ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮೂಲಸೌಕರ್ಯ ದುರಸ್ತಿಗೆ ₹26 ಕೋಟಿ ಬಿಡುಗಡೆ

ಅತಿವೃಷ್ಟಿ ಮತ್ತು ಪ್ರವಾಹ: ಎರಡು ದಿನದೊಳಗೆ ಕ್ರಿಯಾಯೋಜನೆ ಸಲ್ಲಿಸಲು ಡಿ.ಸಿ ಸೂಚನೆ
Last Updated 2 ಫೆಬ್ರುವರಿ 2021, 14:58 IST
ಅಕ್ಷರ ಗಾತ್ರ

ಹಾವೇರಿ: 2020ರ ಆಗಸ್ಟ್, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನೀಗಾಡದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಜಿಲ್ಲೆಗೆ ₹25.99ಕೋಟಿಬಿಡುಗಡೆ ಮಾಡಿದೆ. ಅನುಷ್ಠಾನಾಧಿಕಾರಿಗಳು ಎರಡು ದಿನದೊಳಗಾಗಿ ಕಾಮಗಾರಿವಾರು ಅಂದಾಜು ವೆಚ್ಚ ಹಾಗೂ ಕ್ರಿಯಾಯೋಜನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅತಿವೃಷ್ಟಿ ಕಾಮಗಾರಿಗಳ ದುರಸ್ತಿ ಕುರಿತಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ನಡೆಸಿದರು. ಎರಡು ದಿನಗಳಲ್ಲಿ ಕ್ರಿಯಾಯೋಜನೆಯ ಅನುಮೋದನೆ ಪಡೆದು ನಿಗದಿತ ಅನುದಾನದ ಶೇ 75ರಷ್ಟು ಅನುದಾನ ಬಿಡುಗಡೆ ಮಾಡಿಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ದುರಸ್ತಿಗೆ ₹2.98 ಕೋಟಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳ ದುರಸ್ತಿಗೆ ₹10.45 ಕೋಟಿ, ಹೆಸ್ಕಾಂಗೆ ₹1.27 ಕೋಟಿ., ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಕೊಠಡಿ ಮತ್ತು ದುರಸ್ತಿಗೆ ₹9.16 ಕೋಟಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಟ್ಟಡಗಳ ದುರಸ್ತಿಗೆ 3.38 ಕೋಟಿ ಸೇರಿ ಒಟ್ಟು ₹25.99 ಕೋಟಿಯನ್ನು ಸರ್ಕಾರ ಅತಿವೃಷ್ಟಿ ಹಾಗೂ ಹಾನಿಗೀಡಾದ ಮೂಲಸೌಕರ್ಯಗಳ ತುರ್ತು ದುರಸ್ತಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಕಾಮಗಾರಿ ಬದಲಿಸುವಂತಿಲ್ಲ: 2020ರ ಆಗಸ್ಟ್, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಈಗಾಗಲೇ ತಾವು ಸಲ್ಲಿಸಿರುವ ಪ್ರಸ್ತಾವಗಳನ್ನು ಮಾತ್ರ ಕೈಗೆತ್ತಿಗೊಳ್ಳಬೇಕು. ಸ್ಥಳ ಮತ್ತು ಕಾಮಗಾರಿಗಳನ್ನು ಬದಲಾವಣೆ ಮಾಡುವ ಅವಕಾಶ ಇರುವುದಿಲ್ಲ. ಈಗಾಗಲೇ ಹಾನಿಯಾದ ಕಾಮಗಾರಿಗಳ ಸ್ಥಳ ಹಾಗೂ ವಿವರಗಳು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಆಗಿದೆ. ಈ ಕಾಮಗಾರಿಗಳನ್ನೇ ಹಂಚಿಕೆಯಾದ ಅನುದಾನದಲ್ಲಿ ದುರಸ್ತಿ ಮತ್ತು ನಿರ್ಮಾಣ ಕೈಗೊಳ್ಳುವಂತೆ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ರಮಕ್ಕೆ ಶಿಫಾರಸು: ಅತಿವೃಷ್ಟಿ ಪರಿಹಾರದಡಿ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡದೇ ವ್ಯರ್ಥ ಮಾಡಿದರೆ ಅಂತಹ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ನಮೂದಿಸಿ ಅಂತಹವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT