ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಸಾವಿರ ಅಂಗನವಾಡಿಗಳಿಗೆ ‘ನರೇಗಾ’ ಭಾಗ್ಯ!

ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಕೇಂದ್ರಗಳಿಗೆ ಸ್ವಂತ ಸೂರು ಕಲ್ಪಿಸಲು ನಿರ್ಧಾರ
Last Updated 2 ಫೆಬ್ರುವರಿ 2021, 5:45 IST
ಅಕ್ಷರ ಗಾತ್ರ

ಹಾವೇರಿ: ದೇವಸ್ಥಾನದ ಆವರಣ, ಮನೆಯ ಜಗುಲಿ ಮತ್ತು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ರಾಜ್ಯದ 21,399 ಅಂಗನವಾಡಿ ಕೇಂದ್ರಗಳಿಗೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ’ಯಡಿ (ನರೇಗಾ) ಸ್ವಂತ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಒಟ್ಟು 66,015 ಅಂಗನವಾಡಿ ಕೇಂದ್ರಗಳು ಇದ್ದು, ಇವುಗಳಲ್ಲಿ 44,616 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಉಳಿದ 21,399 ಕೇಂದ್ರಗಳಿಗೆ (ಶೇ 32) ಸ್ವಂತ ಸೂರಿಲ್ಲ. ಹೀಗಾಗಿಪಂಚಾಯಿತಿ ಕಟ್ಟಡ, ಸಮುದಾಯ ಭವನ, ಯುವಕ ಮಂಡಲ, ಮಹಿಳಾ ಮಂಡಲ, ದೇವಸ್ಥಾನ, ಬಾಡಿಗೆ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯ ಕೇಂದ್ರವು (ಕೆ.ಎಸ್.‌ಆರ್‌.ಎಸ್.‌ಎ.ಸಿ) ರಾಜ್ಯದ ಅಂಗನವಾಡಿ ಸ್ಥಿತಿಗತಿಗಳ ಮಾಹಿತಿಯನ್ನು ಕಲೆ ಹಾಕಿ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ವರದಿ ಸಲ್ಲಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳಿಗೆ ‘ನರೇಗಾ’ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತರು 30 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಲಸೌಕರ್ಯ ಕಲ್ಪಿಸಿ:‘ಕೆಲವು ಅಂಗವನಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದರೂ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯದ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದು ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.‘ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ’ ಎಂಬ ಮಾತಿನಂತೆ, ಅಂಗನವಾಡಿಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸಬೇಕು’ ಎನ್ನುತ್ತಾರೆ ಸಾಮಾಜಿಕ ಪರಿವರ್ತನಾ ಜನಾಂದೋಲನದ ಹಾವೇರಿ ಜಿಲ್ಲಾ ಸಂಚಾಲಕಿ ಹಸೀನಾ ಹೆಡಿಯಾಲ.

‘ಮಕ್ಕಳು ವೋಟ್‌ ಬ್ಯಾಂಕ್‌ ಅಲ್ಲ ಎಂಬ ಕಾರಣದಿಂದ ಜನಪ್ರತಿನಿಧಿಗಳು ಅಂಗನವಾಡಿಗಳ ಸುಧಾರಣೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಕಾನ್ವೆಂಟ್‌ಗಳು ತಲೆ ಎತ್ತಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ.ಅಂಗನವಾಡಿಯ ಪ್ರತಿ ಮಗುವಿಗೆ ದಿನಕ್ಕೆ ಸರ್ಕಾರ ₹6 ನೀಡುತ್ತಿದ್ದು, ಇದನ್ನು ₹10ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಜಾಗ ಗುರುತಿಸಲು ಕ್ರಮ: ಸಿಇಒ

ಹಾವೇರಿ ಜಿಲ್ಲೆಯಲ್ಲಿ 484 ಅಂಗನವಾಡಿ ಕೇಂದ್ರಗಳಿಗೆ ‘ನರೇಗಾ’ದಡಿ ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಾಗದ ಕೊರತೆಯಿದ್ದಲ್ಲಿ ದಾನಿಗಳಿಂದ ಜಮೀನು ಪಡೆದು ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ‘ಜಲಜೀವನ ಮಿಷನ್‌’ ಯೋಜನೆಯಡಿ ಶಾಲೆ–ಅಂಗನವಾಡಿಗಳಿಗೆ ಕುಡಿಯುವ ನೀರು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

– ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ

***

ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಜಿಲ್ಲಾವಾರು ವಿವರ

ಬೆಳಗಾವಿ;2199

ಬಾಗಲಕೋಟೆ;793

ವಿಜಯಪುರ;1000

ಕಲ್ಬುರ್ಗಿ;1161

ಬೀದರ್‌;634

ರಾಯಚೂರು;1023

ಕೊಪ್ಪಳ;564

ಗದಗ;301

ಧಾರವಾಡ;698

ಉತ್ತರ ಕನ್ನಡ;672

ಹಾವೇರಿ;484

ಬಳ್ಳಾರಿ;756

ಚಿತ್ರದುರ್ಗ;587

ದಾವಣಗೆರೆ;579

ಶಿವಮೊಗ್ಗ;522

ಉಡುಪಿ;154

ಚಿಕ್ಕಮಗಳೂರು;272

ತುಮಕೂರು;1330

ಕೋಲಾರ;1070

ಬೆಂಗಳೂರು (ನ);1402

ಬೆಂಗಳೂರು (ಗ್ರಾ);259

ಮಂಡ್ಯ;888

ಹಾಸನ;746

ದ.ಕನ್ನಡ;248

ಕೊಡಗು;128

ಮೈಸೂರು;684

ಚಾ.ನಗರ;347

ಚಿಕ್ಕಬಳ್ಳಾಪುರ;915

ರಾಮನಗರ;582

ಯಾದಗಿರಿ;401

ಒಟ್ಟು;21,399

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT