ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಗೆ 3 ಮೈಕ್ರೋಬಯಾಲಜಿ ಲ್ಯಾಬ್‌ ಮಂಜೂರು

ಹಾವೇರಿ, ಶಿಗ್ಗಾವಿ, ರಾಣೆಬೆನ್ನೂರಿನಲ್ಲಿ ಸ್ಥಾಪನೆ: ಬ್ಯಾಕ್ಟೀರಿಯಾಗಳಿಂದ ಹರಡುವ ರೋಗ ತಡೆಗಟ್ಟಲು ಸಹಕಾರಿ
Last Updated 3 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಹಾವೇರಿ: ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅಗತ್ಯವಾಗಿದ್ದ ಮೂರು ‘ಮೈಕ್ರೋಬಯಾಲಜಿ ಲ್ಯಾಬ್‌’ಗಳು (ಸೂಕ್ಷ್ಮಜೀವವಿಜ್ಞಾನ ಪ್ರಯೋಗಾಲಯ) ಜಿಲ್ಲೆಗೆ ಮಂಜೂರಾಗಿವೆ. 

ನೀರಿನ ಗುಣಮಟ್ಟ ಖಾತರಿಪಡಿಸಿಕೊಂಡು ಜನರಿಗೆ ಶುದ್ಧ ನೀರು ಪೂರೈಕೆ ಮಾಡಲು ಮೈಕ್ರೋಬಯಾಲಜಿ ಪರೀಕ್ಷೆಗಳಿಂದ ಮಾತ್ರ ಸಾಧ್ಯವಿದೆ. ಈ ದೃಷ್ಟಿಕೋನದಿಂದ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಸಾಯನಿಕ ಪ್ರಯೋಗಾಲಯಗಳಿರುವ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮೈಕ್ರೋಬಯಲಾಜಿ ಪ್ರಯೋಗಾಲಯ ಸ್ಥಾಪಿಸಲು ಕ್ರಮ ಕೈಗೊಂಡಿದೆ. 

ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಹಾವೇರಿ ನಗರ, ಶಿಗ್ಗಾವಿ ಹಾಗೂ ರಾಣೆಬೆನ್ನೂರಿನಲ್ಲಿ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂರು ಸ್ಥಳಗಳಲ್ಲಿ ಮೈಕ್ರೋಬಯಾಲಜಿ ಪ್ರಯೋಗಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರು ಸ್ಥಳಗಳಲ್ಲಿ ಪ್ರಯೋಗಾಲಯ ಕಟ್ಟಡ ನಿರ್ಮಾಣ ಅಥವಾ ಕಟ್ಟಡ ನವೀಕರಣ ಅಥವಾ ಕಟ್ಟಡ ಉನ್ನತೀಕರಣಗೊಳಿಸಲು ಅಂದಾಜು ವೆಚ್ಚದ ಪತ್ರಿಕೆ ತಯಾರಿಸಲಾಗಿದೆ.

ಆಡಳಿತಾತ್ಮಕ ಅನುಮೋದನೆ:

ಹಾವೇರಿ ನಗರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆವರಣದಲ್ಲಿ ₹25.70 ಲಕ್ಷ, ರಾಣೆಬೆನ್ನೂರು  ನಗರದಲ್ಲಿ ₹24.75 ಲಕ್ಷ ಹಾಗೂ ಶಿಗ್ಗಾವಿ ಪಟ್ಟಣದಲ್ಲಿ ₹25.81 ಲಕ್ಷ ವೆಚ್ಚದಲ್ಲಿ ಲ್ಯಾಬ್‌ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ.

13 ಟೆಸ್ಟ್‌ಗಳು:

‘ಈಗಾಗಲೇ ಅನುಷ್ಠಾನಗೊಂಡು, ಚಾಲನೆಯಲ್ಲಿರುವ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯಗಳಲ್ಲಿ, ಸಂಗ್ರಹಿಸಿದ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ನೀರಿನ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ನೀರಿನ ಬಣ್ಣ, ರುಚಿ, ಗಡುಸುತನ, ಕ್ಯಾಲ್ಸಿಯಂ, ಮೆಗ್ನಿಷಿಯಂ, ಕ್ಲೋರೈಡ್‌, ಫ್ಲೋರೈಡ್‌, ಸಲ್ಫೆಟ್‌, ನೈಟ್ರೆಟ್‌, ಐರನ್‌ ಸೇರಿದಂತೆ ಒಟ್ಟು 13 ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ಕಲುಷಿತಗೊಂಡಿರುವ ನೀರಿನ ಮಾದರಿಗಳು ಇದ್ದರೆ, ಪರ್ಯಾಯ ವ್ಯವಸ್ಥೆಗಳನ್ನು ಆಯಾ ಹಂತದಲ್ಲೇ ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಹಾವೇರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಚ್‌. ಉದಗಟ್ಟಿ. 

ರೋಗ ತಡೆಗಟ್ಟಲು ಸಹಕಾರಿ:

ಆದರೆ, ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚುವ ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಸೂಕ್ಷ್ಮಾಣು ಜೀವಿಗಳಿಂದ ಹರಡುವ ಅತಿಸಾರ ಬೇಧಿ, ಕರಳುಬೇನೆ, ಆಮಶಂಕೆ, ಟೈಫಾಯ್ಡ್‌, ಕಾಮಾಲೆ (ಹೆಪಟೈಟಿಸ್‌–ಐ) ಮುಂತಾದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಮೈಕ್ರೊಬಯಾಲಜಿ ಲ್ಯಾಬ್‌ಗಳು ಕಾರ್ಯಗತಗೊಂಡರೆ ಈ ಎಲ್ಲ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. 

***

481 ನೀರಿನ ಮಾದರಿಗಳಲ್ಲಿ ಕಲ್ಮಷ ಪತ್ತೆ!

ಹಾವೇರಿ ಜಿಲ್ಲಾ ಮಟ್ಟದ ರಾಸಾಯನಿಕ ಪ್ರಯೋಗಾಲಯವು ಹಾವೇರಿ, ಹಾನಗಲ್‌ ಮತ್ತು ಬ್ಯಾಡಗಿ ತಾಲ್ಲೂಕು ವ್ಯಾಪ್ತಿಯನ್ನು ಹೊಂದಿದೆ. 3 ವರ್ಷಗಳಲ್ಲಿ 3312 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 226 ಮಾದರಿಗಳಲ್ಲಿ ಕಲ್ಮಷ ಅಂಶಗಳು ಪತ್ತೆಯಾಗಿದೆ. 76 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ.

ರಾಣೆಬೆನ್ನೂರು ತಾಲ್ಲೂಕು ಮಟ್ಟದ ಲ್ಯಾಬ್‌ ರಾಣೆಬೆನ್ನೂರು, ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲ್ಲೂಕು ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿ 2292 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 55 ಮಾದರಿಗಳಲ್ಲಿ ಕಲ್ಮಷ ಅಂಶ ಪತ್ತೆಯಾಗಿದೆ. 15 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ. 

ಶಿಗ್ಗಾವಿ ತಾಲ್ಲೂಕು ಮಟ್ಟದ ಲ್ಯಾಬ್‌ನಲ್ಲಿ 2422 ನೀರಿನ ಮಾದರಿ ಪರೀಕ್ಷಿಸಿ, 200 ಮಾದರಿಗಳಲ್ಲಿ ಕಲ್ಮಷ ಅಂಶಗಳು ಪತ್ತೆಯಾಗಿದ್ದು, 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಯೋಗಾಲಯದ ಕ್ವಾಲಿಟಿ ಮ್ಯಾನೇಜರ್‌ ಮಾಹಿತಿ ನೀಡಿದ್ದಾರೆ.  

***

ಲ್ಯಾಬ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. 2 ತಿಂಗಳ ಒಳಗೆ 3 ಕೇಂದ್ರಗಳಲ್ಲಿ ಸುಸಜ್ಜಿತ ಮೈಕ್ರೋಬಯಾಲಜಿ ಲ್ಯಾಬ್‌ಗಳು ಕಾರ್ಯಾರಂಭಗೊಳ್ಳಲಿವೆ
– ಮೊಹಮ್ಮದ್‌ ರೋಶನ್‌, ಸಿಇಒ. ಹಾವೇರಿ ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT