ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ ₹ 792 ಕೋಟಿ ಬಂಡವಾಳ ಹೂಡಿಕೆ

ಆರು ಉದ್ಯಮ ಸ್ಥಾಪನೆ: 884 ಉದ್ಯೋಗ ಸೃಷ್ಟಿ ನಿರೀಕ್ಷೆ
Last Updated 12 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಲಾಕ್‌ಡೌನ್‌ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಆರು ಉದ್ಯಮಗಳು ₹792.27 ಕೋಟಿ ಹೂಡಿಕೆಗೆ ಮುಂದೆ ಬಂದಿದ್ದು, 884 ಉದ್ಯೋಗಳನ್ನು ಸೃಷ್ಟಿಸುವ ಭರವಸೆ ನೀಡಿವೆ. ಇದರಿಂದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ಜಿಲ್ಲಾ ಕೇಂದ್ರಗಳಲ್ಲಿಯೇ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಇದರಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಪಿಸಿಎಲ್‌ ₹680 ಕೋಟಿ ಬೃಹತ್‌ ಬಂಡವಾಳ ಹೂಡಿಕೆ ಮಾಡುತ್ತಿರುವುದು ವಿಶೇಷ.
ಇದರ ಜತೆಗೆ ಜೆ2ಎಲ್ಎಫ್‌ಎ ಇಂಡಿಯಾ ಲಿಮಿಟೆಡ್‌ ₹30 ಕೋಟಿ, ಟಾಪ್‌ಸ್ಯಾಕ್‌ ಎಕ್ಸ್‌ಪೋರ್ಟ್‌ ಇನ್‌ವೆಸ್ಟ್‌ಮೆಂಟ್
ಕಂಪನಿ ಸಹ ₹27 ಕೋಟಿ ಹೂಡಲು ಮುಂದೆ ಬಂದಿದೆ.

ಆಟೋಮೊಬೈಲ್‌ ಬಿಡಿ ಭಾಗ, ರೆಡಿಮೇಡ್ ಗಾರ್ಮೆಂಟ್ಸ್, ರಾಸಾಯನಿಕ ಉತ್ಪಾದನೆ, ಕೇಬಲ್ಸ್‌, ಔಷಧ, ಇಂಧನ, ಉಕ್ಕು, ಪ್ಲಾಸ್ಟಿಕ್‌, ಕೃಷಿ, ಆಹಾರ ಸಂಸ್ಕರಣೆ, ಹ್ಯಾಂಡ್‌ ಬ್ಯಾಗ್ಸ್‌, ಪಾದರಕ್ಷೆ ವಲಯಗಳಲ್ಲಿ ಹೂಡಿಕೆಗೆ ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿದ್ದಾರೆ.

ಮೈಸೂರು ವಿಭಾಗದ ಕೈಗಾರಿಕಾ ವಲಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಐದು ತಿಂಗಳ ಅವಧಿಯಲ್ಲಿ ಮೈಸೂರು,ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ವಿವಿಧ ಉದ್ಯಮಗಳು ₹ 1750 ಕೋಟಿ ಬಂಡವಾಳ ಹೂಡಿಕೆಗೆ ಸರ್ಕಾರದಿಂದ ಅನುಮೋದನೆ ಪಡೆದಿವೆ. ಇದರಿಂದ 2300 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಚಾಮರಾಜನಗರ ಜಿಲ್ಲೆಯಲ್ಲಿ ₹631.05 ಕೋಟಿ ಬಂಡವಾಳ ಹೂಡಲು 4 ಕೈಗಾರಿಕೆಗಳಿಗೆ ಅನುಮತಿ ದೊರೆತಿದ್ದು, 1 ಸಾವಿರ ಉದ್ಯೋಗಳು ಸೃಷ್ಟಿಯಾಗಲಿವೆ. ಮೈಸೂರು ಜಿಲ್ಲೆಯಲ್ಲಿ 8 ಉದ್ಯಮಗಳಿಂದ ₹231.65 ಕೋಟಿ
ಹೂಡಿಕೆಯಾಗಲಿದ್ದು , 900 ಜನರಿಗೆ ಉದ್ಯೋಗ ದೊರೆಯಲಿದೆ. ಮಂಡ್ಯ ಜಿಲ್ಲೆಯಲ್ಲಿ 6 ಸಂಸ್ಥೆಗಳು ₹121.11 ಕೋಟಿ ಬಂಡವಾಳ ಹೂಡಲಿದ್ದು, 240 ಜನರಿಗೆ ಕೆಲಸ ದೊರಕುವ ನಿರೀಕ್ಷೆ ಇದೆ.

ಅಡತಡೆಗಳಿಲ್ಲದೆ ಉದ್ಯಮಗಳು ಕಾರ್ಯಾರಂಭ ಮಾಡಬೇಕೆಂಬ ಉದ್ದೇಶದಿಂದ ಅನುಮತಿ ನೀಡಲು ಉನ್ನತ ಮಟ್ಟದ
ಸಮಿತಿ ರಚಿಸಲಾಗಿದೆ. ಮಾರ್ಚ್‌ 23 ರಿಂದ ಈವರೆಗೆ ₹1750 ಕೋಟಿ ಬಂಡವಾಳ ಹೂಡಿಕೆಗೆ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಹೂಡಿಕೆದಾರರ ಬೇಡಿಕೆಗನುಗುಣವಾಗಿ ಅಡೆತಡೆ ನಿವಾರಿಸಿ ಸೌಲಭ್ಯ ಒದಗಿಸಲು ‘ಕರ್ನಾಟಕ ಉದ್ಯೋಗ ಮಿತ್ರ’ ಎಂಬ ನೋಡಲ್ ಏಜೆನ್ಸಿ ಸ್ಥಾಪಿಸಲಾಗಿದೆ.

‘ಭೂಮಿ, ಮಾನವ ಸಂಪನ್ಮೂಲ ಲಭ್ಯತೆ, ಉತ್ತಮ ರಸ್ತೆ ಮತ್ತು ರೈಲು ಸಂಪರ್ಕ ಸೌಲಭ್ಯಗಳು ದೊರೆತೆರೆ ಉದ್ಯಮಿಗಳು ಹೂಡಿಕೆ ಮಾಡುತ್ತಾರೆ’ ಎನ್ನುತ್ತಾರೆ ಉದ್ಯಮಿ ದಲಿಚಂದ್‌ ಜೈನ್‌.

‘ಮಾರ್ಚ್‌ 23 ರಿಂದ ಈವರೆಗೆ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ₹ 1750 ಕೋಟಿ ಬಂಡವಾಳ ಹೂಡಿಕೆಗಾಗಿ 18 ಉದ್ಯಮಗಳಿಗೆ ಅನುಮತಿ ನೀಡಲಾಗಿದೆ. ಹಾಸನದಲ್ಲಿ ಆರು ಉದ್ಯಮಗಳು ₹700 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲಿವೆ. ಒಂದೆರಡು ವರ್ಷದಲ್ಲಿ ಉದ್ಯಮಗಳು ಕಾರ್ಯಾರಂಭ ಮಾಡುವುದರಿಂದ ಜಿಲ್ಲಾ ಕೇಂದ್ರಗಳಲ್ಲಿಯೂ ಉದ್ಯೋಗಳು ಸೃಷ್ಟಿಯಾಗಲಿವೆ’ ಎಂದು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‌‌

‘ರಾಜ್ಯದಲ್ಲಿ 163 ಯೋಜನೆಗಳ ಮೂಲಕ ₹ 31,676.57 ಕೋಟಿ ಹೂಡಿಕೆ ಮಾಡಲು ವಿವಿಧ ಕಂಪನಿಗಳು ಮುಂದಾಗಿದ್ದು, 65,459 ಉದ್ಯೋಗ ಸೃಷ್ಟಿಯಾಗಲಿವೆ. ಹೊಸ ಕೈಗಾರಿಕಾ ನೀತಿ ಹಾಗೂ ಕ್ರಮಗಳಿಂದಾಗಿ ಬಂಡವಾಳ ಹೂಡಿಕೆ ಬೃಹತ್ ಪ್ರಮಾಣದಲ್ಲಿ ಬಂದಿದೆ. ಕಾನೂನು ತಿದ್ದುಪಡಿ ಮಾಡಿರುವುದರಿಂದ ಉದ್ಯಮ ಆರಂಭಿಸಿದ ಮೂರು ವರ್ಷದೊಳಗೆ ಅನುಮತಿ ಪಡೆದುಕೊಳ್ಳಬಹುದು. ಹಿಂದೆ ವಿವಿಧ ಇಲಾಖೆಗಳಿಂದ ಎನ್‌ಒಸಿ, ಅನುಮತಿ ಪತ್ರ ಪಡೆದುಕೊಳ್ಳಬೇಕಾಗಿತ್ತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT