ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ದುರಂತ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಅನೇಕ ವೇಳೆ ಬರೇ ಗುಲ್ಲು ಗದ್ದಲಗಳಾಗುತ್ತಿದ್ದುದನ್ನು ನಾನಷ್ಟು ಮೆಚ್ಚುತ್ತಿರಲಿಲ್ಲ. ಪ್ರಶ್ನೋತ್ತರ ಕಾಲವು ಸರ್ಕಾರದ ಸಮಯ ಅಲ್ಲ. ಅದು ಸದಸ್ಯರ ಸಮಯ. ಅದನ್ನು ಗಂಭೀರವಾಗಿ ನಡೆಸುವುದಕ್ಕೆ ಯಾರೂ ಅಡ್ಡಿಪಡಿಸಬಾರದು. ಅಲ್ಲದೆ, ಪ್ರಶ್ನೋತ್ತರ ಸಮಯ ಮುಗಿದು ಸರ್ಕಾರಿ ಕಲಾಪ ಆರಂಭವಾಗುವ ಮಧ್ಯದ ‘ಶೂನ್ಯ ವೇಳೆ’ಯನ್ನು ಅತ್ಯಂತ ಪ್ರಮುಖ ವಿಷಯಗಳನ್ನೆತ್ತುವುದಕ್ಕೆ ಮಾತ್ರ ವಿನಿಯೋಗಿಸಬೇಕಲ್ಲದೆ, ಕಾರ್ಯಕಲಾಪಗಳನ್ನೆಲ್ಲ ಹಳಿ ತಪ್ಪಿಸಿ ನಿರರ್ಥಕಗೊಳಿಸಲು ಬಳಕೆ ಮಾಡಬಾರದೆನ್ನುವುದು ನನ್ನ ಅಭಿಪ್ರಾಯ. ಚಪ್ಪಲಿ ತೂರಾಟ, ಮೈಕ್‌ ಕಿತ್ತಾಟ, ಪೇಪರ್‌ವೇಟ್‌ ಎಸೆದಾಟ, ಕೈಕೈ ಮಿಲಾಯಿಸಿ ಹೊಡೆದಾಟ, ಮಹಿಳಾ ಮುಖ್ಯಮಂತ್ರಿಯೊಬ್ಬರ ಮೇಲೆ ‘ದುಶ್ಯಾಸನಗಿರಿ’ ಪ್ರದರ್ಶನ ಇತ್ಯಾದಿ ಇತ್ಯಾದಿಗಳು ಸಾಂಸದಿಕ ಪ್ರಜಾತಂತ್ರದಲ್ಲಿ ನಂಬಿಕೆಯುಳ್ಳವರಿಂದ ವಿಧಾನಸಭೆ ಹಾಗೂ ಸಂಸತ್ತುಗಳಲ್ಲಿ ನಡೆಯಕೂಡದೆಂಬ ಭಾವನೆ ನನ್ನದು.

ದೇವರಾಜ ಅರಸ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ಪ್ರತಿಪಕ್ಷಗಳ ಮುಂದಿನ ಸಾಲುಗಳಲ್ಲಿ ಕುಳಿತಿರುತ್ತಿದ್ದ ಕೆಲವರಿಂದ ಸಂಸದೀಯ ಪ್ರಜಾತಂತ್ರದ ಸತ್ಸಂಪ್ರದಾಯಗಳಿಗೆ ಅಲ್ಲದ ವರ್ತನೆಗಳು ನಡೆದಾಗ, ಅವರೊಂದಿಗೆ ಕುಳಿತಿರುತ್ತಿದ್ದ ಕಮ್ಯುನಿಸ್ಟ್‌ ಸದಸ್ಯರು ಭಾಗವಹಿಸಿರಲಿಲ್ಲ. ಆದರೆ, ಈಗೀಗ ಈ ಪಿಡುಗು ತೀವ್ರಗೊಂಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ಜಯಲಲಿತಾರವರ ಮೇಲೊಬ್ಬರು ಕೈ ಮಾಡಿದಾಗ, ನಾನು ಶಾಸಕನಾಗಿ ಇರದಿದ್ದರೂ ಒಮ್ಮೆ ಆ ಸ್ಥಾನ ಹೊಂದಿದ್ದೆನೆನ್ನುವುದು ನೆನಪಾಗಿ ನಾಚಿಕೆಪಟ್ಟಿದ್ದೇನೆ.

ಮಾತುಮಾತಿಗೆ ರಾಜ್ಯಪಾಲರಲ್ಲಿಗೋ ರಾಷ್ಟ್ರಪತಿಯವರಲ್ಲಿಗೋ ದೌಡಾಯಿಸಿ, ರಾಜ್ಯ ಸರ್ಕಾರವನ್ನು ಬರಖಾಸ್ತು ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಕೇಳುವ ಮತ್ತು ಅವರು, ಆಳುವ ಪಕ್ಷದ ಬೆಂಬಲವನ್ನು ವಿಧಾನಸಭೆಯೊಳಗೇ ಮತದಾನದ ಮೂಲಕ ನಿರ್ಧರಿಸಬೇಕಲ್ಲದೆ ಹೊರಗಡೆ ಅಲ್ಲವೆನ್ನುವುದು ನಮ್ಮ ಖಚಿತ ನಿಲುವಾಗಿತ್ತು. ಈಗಲೂ ಅದಕ್ಕೆ ಚ್ಯುತಿ ಬಂದಿಲ್ಲ.

‘ಬೂರ್ಜ್ವಾ’, ‘ಸಾಂಸದಿಕ’, ‘ಸತ್ಸಂಪ್ರದಾಯ’ಗಳಿಗೆ ನೀವೇಕೆ ಮನ್ನಣೆ ನೀಡುತ್ತೀರಿ? ಹೀಗೆ ಕೇಳಿದವರಿಗೆ, ಸಂಸದೀಯ ಪ್ರಜಾತಂತ್ರದ ವ್ಯವಸ್ಥೆಯನ್ನು ಒಪ್ಪಿಕೊಂಡು ಸಂಸತ್ತಿನೊಳಗೆ ಅಥವಾ ಅಸೆಂಬ್ಲಿಯೊಳಗೆ ಪ್ರವೇಶಿಸಿ, ಅದರೊಳಗೆ ಕೆಲಸ ಮಾಡುವ ಬದ್ಧತೆ ಇರುವಷ್ಟು ಕಾಲ ಅದರ ಕ್ರಮನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ ಎಂಬುದು ನನ್ನ ಉತ್ತರ.  ದೋಸೆ ತಿನ್ನಲೂ ಬೇಕು, ಹಿಟ್ಟು ಉಳಿಯಲೂ ಬೇಕೆಂದರೆ ಹೇಗಾಗುತ್ತದೆ? ಪ್ರಜಾತಂತ್ರ ಉಳಿಯಲೂ ಬೇಕು, ಅದರ ನಿಯಮಗಳನ್ನು ಮುರಿಯಲೂ ಬೇಕು ಎಂದರೆ ನಡೆಯಲಾರದು.

ಇನ್ನೊಂದು ಮುಖ್ಯವಾದ ಪ್ರಶ್ನೆಗೆ ಇಲ್ಲಿ ಉತ್ತರ ನೀಡಬೇಕೆನಿಸುತ್ತದೆ.

ಕಾನೂನು ಏನೇ ಇರಲಿ, ತನಗೆ ತನ್ನ ಕೆಲಸ ಆಗಬೇಕಾಗಿದೆ; ಅದಕ್ಕೆ ಎಂತಹ ಬೆಲೆ ತೆರಲೂ ಸಿದ್ಧ ಎನ್ನುವ ಮನೋಭಾವ ಇಂದು ಸಾರ್ವತ್ರಿಕವಾಗಿ ಹಬ್ಬಿದೆ. ಇಂತಹ ವಾತಾವರಣದಲ್ಲಿ ಭ್ರಷ್ಟಾಚಾರ ಬೆಳೆಯುವುದು ಸಹಜ. ಪರಿಸ್ಥಿತಿಯು ಶಾಸಕನನ್ನು ಭ್ರಷ್ಟಾಚಾರಕ್ಕೆ ಸೆಳೆಯುತ್ತದೆ. ಅಕ್ರಮಗಳನ್ನು ಸಕ್ರಮಗೊಳಿಸಲು ಬಳಸುತ್ತದೆ. ನಾನು ಮತ್ತು ನನ್ನೊಂದಿಗೆ ಶಾಸಕರಾಗಿದ್ದ ನನ್ನ ಸಂಗಾತಿಗಳು ಈ ಸೆಳೆತಕ್ಕೆ ಸಿಲುಕಲಿಲ್ಲವೆಂದು ಎದೆತಟ್ಟಿ ಹೇಳಬಲ್ಲೆ. ಆ ಕಾರಣದಿಂದಲೇ ನಾವು ಹೋರಾಟಕ್ಕೇ ಲಾಯಕ್ಕು, ಶಾಸಕರಾಗಿ ನಾಲಾಯಕ್ಕು ಎಂಬ ಪರಿಗಣನೆಗೆ ಗುರಿಯಾದೆವೆಂದರೆ ತಪ್ಪಾಗಲಾರದು. ನಮ್ಮಲ್ಲಿ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಇನ್ನೂ ಆಳವಾಗಿ ಬೇರು ಬಿಡಬೇಕು, ರಾಜಕೀಯ ಪ್ರಜ್ಞೆ ಇನ್ನೂ ಹೆಚ್ಚು ಬೆಳೆಯಬೇಕು. ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಜನರ ನಡುವೆ ಇರುವ ವರ್ಚಸ್ಸನ್ನು ಮತಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ನಾವಿನ್ನೂ ಬಹಳ ಶ್ರಮಪಟ್ಟು ಪಡೆದುಕೊಳ್ಳಬೇಕಾಗಿದೆ.

ಪಕ್ಷದ ಮೇಲಿನ ನಿಷ್ಠೆಯಿಂದಲೂ, ಜನರ ಹಿತಾಸಕ್ತಿಗಳನ್ನು ಸಾಧಿಸುವ ಮನೋನಿಶ್ಚಯದಿಂದಲೂ ನಮಗೆ ಚುನಾವಣೆಗಳಲ್ಲಿ ಸ್ವಯಂ ಸೇವಕರಾಗಿ ದುಡಿಯುವವರಿದ್ದರು. ಅವರಿಂದಾಗಿ ನಾವು ಗೆದ್ದೆವು. ಈಗ ಅಂತಹವರು ವಿರಳವಾಗಿದ್ದಾರೆ.

ಇದನ್ನೆಲ್ಲ ನೋಡಿದಾಗ ನನ್ನಂತಹವರಲ್ಲಿ ಇಂದಿನ ರಾಜಕೀಯ ರಂಗಕ್ಕೆ ನಾವು ಪರಕೀಯರಾಗಿದ್ದೇವೇನೋ ಎಂಬ ಭಾವನೆ ಮೂಡುತ್ತದೆ. ಅದರ ಭಾಗವಾಗಿ, ಶಾಸನ ಸಭೆಯ ಸದಸ್ಯತ್ವಕ್ಕೆ ನಾವು ಪರಕೀಯವಾಗಿದ್ದೇವೆಂಬ ಭಾವನೆ ಮೂಡುವುದು ಸ್ವಾಭಾವಿಕ. ಆದರೆ, ಅದು ಬಾಧಿಸದಂತೆ ನೋಡಿಕೊಳ್ಳುವುದು, ಅದರಿಂದ ರಾಜಕೀಯ ಸನ್ಯಾಸದತ್ತ ಜಾರದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಪರಿಸರದ ಕೊಳೆ ಕೆಸರುಗಳು ಮೈಮನಸ್ಸುಗಳಿಗೆ ಅಂಟಿಕೊಳ್ಳದಂತೆ ಸದಾ ಎಚ್ಚರವಾಗಿರುವ ಅವಶ್ಯಕತೆಯಿದೆ.

ಹೊರಗಡೆ ಕಾರ್ಮಿಕರ, ರೈತರ, ವಿದ್ಯಾರ್ಥಿ–ಯುವಜನರ, ಮಹಿಳೆಯರ, ಹಿಂದುಳಿದವರ ಮತ್ತು ದಲಿತರ ಹೋರಾಟಗಳ ಜೊತೆಗೆ ವಿನಯಭಾವದಿಂದ ಭಾಗವಹಿಸುವುದರೊಂದಿಗೆ, ವಿಧಾನಸಭೆಯಲ್ಲಿ ಕ್ರಿಯಾಶೀಲ ಪಾತ್ರ ನಿರ್ವಹಿಸುವುದರ ಮೂಲಕ, ಒಂದು ಕ್ರಾಂತಿಕಾರಿ ಪಕ್ಷಕ್ಕೆ ಸೇರಿದ ಶಾಸಕ ವಿಧಾನಸಭೆಯೊಳಗೆ ಕೃತಾರ್ಥ ಭಾವನೆ ಬೆಳೆಸಿಕೊಳ್ಳುತ್ತಾನೆ. ಪರಕೀಯತೆಯ ಭಾವನೆ ಅವನಲ್ಲಿ ಮೂಡಲಾರದು. ಆದರೆ, ಶಾಸಕನೋ ಸಾಂಸದಿಕನೋ ಆಗಿರುವುದೇ ಮುಖ್ಯ, ಅಲ್ಲಿಂದ ಮಂತ್ರಿಯೋ ಅದಕ್ಕಿಂತಲೂ ಮೇಲಿನ ಸ್ಥಾನವೋ ತನ್ನದಾಗಬೇಕೆಂಬ ಆಸೆಯೇ ರಾಜಕಾರಣಕ್ಕೆ ಪ್ರೇರಣೆ. ತತ್ವ, ನಿಷ್ಠೆ, ಜನಪರ ಕಾಳಜಿ ಇವೆಲ್ಲ ಗೌಣ ಎನ್ನುವುದು ತಾಂಡವವಾಡುವಲ್ಲಿ ನನ್ನಂಥವರು ಪರಕೀಯರಾಗುತ್ತೇವೆ ಎನ್ನುವುದು ನಿಜ. ಇದು ಬಂಡವಾಳಶಾಹಿ ವ್ಯವಸ್ಥೆಯ ಸಾಂಸದಿಕ ಪ್ರಜಾತಂತ್ರದೊಳಗಿನ ದ್ವಂದ್ವವಾಗಿದೆ. ಅಂತಹ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ಆದಾಗ ಮಾತ್ರ ಸಾಂಸದಿಕ ಸಂಸ್ಥೆಗಳೊಳಗೆ ಕಮ್ಯುನಿಸ್ಟರು ಪರಕೀಯರೆಂಬ ಭಾವನೆ ತೊಲಗುತ್ತದೆ ಹಾಗೂ ಕಮ್ಯುನಿಸ್ಟರ ಪರಕೀಯ ಪ್ರಜ್ಞೆ ಇಲ್ಲವಾಗುತ್ತದೆ.

–ಬಿ.ವಿ. ಕಕ್ಕಿಲ್ಲಾಯ

ಸಂದರ್ಶನದಲ್ಲಿ ಕೇಳಲಾದ, ‘ನೀವು ಒಬ್ಬ ಬುದ್ಧಿಜೀವಿ ರಾಜಕಾರಣಿ. ಅಂದರೆ ಖಚಿತ ಸೈದ್ಧಾಂತಿಕ ಹಿನ್ನೆಲೆಯುಳ್ಳವರು. ನಿಮಗೆ ಶಾಸನ ಸಭೆಯಲ್ಲಿ ಪರಕೀಯನಾಗುತ್ತಿದ್ದೇನೆಂಬ ಭಾವನೆ ಬರುತ್ತಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT