ಗುರುವಾರ , ಸೆಪ್ಟೆಂಬರ್ 23, 2021
22 °C
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಎಚ್. ಎಂ. ಶಿವಣ್ಣ ಅಭಿಮತ

ಯುವ ಜನರಲ್ಲಿ ದೇಶ ಭಕ್ತಿ ಹೆಚ್ಚಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಯುವ ಜನರಲ್ಲಿ ದೇಶ ಭಕ್ತಿ ಹೆಚ್ಚಾಗಬೇಕಿದ್ದು, ಸ್ವಾರ್ಥ ಮನೋಭಾವ ಜಾಸ್ತಿ ಆಗುತ್ತಿರುವುದು ದುಖಃದಾಯಕವಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಎಚ್. ಎಂ. ಶಿವಣ್ಣ ತಿಳಿಸಿದರು.

ಹಾಸನದ ಕೃಷಿ ಮಹಾವಿದ್ಯಾಲಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಹಾಗೂ ರಕ್ತ ನಿಧಿ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.

ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಮಾತ್ರ ದೇಶ ಉದ್ದಾರವಾಗುತ್ತದೆ. ಯುವ ಜನರು ಸುಸಂಸ್ಕೃತರಾಗಿ, ದೇಶದ ಸಂಸ್ಕೃತಿ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕಾಗುತ್ತದೆ. ನೈಪುಣ್ಯತೆ, ಪ್ರಾಮಾಣಿಕತೆ, ಇಲ್ಲದಿದ್ದರೆ ಇದ್ದೂ ಸತ್ತಂತೆ ಎಂದು ತಿಳಿ ಹೇಳಿದರು.

ಯುವ ಜನರು ಯಾವುದೇ ಆಕಾಂಕ್ಷೆ, ಪ್ರಲೋಭನೆಗಳಿಗೆ ಒಳಗಾಗದೆ, ದೇಶದ ಉದ್ಧಾರಕ್ಕೆ ಹಾಗೂ ಒಗ್ಗಟ್ಟಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಉಪವಿಭಾಗಾಧಿಕಾರಿ ಎಚ್. ಎಲ್. ನಾಗರಾಜ್ ಮಾತನಾಡಿ, ತ್ಯಾಗಮಯ ಜೀವನ, ಸಮಾಜ ಸೇವೆ ಜೀವನದ ಗುರಿಯಾಗಬೇಕು. ಎಲ್ಲಾ ವಿದ್ಯಾರ್ಥಿಗಳು ಬಸವಣ್ಣನ ಆದರ್ಶ ಮೈಗೂಡಿಸಿಕೊಂಡು, ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡಬೇಕು. ಸಾಮಾಜಿಕ ಕೆಲಸಗಳಾದ ಕೆರೆ, ಕಲ್ಯಾಣಿಗಳ ಹೂಳುತ್ತುವಿಕೆ, ಕೃಷಿ ತಂತ್ರಜ್ಞಾನಗಳನ್ನು ಪಸರಿಸುವಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ತ್ಯಾಗ ಮಾಡಿದವರು, ಬೇರೆಯವರ ಹಿತಕ್ಕಾಗಿ ದುಡಿದವರು ಮಾತ್ರ ಜನ ಮಾನಸದಲ್ಲಿ ಹಲವು ವರ್ಷ ಉಳಿಯುತ್ತಾರೆ. ವೇದ, ಪುರಾಣಗಳಲ್ಲಿ ತಿಳಿಸಿರುವಂತೆ ಸಂಸ್ಕೃತಿಯಲ್ಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ಒತ್ತಿ ಹೇಳಲಾಗಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎಂದು ನುಡಿದರು.

ಕೃಷಿ ಕಾಲೇಜಿನ ಡೀನ್‌ ಡಾ. ಎನ್. ದೇವಕುಮಾರ್ ಮಾತಾನಾಡಿ, ಜನಸೇವೆಯೇ ಜೀವನದ ಗುರಿಯಾಗಿರಬೇಕು. ರಕ್ತದಾನ, ನೇತ್ರದಾನ ಮೊದಲಾದ ಸಮಾಜ ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡರೆ ಜನ್ಮ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮೋಹನ್ ಮಾತನಾಡಿ, ಜೀನ್ ಹೆನ್ರಿ ಡುನಾಂಟ್ ಸ್ಥಾಪಿಸಿದ ಈ ಸಂಸ್ಥೆಯು ವಿಶ್ವದ ಪ್ರತಿ ದೇಶದಲ್ಲಿ ವ್ಯಾಪಿಸಿದೆ. ಇದರ ಮೂಲಕ ಮಾನವೀಯತೆಯ ತತ್ವ ಹಾಗೂ ಮೌಲ್ಯಗಳ ಪ್ರೋತ್ಸಾಹ, ವಿಪತ್ತು ನಿರ್ವಹಣಾ ಜವಾಬ್ದಾರಿ, ವಿಪತ್ತು ನಿರ್ವಹಣೆಯ ತಯಾರಿ, ಸಾರ್ವಜನಿಕ ಆರೋಗ್ಯ ಪಾಲನೆ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಲಾಗುತ್ತಿದೆ. ಇಂತಹ ಮಹತ್ತರ ಕಾರ್ಯದಲ್ಲಿ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸನ ರಕ್ತ ನಿಧಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಎಚ್. ಎಲ್. ನಾಗರಾಜ್, ಎನ್. ದೇವಕುಮಾರ್ ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಒಟ್ಟು 60 ಯೂನಿಟ್‍ಗಳಷ್ಟು ರಕ್ತ ಸಂಗ್ರಹ ಮಾಡಲಾಯಿತು.

ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಸಂಚಾಲಕ ಕೃಷ್ಣಪ್ಪ, ಖಜಾಂಚಿ ಮಲ್ಲಿಕಾರ್ಜುನ್ ಯು.ಜೆ., ನಿರ್ದೇಶಕರಾದ ಶಬೀರ ಅಹಮದ್, ನಿರ್ಮಲ, ಜಯಶ್ರೀ, ಜಯೇಂದ್ರ ಕುಮಾರ್, ಮಹವೀರ್ ಭಂಡಾರಿ, ನಾರಾಯಣಸ್ವಾಮಿ ಮತ್ತು ಮಂಜುನಾಥ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.