ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 141 ಗ್ರಾಮಗಳಿಗೆ ಮುಳುಗಡೆ ಭೀತಿ!

ಮುಂಗಾರು ವಿಪತ್ತು ಎದುರಿಸಲು ಜಿಲ್ಲಾಡಳಿತ ಸಜ್ಜು: ಸಾರ್ವಜನಿಕರ ಸಂಪರ್ಕಕ್ಕೆ ‘ಸಹಾಯವಾಣಿ’ ಆರಂಭ
Last Updated 11 ಜೂನ್ 2021, 2:03 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ತಗ್ಗು ಪ್ರದೇಶದಲ್ಲಿರುವ 141 ಗ್ರಾಮಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ. ಹೀಗಾಗಿ ಮುಂಗಾರು ಮಳೆಗಾಲದ ಸಂದರ್ಭ ಅತಿವೃಷ್ಟಿ ಮತ್ತು ಪ್ರವಾಹದಿಂದ ಎದುರಾಗಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

ಜಿಲ್ಲೆಯಲ್ಲಿ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಹರಿಯುತ್ತವೆ. ವರುಣನ ಆರ್ಭಟದಿಂದ ನದಿಗಳು ಉಕ್ಕಿ ಹರಿದರೆ ಉಂಟಾಗುವ ಪ್ರವಾಹದಿಂದ ಜನ–ಜಾನುವಾರುಗಳನ್ನು ರಕ್ಷಿಸಲು ಅಗತ್ಯ ಸಿದ್ಧತೆಗೆ ಎಂಟು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಏಳು ತಾಲ್ಲೂಕುಗಳ 141 ಗ್ರಾಮಗಳಲ್ಲಿ ವಾಸಿಸುತ್ತಿರುವ 1.31 ಲಕ್ಷ ಜನ ಮತ್ತು 1.71 ಲಕ್ಷ ಜಾನುವಾರುಗಳನ್ನು ಅಗತ್ಯ ಬಿದ್ದರೆ ಸ್ಥಳಾಂತರ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಗ್ರಾಮಗಳಲ್ಲಿ 2125 ಗರ್ಭಿಣಿಯರು, 2176 ಅಂಗವಿಕಲರು, 20,726 ಮಕ್ಕಳು ವಾಸಿಸುತ್ತಿದ್ದು, ಇವರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

22 ಸಾವಿರ ಮನೆಗಳಿಗೆ ಹಾನಿ: ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 779 ಮಿಲಿ ಮೀಟರ್‌. ಆದರೆ 2019ರಲ್ಲಿ ಒಟ್ಟು 997 ಮಿಲಿ ಮೀಟರ್‌ ಮಳೆಯಾದ ಪರಿಣಾಮ, ಅತಿವೃಷ್ಟಿ ಮತ್ತು ಪ್ರವಾಹದಿಂದ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿತ್ತು. ಬರೋಬ್ಬರಿ22,899 ಮನೆಗಳು ಶಿಥಿಲಗೊಂಡು, 1.82 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. 9 ಜೀವಹಾನಿ ಹಾಗೂ 2,223 ಜಾನುವಾರುಗಳಿಗೆ ಹಾನಿಯಾಗಿತ್ತು.

17 ಸಾವಿರ ಹೆಕ್ಟೇರ್‌ ಬೆಳೆ ನಾಶ: ಕಳೆದ ವರ್ಷ 2020ರಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದ 14,653 ಹೆಕ್ಟೇರ್‌ ಕೃಷಿ ಬೆಳೆ, 2,520 ಹೆಕ್ಟೇರ್‌ ತೋಟಗಾರಿಕಾ ಬೆಳೆ ಸೇರಿದಂತೆ ಒಟ್ಟು 17,173 ಹೆಕ್ಟೇರ್‌ ಬೆಳೆ ನಾಶವಾಗಿತ್ತು. 2,667 ಮನೆಗಳು ಭಾಗಶಃ ಮತ್ತು 25 ಮನೆಗಳು ಸಂಪೂರ್ಣ ಹಾನಿಯಾಗಿದ್ದವು. ಜತೆಗೆ ಐವರು ವ್ಯಕ್ತಿಗಳು ಹಾಗೂ ನಾಲ್ಕು ಜಾನುವಾರು ಮೃತಪಟ್ಟಿದ್ದವು. 57 ಕಿ.ಮೀ ರಾಜ್ಯ ಹೆದ್ದಾರಿ, 218 ಜಿಲ್ಲಾ ಮುಖ್ಯ ರಸ್ತೆ, 43 ಸೇತುವೆ, ಮೂರು ಸರ್ಕಾರಿ ಕಟ್ಟಡಗಳು ಹಾನಿಯಾಗಿದ್ದು, ಅಂದಾಜು ₹176.66 ಕೋಟಿ ಹಾನಿ ಸಂಭವಿಸಿತ್ತು.

ನೋಡಲ್‌ ಅಧಿಕಾರಿಗಳ ನೇಮಕ: ಮನೆ ಹಾನಿ, ಬೆಳೆ ಹಾನಿ, ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿ ಉಂಟಾದರೆ, ಪರಿಶೀಲನೆ ನಡೆಸಿ ತುರ್ತಾಗಿ ಪರಿಹಾರ ವಿತರಣೆ ಕಾರ್ಯ ಕೈಗೊಳ್ಳಲು ಹಾಗೂ ಪರಿಹಾರ ಕೇಂದ್ರ ತೆರೆಯಲು ಪ್ರತಿ ತಾಲ್ಲೂಕಿಗೂ ಇಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ‘ನೋಡಲ್‌ ಅಧಿಕಾರಿ’ಗಳನ್ನಾಗಿ ನೇಮಿಸಲಾಗಿದೆ.

ನದಿಗಳ ಮಟ್ಟ; ಅಧಿಕಾರಿಗಳ ಕಣ್ಗಾವಲು

‘ಜಿಲ್ಲೆಯ ಎಲ್ಲ ನದಿಗಳ ನೀರಿನ ಮಟ್ಟದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡು, ನಿತ್ಯ ಮಳೆ ಪ್ರಮಾಣ, ನದಿ ನೀರಿನ ಮಟ್ಟ ಹಾಗೂ ಹಾನಿಯ ವರದಿಯನ್ನು ಸಲ್ಲಿಸಲು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಜೀವ ಹಾನಿ, ಮನೆ ಹಾನಿ, ಜಾನುವಾರು ಹಾನಿಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದ್ದಾರೆ.

***

ಪ್ರಾಕೃತಿಕ ವಿಕೋಪ: ಸಹಾಯವಾಣಿ ವಿವರ

ಜಿಲ್ಲೆ/ತಾಲ್ಲೂಕು; ದೂರವಾಣಿ ಸಂಖ್ಯೆ

ಜಿಲ್ಲಾಧಿಕಾರಿ ಕಚೇರಿ;08375–249102

ಹಾವೇರಿ;08375–232445

ರಾಣೆಬೆನ್ನೂರು;08373–260449

ಬ್ಯಾಡಗಿ;08375–228428

ಹಿರೇಕೆರೂರು;08376–282231

ರಟ್ಟೀಹಳ್ಳಿ;9008692647

ಸವಣೂರು;08378–241626

ಶಿಗ್ಗಾವಿ;8147050299

ಹಾನಗಲ್‌;08379–262241

*******

ಮುಳುಗಡೆ ಭೀತಿಯಲ್ಲಿರುವ ಗ್ರಾಮಗಳ ವಿವರ

ತಾಲ್ಲೂಕು;ಗ್ರಾಮಗಳ ಸಂಖ್ಯೆ; ಜನಸಂಖ್ಯೆ

ಹಾವೇರಿ;33;7,733

ರಾಣೆಬೆನ್ನೂರು;28;79,375

ಬ್ಯಾಡಗಿ;7;319

ಹಿರೇಕೆರೂರು;0;0

ರಟ್ಟೀಹಳ್ಳಿ;3;270

ಸವಣೂರು;15;1,378

ಶಿಗ್ಗಾವಿ;32;7,700

ಹಾನಗಲ್‌;23;35,152

ಒಟ್ಟು;141;1,31,927

***

ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ‘ಅಗ್ನಿ’ ಸಿಬ್ಬಂದಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಜಿಲ್ಲೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಸಜ್ಜಾಗಿದ್ದಾರೆ.

‘ಜಿಲ್ಲೆಯ 7 ಅಗ್ನಿಶಾಮಕ ಠಾಣೆಗಳಲ್ಲಿ 7 ಜನರೇಟರ್‌, 14 ಪೋರ್ಟಬಲ್‌ ಪಂಪ್‌, 105 ರೈನ್‌ ಕೋಟ್‌, 73 ಲೈಫ್‌ ಜಾಕೆಟ್‌, 70 ಫೈಬರ್‌ ರಿಂಗ್‌ , 30 ಪಾತಾಳ ಗರಡಿ, 1 ಬೋಟ್‌ ಸೇರಿದಂತೆ ಅಗತ್ಯ ಪರಿಕರಗಳನ್ನು ಸಿದ್ಧಪಡಿಸಿ ಇಡಲಾಗಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ತಿಳಿಸಿದರು.

ಹೆಚ್ಚುವರಿಯಾಗಿ 2 ಬೋಟ್, 50 ರೈನ್‌ ಕೋಟ್‌, 50 ಲೈಫ್‌ಜಾಕೆಟ್‌, 20 ರೀಚಾರ್ಜಬಲ್‌ ಟಾರ್ಚ್‌ಗಳನ್ನು ಪೂರೈಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತದ ಬಳಿ ₹53 ಕೋಟಿ ವಿಪತ್ತು ಪರಿಹಾರ ನಿಧಿ ಇದ್ದು, 141 ಕಾಳಜಿ ಕೇಂದ್ರ ತೆರೆಯಲು ಶಾಲಾ ಕಟ್ಟಡಗಳನ್ನು ಗುರುತಿಸಲಾಗಿದೆ
–ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT