌ಲೈನ್‌ ತರಗತಿ ನಡೆಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳ ವಿವರಗಳನ್ನು ಎಲ್ಲರಿಗೂ ನೀಡಲಾಗಿದೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರವನ್ನು ಪರೀಕ್ಷೆ ಮುನ್ನಾ ಹಾಗೂ ನಂತರ ಸ್ಯಾನಿಟೈಸ್‌ ಮಾಡಲಾಗುವುದು. ಪರೀಕ್ಷೆಗೆ ನಿಯೋಜನೆಗೊಂಡ 3510 ಸಿಬ್ಬಂದಿ ಕೋವಿಡ್ ಲಸಿಕೆ ಮೊದಲ ಡೋಸ್‌ ಪಡೆದಿದ್ದಾರೆ. ಪರೀಕ್ಷೆಗಾಗಿ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಡೆಸ್ಕ್‌ನಲ್ಲಿ ಒಬ್ಬರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕೆಮ್ಮು, ಜ್ವರ, ನೆಗಡಿ ಮತ್ತಿತರ ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಾಲ್ಲೂಕಿನಲ್ಲಿ ಎರಡು ವಿಶೇಷ ಕೊಠಡಿ ತೆರೆಯಲಾಗಿದೆ. ಕೊರೊನಾ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆಯಲು ಪ್ರತಿ ತಾಲ್ಲೂಕಿಗೆ ಒಂದರಂತೆ ಕೋವಿಡ್ ಆರೈಕೆ ಕೇಂದ್ರ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫೋನ್‌ ಇನ್‌ನಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಗಳು

* ಪರೀಕ್ಷಾ ಕೇಂದ್ರಗಳು ಸುರಕ್ಷಿತವಾಗಿದೆಯೇ?

ಶ್ರೇಯಸ್‌, ಕಾಳೇನಹಳ್ಳಿ

ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ಯಾನರ್‌ ಮೂಲಕ ತಪಾಣೆಗೆ ಒಳಪಡಿಸಲಾಗುವುದು. ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೂ ಸರ್ಜಿಕಲ್ ಮಾಸ್ಕ್‌ ನೀಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ಸುರಕ್ಷತೆ ದೃಷ್ಟಿಯಿಂದ ಮನೆಯಿಂದಲೇ ಬಾಟಲಿಯಿಂದ ನೀರು ತಂದರೆ ಒಳ್ಳೆಯದು.

* ಪರೀಕ್ಷೆ ವಿಧಾನ ಬದಲಾವಣೆಯಿಂದ ಗೊಂದಲ ಉಂಟಾಗಿದೆ?

ಚಿನ್ಮಯ್‌, ಗಂಡಸಿ

ನೇರ ಪ್ರಶ್ನೆಯ ಪರೀಕ್ಷೆ ತುಂಬ ಸರಳ. ಯಾವುದೇ ಗೊಂದಲ, ಭಯಬೇಡ. ಧೈರ್ಯದಿಂದ ಪರೀಕ್ಷೆ ಎದುರಿಸಿ.

* ಪ್ರತಿ ವಿಷಯದ ಅಂಕ ಹೇಗೆ ನಿರ್ಧರಿಸಲಾಗುತ್ತದೆ?

ಮೇಘನಾ, ಅರಸೀಕೆರೆ,

ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತವೆ. ವಿದ್ಯಾರ್ಥಿ ನೀಡುವ ಸರಿ ಉತ್ತರಗಳನ್ನು ನಿರ್ಧರಿಸಿ ಅಂಕ ನೀಡಲಾಗುತ್ತದೆ. ವಿಷಯವಾರು 20 ಆಂತರಿಕ ಅಂಕಗಳಿವೆ. ಎಲ್ಲವೂ ಬಹು ಆಯ್ಕೆ ಮಾದರಿ ಒಳಗೊಂಡಿರುತ್ತವೆ.

* ಒಎಂಆರ್ ಶೀಟ್‌ ಬಗ್ಗೆ ತಿಳಿಸಿ?

ದೀಪಕ್‌, ಬಾಣಾವರ

ಈ ಬಾರಿ ಮೂರು ಬಣ್ಣಗಳಲ್ಲಿ ಒಎಂಆರ್ ಶೀಟ್ ಇರಲಿವೆ. ಈಗಾಗಲೇ ವಿದ್ಯಾರ್ಥಿಗಳಿಗೆ ಒಎಂಆರ್‌ ಶೀಟ್‌ ಮಾದರಿ ನೀಡಿ, ಅಭ್ಯಾಸ ಮಾಡಿಸಲಾಗಿದೆ.

* ಗಣಿತ ಪರೀಕ್ಷೆಗೆ ಸಮಯ ಸಾಲದು. ಏನು ಮಾಡುವುದು?

ಸಂಗೀತ, ಅರಸೀಕೆರೆ

ಬೆಳಿಗ್ಗೆ 10.30ರಿಂದ 1.30ರ ತನಕ ಪರೀಕ್ಷೆ ಇರಲಿದೆ. ಸರಳ ವಿಷಯಕ್ಕೆ ಕಡಿಮೆ ಸಮಯ ವ್ಯಯಿಸಿ, ಉಳಿದ ಸಮಯವನ್ನು ಗಣಿತಕ್ಕೆ ಮೀಸಲಿಡಿ. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕು.

* ಪ್ರಶ್ನೆಗಳು ಪಠ್ಯಕ್ಕೆ ಸೀಮಿತವಾಗಿ ಇರಲಿವೆಯೇ ಅಥವಾ ಪಠ್ಯೇತರ ವಿಷಯಗಳು ಇರಲಿವೆಯೇ ?

ಕೆ.ಎಂ.ಪ್ರಿಯಾಂಕ, ಹಿರಿಯೂರು.

ಪಠ್ಯ ಪುಸ್ತಕ ಹೊರತಾಗಿ ಬೇರೆ ಪ್ರಶ್ನೆಗಳನ್ನು ಕೇಳುವುದಿಲ್ಲ.ಕ ಲಿಕೆಯ ಹೊರೆ ಇಳಿಸಲು ಪಠ್ಯದ ಶೇಕಡಾ 70 ಭಾಗ ಕಡಿತ ಮಾಡಲಾಗಿದೆ.

* ಪರೀಕ್ಷಾ ಕೇಂದ್ರಕ್ಕೆ ಬೇಗ ಬಂದರೆ ಓದಿಕೊಳ್ಳಲು ಅವಕಾಶ ಇದೆಯೇ?

ಚಂದನ, ಕಾಳೇನಹಳ್ಳಿ.

ಪರೀಕ್ಷೆ 10.30ರಿಂದ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನಾ ಕೇಂದ್ರಕ್ಕೆ ಬಂದರೆ 10 ಗಂಟೆ ವರೆಗೂ ಓದಿಕೊಳ್ಳಲು ಅವಕಾಶವಿದೆ. ನಂತರ ಪುಸ್ತಕಗಳನ್ನು ಹೊರಗೆ ಇಟ್ಟು, ಕೊಠಡಿ ಒಳಗೆ ಹೋಗಬೇಕು.

* ಮೂರು ವಿಷಯಗಳನ್ನು ಒಂದೇ ಬಾರಿಗೆ ಪರೀಕ್ಷೆ ಬರೆಯಬೇಕಿದ್ದು, ಅಭ್ಯಾಸ ಮಾಡಲು ಗೊಂದಲ ಉಂಟಾಗುತ್ತಿದೆ?

ಅಮೃತಾ, ಹಾಸನ.

ಕೋವಿಡ್‌ ನಡುವೆ ಆರು ದಿನಗಳ ಬದಲಿಗೆ ಎರಡೇ ದಿನ ಪರೀಕ್ಷೆ ನಿಗದಿ ಮಾಡಲಾಗಿದೆ. ಮೂರು ವಿಷಯದ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಗೊಂದಲ ಹಾಗೂ ಹೊರೆ ಆಗಬಾರದು ಎಂದು ಪಠ್ಯ ಕಡಿತ ಮಾಡಲಾಗಿದೆ. ಒಎಂಆರ್‌ ಶೀಟ್‌ನಲ್ಲಿ ಸರಿ ಉತ್ತರ ಶೇಡ್‌ ಮಾಡುವುದು.

* ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾರಿಗೆ ವ್ಯವಸ್ಥೆ ಇದೆಯೇ?

ವೈಷ್ಣವಿ, ಹಾರನಹಳ್ಳಿ

ಪರೀಕ್ಷೆ ನಡೆಯುವ ಎರಡು ದಿನವೂ ಎಲ್ಲಾ ಬಸ್‌ಗಳ ಸಂಚಾರ ಇರುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭಯ ಪಡಬೇಕಾಗಿಲ್ಲ. ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಬಳಿಯೇ ಬಸ್‌ ಸಂಖ್ಯೆ ಹಾಗೂ ಚಾಲಕ, ನಿರ್ವಾಹಕ ಮೊಬೈಲ್‌ ಸಂಖ್ಯೆ ನೀಡಲಾಗಿದ್ದು, ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು.

ನಿರ್ವಹಣೆ: ಕೆ.ಎಸ್‌.ಸುನಿಲ್‌, ಜೆ.ಎಸ್.ಮಹೇಶ್‌, ಚಿತ್ರ: ಅತಿಖ್‌ ಉರ್‌ ರೆಹಮಾನ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು