ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆ ಮೆರೆದ ರಾಹುಲ್ ಶಿವಸೇನಾ ಶ್ಲಾಘನೆ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ‘ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಘನತೆ ಮೆರೆದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌, ಬಿಜೆಪಿಗೆ ಸವಾಲೊಡ್ಡ ಬಲ್ಲರು’ ಎಂದು ಶಿವಸೇನಾ ಶ್ಲಾಘಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಶಿವಸೇನಾ, ‘2019ರಲ್ಲಿ ಪಕ್ಷ ಬಹುಮತ ಗಳಿಸಿದರೆ ನಾನೇ ಪ್ರಧಾನಿ ಎಂಬುದಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊರಹಾಕಿರುವ ರಾಹುಲ್‌ ಗಾಂಧಿ ಹೇಳಿಕೆಯನ್ನು ಟೀಕಿಸುವ ಬದಲು ಬಿಜೆಪಿ ಸ್ವಾಗತಿಸಬೇಕಿತ್ತು’ ಎಂದು ಪ್ರತಿಪಾದಿಸಿದೆ.

‘ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಿದ್ದೇ ಆದಲ್ಲಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು ಸೋಲಿಸುವುದಾಗಿ ಹೇಳಬೇಕಾಗಿತ್ತು. ಮಿಗಿಲಾಗಿ, ರಾಹುಲ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೇ ಎಂಬುದನ್ನು ಜನರೇ ತೀರ್ಮಾನಿಸುವರು’ ಎಂದೂ ಪಕ್ಷ ಹೇಳಿದೆ.

‘2014ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದ ರಾಹುಲ್ ಗಾಂಧಿ ಈಗ ಸಾಕಷ್ಟು ಬದಲಾಗಿದ್ದಾರೆ. ಈಗ ಅವರೊಬ್ಬ ದೃಢ ಮನಸ್ಸಿನ ನಾಯಕನಾಗಿ ಹೊರಹೊಮ್ಮಿದ್ದು, ಈ ಅಂಶ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದೂ ಸಂಪಾದಕೀಯದಲ್ಲಿ ಶ್ಲಾಘಿಸಲಾಗಿದೆ.

‘ಈಗ ಪ್ರಧಾನಿ ಮೋದಿ ಮೈತ್ರಿಧರ್ಮದ ಬಗ್ಗೆ ಮಾತನಾಡುತ್ತಿರುವುದು ಸಂತೋಷ ತರುವ ವಿಷಯ. ಆದರೆ, ಮಿತ್ರ ಪಕ್ಷಗಳ ಪ್ರಯತ್ನದ ಫಲವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅಧಿಕಾರ ದಕ್ಕಿದೆ. ಇದೇ ಅಧಿಕಾರ ಬಳಸಿ ಬಿಜೆಪಿಯು ಮಿತ್ರ ಪಕ್ಷಗಳ ಬೆನ್ನಿಗೆ ಚೂರಿ ಹಾಕುತ್ತಿದೆ’ ಎಂದೂ ಶಿವಸೇನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT