ಬುಧವಾರ, ಏಪ್ರಿಲ್ 14, 2021
24 °C
ಸ್ವಾಧೀನಕ್ಕಿಂತ ಹೆಚ್ಚು ಕಾಫಿ ತೋಟಕ್ಕೆ ಹಾನಿ

ಎತ್ತಿನಹೊಳೆ ಪೈಪ್‌ಲೈನ್‌ ಅವೈಜ್ಞಾನಿಕ ಕಾಮಗಾರಿ: ಆರೋಪ

ಜಾನೇಕೆರೆ ಆರ್. ಪರಮೇಶ್‍ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ ಅಳವಡಿಕೆಗೆ ಸ್ವಾಧೀನಪಡಿಸಿಕೊಂಡಿರುವುದು 28 ಗುಂಟೆ, ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ರೈತರೊಬ್ಬರ ಒಂದು ಎಕರೆಗೂ ಹೆಚ್ಚು ಕೃಷಿ ಭೂಮಿ ಹಾನಿಯಾಗಿರುವ ಘಟನೆ ತಾಲ್ಲೂಕಿನ ಆಲುವಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.

ಗ್ರಾಮದ ಸರ್ವೆ ನಂ. 12ರಲ್ಲಿ ಎ.ಎನ್‌. ನಾಗೇಶ್‌ ಅವರ ಹೆಸರಿಗೆ 2.38 ಎಕರೆ ಜಮೀನು ಇದೆ. ಇವರ ಜಮೀನಿನ ಮಧ್ಯದಲ್ಲಿ ಪೈಪ್‌ಲೈನ್‌ ಹಾದು ಹೋಗಿದ್ದು, 28 ಗುಂಟೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಪರಿಹಾರ ನೀಡಲಾಗಿದೆ. ಈ ಜಾಗದಲ್ಲಿ ಈಗಾಗಲೇ ಪೈಪ್‌ಲೈನ್‌ ನಿರ್ಮಾಣವೂ ಆಗಿ ಹೋಗಿದೆ.

‘ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಪೈಪ್‌ಲೈನ್ ನಿರ್ಮಾಣ ಮಾಡಿದ ಮೇಲೆ ಎರಡೂ ಕಡೆ ತಡೆಗೋಡೆ ಅಥವಾ ಮಣ್ಣಿನ ರ‍್ಯಾಂಪ್ ನಿರ್ಮಾಣ ಮಾಡಿಕೊಡುವುದಾಗಿ ವಿಶ್ವೇಶ್ವರಯ್ಯ ಜಲವಿದ್ಯುತ್ ನಿಗಮ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ಜಿವಿಪಿಆರ್‌ ಭರವಸೆ ನೀಡಿದ್ದರು. ಆದರೆ, ಪೈಪ್‌ಗಳನ್ನು ಅಳವಡಿಸಿ ಎರಡು ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ತಡೆಗೋಡೆ ನಿರ್ಮಿಸಿಲ್ಲ. ಪೈಪ್‌ಲೈನ್ ಮುಚ್ಚಿಲ್ಲ, ವಾಲ್‌ಗಳನ್ನು ಮುಚ್ಚದೆ ಇರುವುದರಿಂದ ಪೈಪುಗಳಲ್ಲಿ ಶೇಖರಣೆಯಾದ ನೀರು ಸೋರುತ್ತಿದೆ. ಇದರ ಪರಿಣಾಮ ಸ್ವಾಧೀನಪಡಿಸಿಕೊಂಡಿರುವುದನ್ನು ಹೊರತುಪಡಿಸಿ ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಕುಸಿದಿದೆ. ಕಾಫಿ, ಕಾಳುಮೆಣಸು, ಸಿಲ್ವರ್‌, ಬಾಳೆ, ಏಲಕ್ಕಿ ಹಾಗೂ ಬೆಲೆಬಾಳುವ ಮರಗಳು ಹಾಳಾಗುತ್ತಿವೆ. ಕೃಷಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರ ನೀಡಿ ಹಾಗೂ ತಡೆಗೋಡೆ ನಿರ್ಮಾಣ ಮಾಡದಿದ್ದರೆ, ನಮ್ಮ ಬದುಕು ಬೀದಿ ಪಾಲಾಗುತ್ತದೆ’ ಎಂದು ರೈತ ನಾಗೇಶ್ ‘ಪ್ರಜಾವಾಣಿ’ಗೆ ಹೇಳುತ್ತಾರೆ.

ಪಶ್ಚಿಮಘಟ್ಟ ಅಂಚಿನಲ್ಲಿ ಇರುವ ಮಲೆನಾಡಿನ ಈ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಬೃಹತ್ ಗಾತ್ರದ ಪೈಪ್‌ಗಳನ್ನು ಅಳವಡಿಸುವುದಕ್ಕೆ ಸುಮಾರು 20 ಅಡಿಗೂ ಹೆಚ್ಚು ಆಳ ಹಾಗೂ ಅಗಲ ಭೂಮಿ ಅಗೆಯಲಾಗಿದೆ. ಮಳೆ ನೀರಿನ ಜೊತೆಗೆ ಭಾರಿ ಪ್ರಮಾಣದ ಮಣ್ಣು ತೋಟಕ್ಕೆ ನುಗ್ಗಿ ಹಲವು ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಆಸ್ತಿಪಾಸ್ತಿ ಹಾನಿಯಾಗಿರುವುದು ಕಂಡು ಬಂದಿದೆ.

‘ಪೈಪ್‌ಲೈನ್‌ ಅವೈಜ್ಞಾನಿಕ ಕಾಮಗಾರಿಯಿಂದ ಸ್ವಾಧೀನಗೊಳ್ಳದ ಭೂಮಿಯಲ್ಲಿನ ಬೆಳೆ, ಆಸ್ತಿ ನಷ್ಟ ಉಂಟಾಗಿದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡಬೇಕು ಎಂದು ವಿಶ್ವೇಶ್ವರಯ್ಯ ಜಲವಿದ್ಯುತ್ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಕಂಪನಿ ಹಾನಿಯ ಹೊಣೆ ಹೊರಬೇಕಾಗುತ್ತದೆ’ ಎಂದು ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು