ಮಂಗಳವಾರ, ನವೆಂಬರ್ 24, 2020
21 °C
ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಭಸ್ಮ: ಗ್ರಾಹಕ ಆಯೋಗ ತೀರ್ಪು

ಹಾವೇರಿ: ರೈತನಿಗೆ ₹ 1.54 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ದಿ ಗ್ರಾಮದ ರೈತ ಸುಬ್ಬರಾವ್ ಅನಂತರಾವ್ ದೈವಜ್ಞ ಅವರ ಜಮೀನಲ್ಲಿ ಬೆಳೆದ ಎರಡು ಎಕರೆ ಕಬ್ಬು ಬೆಳೆ ವಿದ್ಯುತ್ ಶಾರ್ಟ್‌ ಸರ್ಕಿಟ್‍ನಿಂದ ಸುಟ್ಟ ಕಾರಣ ರೈತನಿಗೆ ₹1.54 ಲಕ್ಷ ಪರಿಹಾರ ನೀಡಲು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಗ್ರಾಹಕರ ಆಯೋಗದ ಸದಸ್ಯೆ ಮಹೇಶ್ವರಿ ಬಿ.ಎಸ್. ತೀರ್ಪು ನೀಡಿದ್ದಾರೆ.

ರೈತ ಸುಬ್ಬರಾವ್ ಅನಂತರಾವ್ ದೈವಜ್ಞ ಅವರ ಮಗ ನಾಗರಾಜ ಸುಬ್ಬರಾವ್ ದೈವಜ್ಞ ಅವರು ತಮ್ಮ ಹೊದಲ್ಲಿ ಹಾದು ಹೋಗಿರುವ 11 ಕೆ.ವಿ. ವಿದ್ಯುತ್ ತಂತಿ ಸಡಿಲವಾಗಿದ್ದು, ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹತ್ತುವ ಹಾಗೂ ಲೈನ್ ಕಟ್ ಆಗುವ ಸಂಭವವಿತ್ತು. ಈ ಬಗ್ಗೆ ತಂತಿಗಳನ್ನು ಸರಿಪಡಿಸುವಂತೆ ಆಡೂರು ಹಾಗೂ ಹಾನಗಲ್ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದರು.

ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ನವೆಂಬರ್ 21, 2019ರಂದು ತಮ್ಮ ಎರಡು ಎಕರೆ ಜಮೀನಲ್ಲಿ ಕಟಾವಿಗೆ ಬಂದ ಕಬ್ಬು ಬೆಳೆ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಸುಟ್ಟು ಭಸ್ಮವಾಗಿದೆ. ಒಂದು ಎಕರೆಗೆ 80 ಟನ್‍ನಂತೆ ಎರಡು ಎಕರೆ 160 ಟನ್ ಕಬ್ಬು ನಾಶವಾಗಿದೆ ಎಂದು ದೂರು ದಾಖಲಿಸಿದ್ದರು.

ಸದರಿ ಪ್ರಕರಣದ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಮಹೇಶ್ವರಿ ಬಿ.ಎಸ್. ಕೂಲಂಕಷವಾಗಿ ಪರಿಶೀಲಿಸಿ ಮೇಲಿನಂತೆ ತೀರ್ಪು ನೀಡಿದ್ದಾರೆ.

ಪರಿಹಾರದ ಜೊತೆಗೆ ರೈತನ ಮಾನಸಿಕ ವ್ಯಥೆಗೆ ₹2000 ಹಾಗೂ ದೂರು ದಾಖಲೆ ವೆಚ್ಚ ₹2000ಗಳನ್ನು ಒಂದು ತಿಂಗಳೊಳಗಾಗಿ ಪಾವತಿಸಬೇಕು ಎಂದು ತೀರ್ಪು ನೀಡಿದ್ದಾರೆ.

ರೈತನ ಪರವಾಗಿ ವಕೀಲರಾದ ಪಿ.ಸಿ.ಸವಣೂರ ಹಾಗೂ ಹೆಸ್ಕಾಂ ಪರವಾಗಿ ಬಿ.ಎನ್. ಕಡಕೋಳ ಅವರು ವಾದವನ್ನು ಮಂಡಿಸಿದ್ದರು ಎಂದು ಜಿಲ್ಲಾ ಗ್ರಾಹಕ ಆಯೋಗದ ಪ್ರಭಾರ ಸಹಾಯಕ ನೋಂದಣಾಧಿಕಾರಿ ಮತ್ತು ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.