ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ದೇಗುಲ: ಯಾರೋ ಸೃಷ್ಟಿಸಿದ ಪವಾಡದ ಕತೆ

ದೇಗುಲದ ಅರ್ಚಕರ ಜತೆ ಮುತಾಲಿಕ್‌ ಚರ್ಚೆ
Last Updated 14 ಅಕ್ಟೋಬರ್ 2018, 12:51 IST
ಅಕ್ಷರ ಗಾತ್ರ

ಹಾಸನ: ‘ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಾಲಯದ ಪವಾಡಗಳ ಸತ್ಯಶೋಧನೆಯಾಗಬೇಕು’ ಎಂಬ ಪ್ರಗತಿಪರರ ಒತ್ತಾಯದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ದೇಗುಲಕ್ಕೆ ಭೇಟಿ ನೀಡಿ ಅರ್ಚಕರೊಂದಿಗೆ ಚರ್ಚಿಸಿದರು.

ದೇವಾಲಯದ ಅರ್ಚಕರಾದ ಅಣ್ಣಯ್ಯ, ನಾಗರಾಜ್, ನಿಡಿಗೆರೆ ಚಂದ್ರಣ್ಣ ಹಾಗೂ ಸಿದ್ದೇಶ್ವರ ದೇವಾಲಯದ ಅರ್ಚಕ ಪ್ರಕಾಶ್ ಅವರೊಂದಿಗೆ ಹಾಸನಾಂಬೆ ಪವಾಡಗಳ ಬಗ್ಗೆ ಮಾಹಿತಿ ಪಡೆದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕ ನಾಗರಾಜ್, ‘ಅರ್ಚಕರು ಯಾರೂ ಇಲ್ಲಿ ಪವಾಡಗಳು ನಡೆಯುತ್ತಿದೆ ಎಂದು ಪ್ರಚಾರ ಮಾಡಿಲ್ಲ. ಯಾವ ಗ್ರಂಥದಲ್ಲಿಯೂ ಆ ಬಗ್ಗೆ ಉಲ್ಲೇಖವಿಲ್ಲ. ಯಾರೋ ಸೃಷ್ಟಿಸಿದ ಪವಾಡದ ಕತೆಗಳನ್ನೇ ಎಲ್ಲರೂ ಹೇಳುತ್ತಿದ್ದಾರೆ. ಒಂದು ವರ್ಷ ದೀಪ ಆರುವುದಿಲ್ಲ, ದೇವಿ ಮೇಲಿರಿಸಿದ ಹೂವು ಬಾಡುವುದಿಲ್ಲ, ಎಡೆ ಮಾಡಿದ ಅನ್ನ ಹಳಸುವುದಿಲ್ಲವೆಂದು ಭಕ್ತರು ನಂಬಿದ್ದಾರೆ’ ಎಂದು ವಿವರಿಸಿದರು.

‘ಪ್ರತಿ ವರ್ಷ ಅಶ್ವಯುಜ ಮಾಸದ ಎರಡನೇ ಗುರುವಾರ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯುವ ಪ್ರತೀತಿ ಇದೆ. ದೇವರ ಒಡವೆ, ವಸ್ತ್ರಗಳು ಜಿಲ್ಲಾ ಖಜಾನೆಯಲ್ಲಿ ಇರುವುದರಿಂದ ಮಂಗಳವಾದ್ಯದೊಂದಿಗೆ ಹೋಗಿ ಎಲ್ಲವನ್ನೂ ತರಲಾಗುವುದು. ಗುರುವಾರ ದೇವಿಯ ಗರ್ಭಗುಡಿ ಬಾಗಿಲ ಬೀಗವನ್ನು ತಹಶೀಲ್ದಾರರೇ ತೆರೆಯುತ್ತಾರೆ. ಒಂದೇ ಬಾರಿಗೆ ಪೂರ್ತಿಯಾಗಿ ಬಾಗಿಲು ತೆರೆದರೆ ಒಳಗಿರುವ ಶಕ್ತಿಯ ದೃಷ್ಟಿಯಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಾಳೆ ಕಂದು ಕಡಿದು, ಮಂತ್ರ ಹೇಳಿ ನಂತರ ಒಳ ಹೋಗುತ್ತೇವೆ. ದೀಪದ ಬತ್ತಿ ಉರಿದು ಕೆಂಡ ರೂಪದಲ್ಲಿರುತ್ತದೆ. ಅರ್ಚಕರೇ ಹೊಸದಾಗಿ ಬತ್ತಿ, ಎಣ್ಣೆ ಹಾಕಿ ದೀಪದ ಬೆಳಕು ಹೆಚ್ಚಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಗರ್ಭಗುಡಿ ಬಾಗಿಲು ಮುಚ್ಚುವಾಗ ಅನ್ನದ ನೈವೇದ್ಯ ಇರಿಸುವುದೇ ಇಲ್ಲ. ಗುರುವಾರ ಬಾಗಿಲು ತೆರೆದರೂ ಅಂದು ದರ್ಶನವಿರುವುದಿಲ್ಲ. ಶುಕ್ರವಾರ ಬೆಳಗ್ಗೆ ಮಡಿವಾಳ ಸಮಾಜದವರು ಮಡಿಯಾಗಿ ಬಂದು ಹೊಸ ಮಡಿಕೆಯಲ್ಲಿ ಅನ್ನ ಮಾಡಿ ತಮ್ಮ ಸಮುದಾಯದ ಸೊಸೆ ಕಲ್ಲಾಗಿ ನೆಲೆಸಿರುವ ಸೊಸೆ ಕಲ್ಲಿಗೆ ಆ ಅನ್ನ ಅರ್ಪಿಸುತ್ತಾರೆ. ಅದನ್ನೇ ಪ್ರಸಾದವಾಗಿ ನೀಡುತ್ತೇವೆ. ಅದನ್ನೇ ಭಕ್ತರು ಹಿಂದಿನ ವರ್ಷ ಇರಿಸಿದ ಎಡೆ ಎಂದು ಭಾವಿಸಿರಬಹುದು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಘಟಕದ ಅಧ್ಯಕ್ಷ ಜಾನೆಕೆರೆ ಹೇಮಂತ್, ಚೇತನ್, ಕುಮಾರ್, ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT