ಜಿ.ಪಂ ಉಪಾಧ್ಯಕ್ಷರಿಗೆ ಡಿ.ಸಿ ನೋಟಿಸ್

ಹಾಸನ: ಸಕಲೇಶಪುರ ತಾಲ್ಲೂಕಿನ ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ.
ಜ.10 ರಂದು ₹ 2 ಕೋಟಿ ಮೌಲ್ಯದ ಮರಳನ್ನು ಜಿಲ್ಲಾಧಿಕಾರಿ ನೇತೃತ್ವದ ಮರಳು ಟಾಸ್ಕ್ ಫೋರ್ಸ್ ತಂಡ ವಶಕ್ಕೆ ಪಡೆದಿತ್ತು. ಈ ಸಂಬಂಧ ಓಷಿಯನ್ ಕನ್ ಸ್ಟ್ರಕ್ಷನ್ ಕಂಪೆನಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸುಪ್ರದೀಪ್ ಯಜಮಾನ್ ಅವರೇ ಮರಳು ಸಂಗ್ರಹಕ್ಕೆ ಶಿಫಾರಸು ಮಾಡಿದ್ದರು ಎಂದು ಗುತ್ತಿಗೆದಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ರೋಹಿಣಿ ನೋಟಿಸ್ ನೀಡಿದ್ದಾರೆ.
‘ಪಂಚಾಯತ್ ರಾಜ್ ಕಾಯ್ದೆ ಕಲಂ 175 ರನ್ವಯ ಅಪಕೀರ್ತಿಕರ ನಡತೆ ಹೊಂದಿದ್ದು, ನಿಮ್ಮ ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನಿಮ್ಮ ವಿರುದ್ಧ ಏಕೆ ಕ್ರಮ ವಹಿಸಬಾರದು’ ಎಂದು ತಕ್ಷಣ ಸಮಜಾಯಿಷಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
‘ಮರಳು ಸಂಗ್ರಹಕ್ಕೆ ನಾನು ಶಿಫಾರಸು ಮಾಡಿರುವ ಬಗ್ಗೆ ದಾಖಲೆ ಇದ್ದರೆ ನೀಡಲಿ. ದಾಳಿ ವೇಳೆ ಓಷಿಯನ್ ಕಂಪನಿಯವರು ನನ್ನ ಹೆಸರು ಹೇಳಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಒಂದು ವೇಳೆ ಹೇಳಿದ್ದರೆ ಯಾವ ಕಾರಣಕ್ಕೆ ಎಂಬುದುನ್ನು ತಿಳಿದುಕೊಳ್ಳಬೇಕು. ಮಂಗಳೂರಿನಲ್ಲಿರುವ ಗುತ್ತಿಗೆದಾರನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ ಆಗಿತ್ತು. ಗುರುವಾರ ನೋಟಿಸ್‌ಗೆ ಉತ್ತರ ನೀಡಲಾಗುವುದು’ ಎಂದು ಸುಪ್ರದೀಪ್ ಯಜಮಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All