ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಾರದಿಂದ ನಿರಂತರ ಮಳೆ: 118 ಮನೆಗಳಿಗೆ ಹಾನಿ

61 ಹೆಕ್ಟೇರ್‌ ಕೃಷಿ ಬೆಳೆ ಹಾನಿ: 168 ಸರ್ಕಾರಿ ಶಾಲೆಗಳ ಕೊಠಡಿಗಳು ಭಾಗಶಃ ಶಿಥಿಲ
Last Updated 9 ಜುಲೈ 2022, 13:35 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದ ಒಟ್ಟು 118 ಮನೆಗಳಿಗೆ ಹಾನಿಯಾಗಿದ್ದು, ಕುಟುಂಬಸ್ಥರು ಪರದಾಡುವಂತಾಗಿದೆ.

ಹಾವೇರಿ–13, ರಾಣೆಬೆನ್ನೂರು–9, ಬ್ಯಾಡಗಿ– 26, ಹಿರೇಕೆರೂರು–19, ರಟ್ಟೀಹಳ್ಳಿ–23, ಸವಣೂರು–10, ಶಿಗ್ಗಾವಿ–4 ಸೇರಿದಂತೆ 115 ಮನೆಗಳು ಭಾಗಶಃ ಶಿಥಿಲವಾಗಿದ್ದು, 3 ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ.

ಜುಲೈ 1ರಿಂದ 9ರವರೆಗೆ ಜಿಲ್ಲೆಯಾದ್ಯಂತ 35.6 ಮಿ.ಮೀ. ಮಳೆಯಾಗುವ ಬದಲು 71.6 ಮಿ.ಮೀ. ಮಳೆಯಾಗಿದೆ. ಹಾವೇರಿ–45.2, ರಾಣೆಬೆನ್ನೂರು–54.3, ಬ್ಯಾಡಗಿ–91.1, ಹಿರೇಕೆರೂರು–98.7, ರಟ್ಟೀಹಳ್ಳಿ–59.5, ಸವಣೂರು–43.9, ಶಿಗ್ಗಾವಿ 66.6, ಹಾನಗಲ್‌ 123.9 ಮಿ.ಮೀ.ನಷ್ಟು ಮಳೆಯಾಗಿದೆ.

ಶಾಲಾ ಕೊಠಡಿಗಳಿಗೆ ಹಾನಿ:ಹಾವೇರಿ–20, ರಾಣೆಬೆನ್ನೂರು–22, ಬ್ಯಾಡಗಿ–16, ಹಿರೇಕೆರೂರು–12, ರಟ್ಟೀಹಳ್ಳಿ–11, ಸವಣೂರು–28, ಶಿಗ್ಗಾವಿ–26, ಹಾನಗಲ್‌–33 ಸೇರಿದಂತೆ ಒಟ್ಟು 168 ಸರ್ಕಾರಿ ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಅತಿವೃಷ್ಟಿ/ನೆರೆಯಿಂದ ನೂರಾರು ಶಾಲಾ ಕಟ್ಟಗಳಿಗೆ ಹಾನಿಯಾಗಿತ್ತು. ಈ ಬಾರಿಯೂ ಶಾಲಾ ಕೊಠಡಿಗಳು ಕುಸಿದು ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೆಳೆ ಹಾನಿ:61.65 ಹೆಕ್ಟೇರ್‌ ಕೃಷಿ ಬೆಳೆ ಮತ್ತು 4.4 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಎರಡು ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ 15 ದಿನದೊಳಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ವ್ಯಾಪ್ತಿಯ 125 ಕಿ.ಮೀ. ರಸ್ತೆ ಅತಿವೃಷ್ಟಿ ಮತ್ತು ನೆರೆಯಿಂದ ಹಾಳಾಗಿದ್ದು, ಸುಮಾರು 1.88 ಕೋಟಿ ನಷ್ಟವಾಗಿದೆ ಎನ್ನಲಾಗಿದೆ. 97 ವಿದ್ಯುತ್‌ ಕಂಬಗಳು, 1 ವಿದ್ಯುತ್‌ ಪರಿವರ್ತಕ (ಟಿ.ಸಿ) ಹಾಳಾಗಿವೆ. 13 ಸೇತುವೆಗಳಿಗೂ ಹಾನಿಯಾಗಿದೆ.

ರಕ್ಷಣಾ ತಂಡ ಸಜ್ಜು:ಹಾವೇರಿ ಜಿಲ್ಲೆಯಲ್ಲಿ 4 ಬೋಟ್‌ಗಳು, 100 ಲೈಫ್‌ ಜಾಕೆಟ್‌ಗಳು, 33 ಹಗ್ಗಗಳು ಸೇರಿದಂತೆ ₹35 ಲಕ್ಷ ವೆಚ್ಚದಲ್ಲಿ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿದ್ದು, ಪ‍್ರಾಕೃತಿಕ ವಿಪತ್ತು ಎದುರಿಸಲು ಜಿಲ್ಲಾ ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್‌ ತಂಡ ಸಜ್ಜಾಗಿದೆ.

ರಸ್ತೆ ಸಂಪರ್ಕ ಕಡಿತ; ಸಂಚಾರಕ್ಕೆ ತೊಡಕು:ವರದಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಸವಣೂರು ತಾಲ್ಲೂಕಿನ ಕಳಸೂರು–ದೇವಗಿರಿ ರಸ್ತೆ, ಹಾನಗಲ್‌ ತಾಲ್ಲೂಕಿನ ಕೂಡಲ–ನಾಗನೂರು ರಸ್ತೆ, ಹಾವೇರಿ ತಾಲ್ಲೂಕಿನ ಹಾಲಗಿ–ಗೂಡೂರು ರಸ್ತೆ ಸಂಪರ್ಕ ಕಡಿತಗೊಂಡಿವೆ.ನಿರಂತರ ಮಳೆಯಿಂದ ಕುಮದ್ವತಿ ನದಿ ಮೈದುಂಬಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ, ರಟ್ಟೀಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ–ಶಿಕಾರಿಪುರ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT