ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ನೌಕರರ ವಿರುದ್ಧ ಎಫ್‌ಐಆರ್‌ ‌

9 ದಿನ ಪೂರೈಸಿದ ಮುಷ್ಕರ: ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ ಅಡ್ಡಿ ಮತ್ತು ಬೆದರಿಕೆ ಆರೋಪ
Last Updated 15 ಏಪ್ರಿಲ್ 2021, 16:43 IST
ಅಕ್ಷರ ಗಾತ್ರ

ಹಾವೇರಿ: ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಬೆದರಿಕೆ ಒಡ್ಡಿದ್ದಾರೆ ಮತ್ತು ಅವಮಾನಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮುಷ್ಕರ ನಿರತರಾದ ಒಟ್ಟು 22 ಸಾರಿಗೆ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಠಾಣೆಯಲ್ಲಿ 12 ನೌಕರರು, ಬ್ಯಾಡಗಿ ಠಾಣೆಯಲ್ಲಿ 5 ನೌಕರರು, ಹಾವೇರಿ ಗ್ರಾಮೀಣ ಠಾಣೆ ಮತ್ತು ಶಹರ ಠಾಣೆಯಲ್ಲಿ ತಲಾ ಒಬ್ಬ ನೌಕರ ಹಾಗೂ ಹಿರೇಕೆರೂರು ಪೊಲೀಸ್‌ ಠಾಣೆಯಲ್ಲಿ 3 ನೌಕರರು ಸೇರಿದಂತೆ ಒಟ್ಟು 22 ನೌಕರರ ವಿರುದ್ಧ ಆಯಾ ಘಟಕ ವ್ಯವಸ್ಥಾಪಕರು ದೂರು ನೀಡಿದ್ದಾರೆ.

ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಅಡ್ಡಿಪಡಿಸುತ್ತಾ, ಸಾರಿಗೆ ಬಸ್ಸುಗಳನ್ನು ತಡೆದು, ಘಟಕಕ್ಕೆ ವಾಪಸ್‌ ಕಳುಹಿಸುತ್ತಿದ್ದಾರೆ. ದೂರವಾಣಿ ಕರೆ ಮತ್ತು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಕೆಲಸಕ್ಕೆ ಹಾಜರಾಗದಂತೆ ಪ್ರಚೋದನೆ ನೀಡುತ್ತಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುತ್ತಾ, ಸಾರಿಗೆ ನೌಕರರನ್ನು ಅವಮಾನಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಾಂತೇಶ ಬೆಣ್ಣಿಹಳ್ಳಿ, ಪ್ರಭು ಲಮಾಣಿ, ಯು.ಆರ್‌. ಆನ್ವೇರಿ, ಎನ್.‌ ರಮೇಶ, ಎಸ್‌.ಕೆ. ಪಾಟೀಲ, ವಿರೇಶ ಚಿಕ್ಕಬಿದರಿ, ಗಿರೀಶ ಹಂಚಿನಮನಿ, ಎಚ್‌.ತಿಮ್ಮಾರಡ್ಡಿ, ಎ.ಎನ್‌. ಖಾಜಿ, ಕೆ.ಇಮ್ರಾನ್‌ ಬಾಷಾ, ಎನ್‌.ಅಂಬರೀಶ, ಸುರೇಶ ನಿಡಗುಂದಿ ವಿರುದ್ಧ ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಘಟಕ ವ್ಯವಸ್ಥಾಪಕ ಶಿವಮೂರ್ತಿ ಎಸ್‌. ದೂರು ನೀಡಿದ್ದಾರೆ.

ಹಿರೇಕೆರೂರು ತಾಲ್ಲೂಕು ಮಾಸೂರು ಗ್ರಾಮದ ಆಂಜನೇಯ ದೇವಸ್ಥಾನದ ಸಮೀಪ ಹೊರಟಿದ್ದ ಬಸ್‌ ಅನ್ನು ಬುಧವಾರ ಕೆ.ಎಂ.ಗಂಜಿ, ಎ.ಜೆ. ಪಠಾಣ ಹಾಗೂ ಆರ್.ಎನ್. ಗಿರಿಯಣ್ಣನವರ ಇತರೆ ಸಾರ್ವಜನಿಕರೊಂದಿಗೆ ಸೇರಿ 45 ನಿಮಿಷ ಅಡ್ಡಗಟ್ಟಿದ್ದಾರೆ ಎಂದು ವಾಯವ್ಯ ಸಾರಿಗೆ ಘಟಕದ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯಾಡಗಿ ಠಾಣೆಯಲ್ಲಿ ಎಂ.ಎಸ್‌.ವಾರದ, ಚಂದ್ರು ಸಿ.ದಾನಪ್ಪನವರ, ಎಸ್‌.ಬಿ. ಹಕ್ಕರಕಿ, ಕೆ.ಎನ್‌. ಆನ್ವೇರಿ, ಎಂ.ಎಂ. ಮುಲ್ಲಾನವರ ಈ ಐವರ ವಿರುದ್ಧ ದೂರು ದಾಖಲಾಗಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಜೆ.ಪಿ. ಚವ್ಹಾಣ ಹಾಗೂ ಶಹರ ಪೊಲೀಸ್‌ ಠಾಣೆಯಲ್ಲಿ ಸಾರಿಗೆ ನಿಯಂತ್ರಕ ಜೆ.ಆರ್‌. ಹಾವನೂರ ವಿರುದ್ಧ ಪ್ರಕರಣ ದಾಖಲಾಗಿದೆ.

30 ಬಸ್‌ಗಳ ಸಂಚಾರ

ಹಾವೇರಿ ವಿಭಾಗದ 6 ಘಟಕಗಳಿಂದ ಒಟ್ಟು 30 ಸಾರಿಗೆ ಬಸ್‌ಗಳು ಗುರುವಾರ ಸಂಚಾರ ನಡೆಸಿದವು. ಹಾವೇರಿ– 9, ಹಾನಗಲ್‌ –7, ಸವಣೂರು–7, ರಾಣೆಬೆನ್ನೂರು–3, ಹಿರೇಕೆರೂರು–2 ಹಾಗೂ ಬ್ಯಾಡಗಿ ಘಟಕದಿಂದ 2 ಬಸ್‌ಗಳು ಕಾರ್ಯಾಚರಣೆ ನಡೆಸಿದವು.

6 ಸಿಬ್ಬಂದಿ ವಜಾ, ಇಬ್ಬರು ಅಮಾನತು

ಗುರುವಾರ ಶೇ 50ರಷ್ಟು ತಾಂತ್ರಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 60 ಮಂದಿ ಚಾಲಕರು ಮತ್ತು ನಿರ್ವಾಹಕರು ಕೂಡ ಕರ್ತವ್ಯಕ್ಕೆ ಮರಳಿ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಷ್ಕರ ಬೆಂಬಲಿಸುತ್ತಾ, ಕರ್ತವ್ಯಕ್ಕೆ ಗೈರು ಹಾಜರಾಗುವಂತೆ ಪ್ರಚೋದನೆ ನೀಡುತ್ತಿದ್ದ ಒಟ್ಟು 75 ನೌಕರರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದೀರ್ಘ ಗೈರು ಹಾಜರಿ ಕಾರಣದ ಮೇಲೆ ಇಬ್ಬರು ಕಾಯಂ ನೌಕರರು ಹಾಗೂ ನಾಲ್ವರು ಟ್ರೈನಿ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಟಿಕೆಟ್‌ ವ್ಯತ್ಯಯ ಪ್ರಕರಣದಲ್ಲಿ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ. ಮುಷ್ಕರದಿಂದ ಹಾವೇರಿ ವಿಭಾಗಕ್ಕೆ ₹4.5 ಕೋಟಿ ಆದಾಯ ಕಡಿತವಾಗಿದ್ದು, ₹2 ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT