ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯ ನೀರಾವರಿಗೆ ₹1614 ಕೋಟಿ ಅನುದಾನ

ಬ್ಯಾಡಗಿಯಲ್ಲಿ ₹693 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ
Last Updated 1 ಫೆಬ್ರುವರಿ 2023, 16:43 IST
ಅಕ್ಷರ ಗಾತ್ರ

ಹಾವೇರಿ: ‘ನಮ್ಮ ಸರ್ಕಾರ ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡಿದೆ. ನಾಲ್ಕು ವರ್ಷಗಳಲ್ಲಿ ₹1614 ಕೋಟಿ ಅನುದಾನವನ್ನು ಹಾವೇರಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಒದಗಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬ್ಯಾಡಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ₹693.88 ಕೋಟಿ ಮೊತ್ತದ ಬುಡಪನಹಳ್ಳಿ, ಆಣೂರು, ಅಸುಂಡಿ ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ, ಕಾಗಿನೆಲೆ ಕನಕ ಮ್ಯೂಸಿಯಂ, ನಿಸರ್ಗ ಚಿಕಿತ್ಸಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬ್ಯಾಡಗಿ ಅಭಿವೃದ್ಧಿ ಇತಿಹಾಸದಲ್ಲಿ ಅತಿ ದೊಡ್ಡ ಮೊತ್ತದ ನೀರಾವರಿ ಕಾಮಗಾರಿಗಳ ಲೋಕಾರ್ಪಣೆಗೊಳಿಸುತ್ತಿರುವುದು ಇದೇ ಮೊದಲು. ₹460 ಕೋಟಿ ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರ ಬ್ಯಾಡಗಿ ರೈತರಿಗೆ ಸಮರ್ಪಿಸುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ಬೆಳೆಗಳ ಮೌಲ್ಯವರ್ಧನೆ:

ಬ್ಯಾಡಗಿಯ ನೆಲ ಅತ್ಯಂತ ಫಲವತ್ತತೆ ಹೊಂದಿದ ನೆಲ. ಇಲ್ಲಿಯ ರೈತರ ಹೊಲಗಳಿಗೆ ನೀರು ಕೊಟ್ಟರೆ ಸಂಪದ್ಭರಿತ ಬೆಳೆ ಬೆಳೆಯಬಲ್ಲರು. ರೈತರು ಬೆಳೆದ ತರಕಾರಿ ಹಾಗೂ ಬೆಳೆಗಳನ್ನು ಮೌಲ್ಯವರ್ಧನೆಗೊಳಿಸಿದರೆ ಹೆಚ್ಚು ಬಲ ಬರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತರಿಗಾಗಿ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಮಾಡಿಕೊಟ್ಟಿದೆ ಎಂದರು.

ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ 51 ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿ ಕೆಲಸ ಪ್ರಾರಂಭಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ₹150 ಕೋಟಿ ಮೊತ್ತದ ಕಾಮಗಾರಿ ಪ್ರಾರಂಭವಾಗಿದ್ದು, ಮುಂದಿನ ಹನ್ನೆರಡು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ನೀಡಲಾಗಿದೆ ಎಂದರು.

ನೀರಾವರಿಗೆ ಆದ್ಯತೆ:

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬ್ಯಾಡಗಿ ತಾಲೂಕಿನಲ್ಲಿ ₹460 ಕೋಟಿ ವೆಚ್ಚದಲ್ಲಿ 81 ಕೆರೆಗಳನ್ನು ತುಂಬಿಸುವ ಮೂಲಕ 60 ಹಳ್ಳಿಗಳ ರೈತರಿಗೆ ನೀರು ಒದಗಿಸುವ ಕೆಲಸ ಮಾಡಲಾಗಿದೆ. ₹700 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದು ನಮ್ಮ ಸರ್ಕಾರ ಮತ್ತು ಇತರ ಸರ್ಕಾರಕ್ಕೆ ಇರುವ ವ್ಯತ್ಯಯ ಎಂದು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಎರಡು ಲಕ್ಷ ಎಕರೆ ಹೊಸ ನೀರಾವರಿ ಕ್ಷೇತ್ರವನ್ನು ವಿಸ್ತೀರ್ಣ ಮಾಡಲಾಗಿದೆ. ನೀರಾವರಿಗಾಗಿ ರಾಜ್ಯದಲ್ಲಿ ₹63 ಸಾವಿರ ಕೋಟಿಯನ್ನು ಕಳೆದ ಎರಡು ವರ್ಷಗಳಲ್ಲಿ ಖರ್ಚು ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನೀರಾವರಿಗಾಗಿ ₹1507 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿ ಕ್ಷೇತ್ರದಲ್ಲಿ ಶಾಶ್ವತವಾದ ನೀರಾವರಿ ಯೋಜನೆಗಳಿಲ್ಲದೆ ರೈತರು ತೀವ್ರ ತೊಂದರೆಯಲ್ಲಿದ್ದರು. ನಮ್ಮ ಸರ್ಕಾರ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಶಕ್ತಿ ನೀಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೃಷಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಅಭಿವೃದ್ಧಿ ಪರ್ವವೇ ನಡೆದಿದೆ ಎಂದು ಹೇಳಿದರು.

ಬ್ಯಾಡಗಿ ಮೂಲಸೌಕರ್ಯಕ್ಕೆ ಬದ್ಧ: ಸಿಎಂ

‘ಅಂತರರಾಷ್ಟ್ರೀಯ ಮಾರುಕಟ್ಟೆ ಕೇಂದ್ರವಾಗಿ ಗುರುತಿಸಿಕೊಂಡಿರುವ ಬ್ಯಾಡಗಿ ಪಟ್ಟಣಕ್ಕೆ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾನು ಮುತುವರ್ಜಿ ವಹಿಸುವೆ. ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಭಿವೃದ್ಧಿ ಹಾಗೂ ಬಸವೇಶ್ವರ ನಗರದ ಅಭಿವೃದ್ಧಿಗೆ ಹಾಗೂ ಮೋಟೆಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರ ಕಲ್ಪಿಸಲು ಕ್ರಮವಹಿಸುವೆ. ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ 12 ಶೀತಲೀಕರಣ ಘಟಕಗಳಿಗೆ ಜನರೇಟರ್ ಖರೀದಿಗೆ ಅಗತ್ಯವಾದ ಹೆಚ್ಚುವರಿ ಅನುದಾನವನ್ನು ಒದಗಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

‘ಬದ್ಧತೆಯನ್ನು ಯಾರಿಂದಲೂ ಕಲಿಯಬೇಕಿಲ್ಲ’

‘ಎಂಜಿನಿಯರಿಂಗ್‌ ಕಾಲೇಜು, ನೀರಾವರಿ ಯೋಜನೆಗಳು, ಮೆಗಾ ಡೇರಿ, ಮೆಗಾ ಎಪಿಎಂಸಿ, ಟೆಕ್ಸ್‌ಟೈಲ್‌ ಪಾರ್ಕ್‌ ಈ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದು ನಮ್ಮ ಸರ್ಕಾರ. ಅಭಿವೃದ್ಧಿಯ ಪರ ಮಾತನಾಡುವ ನೈತಿಕತೆ ಇರುವುದು ನಮ್ಮ ಸರ್ಕಾರಕ್ಕೆ ಮಾತ್ರ. ಸಿದ್ದರಾಮಯ್ಯನವರ ಆರೋಪಕ್ಕೆ ಉತ್ತರ ಕೊಡುವ ಕಡೆ ಕೊಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ಬದ್ಧತೆಯಿಂದ ಕೆಲಸ ಮಾಡುವುದನ್ನು ಯಾರಿಂದಲೂ ಕಲಿಯಬೇಕಿಲ್ಲ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಎಂ.ಈಟೇರ್, ಶಾಸಕ ಅರುಣಕುಮಾರ ಪೂಜಾರ, ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಬ್ಯಾಡಗಿ ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಚಲವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಮಹೇಶ ತೆಂಗಿನಕಾಯಿ, ಸಿದ್ಧರಾಜ ಕಲಕೋಟಿ ಇದ್ದರು.

***

ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿತು. 40 ಸಾವಿರ ಪೌರಕಾರ್ಮಿಕರನ್ನು ಕಾಯಂ ಮಾಡುವ ಶಪಥ ಮಾಡಲಾಗಿದೆ
– ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ‌

ಅರಬಗೊಂಡದಲ್ಲಿ ಮೆಗಾ ಡೇರಿ, ರಸ್ತೆ ದುರಸ್ತಿ, ನೀರಾವರಿ ಯೋಜನೆ ಸೇರಿದಂತೆ ನನ್ನ ಕ್ಷೇತ್ರಕ್ಕೆ ₹1800 ಕೋಟಿಯನ್ನು ರಾಜ್ಯ ಸರ್ಕಾರ ನೀಡಿದೆ
– ವಿರೂಪಾಕ್ಷಪ್ಪ ಬಳ್ಳಾರಿ, ಬ್ಯಾಡಗಿ ಶಾಸಕ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT