ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪದ ಅಲೆಯಲ್ಲಿ ಅರಳಿದ ‘ಕಮಲ’

ಕನಕಗಿರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬದಿಗೆ ಸರಿಸಿದ ದಡೇಸೂಗೂರು
Last Updated 17 ಮೇ 2018, 10:21 IST
ಅಕ್ಷರ ಗಾತ್ರ

ಕನಕಗಿರಿ: 2008ರಲ್ಲಿ ಪಕ್ಷೇತರ ಹಾಗೂ 2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಚಿವರಾಗಿದ್ದ ತಂಗಡಗಿ ವಿರುದ್ಧ ಬಿಜೆಪಿ ಅಭ್ಯರ್ಥಿ ಪರ ಅನುಕಂಪದ ಗಾಳಿ ಬೀಸಿರುವುದು ತಂಗಡಗಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ 5,052 ಮತಗಳ ಅಂತರಲ್ಲಿ ಸೋಲುಂಡಿದ್ದ ದಡೇಸೂಗೂರು ಈ ಸಲ ಬಿಜೆಪಿಯಿಂದ ಸ್ಪರ್ಧಿಸಿ 14,255 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕೆರೆಗೆ ನೀರು ತುಂಬಿಸುವ ಯೋಜನೆ, ಕನಕಗಿರಿ, ಕಾರಟಗಿ ತಾಲ್ಲೂಕು ರಚನೆ ಅನುಷ್ಠಾನ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಂಡರೂ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿರುವುದು ಕಾಂಗ್ರೆಸ್‌ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಅಧಿಕಾರವಿದ್ದಾಗ ತಂಗಡಗಿ ಸುತ್ತ ಅನೇಕ ವಿವಾದಗಳು ಸುತ್ತಿಕೊಂಡವು, ತಂಗಡಗಿ ಅವರ ಸಹೋದರನ ಬಂಗಲೆ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡ ಆಗಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆ, ಕನಕಾಪುರದ ಯಲ್ಲಾಲಿಂಗನ ಹತ್ಯೆ ಪ್ರಕರಣ, ಮುರುಕುಂಬಿ ದಲಿತರು ಮತ್ತು ಸವರ್ಣಿಯರ ಮಧ್ಯೆ ಗಲಾಟೆ, ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ಅಮಾನತು, ನೂತನ ಕನಕಗಿರಿ ತಾಲ್ಲೂಕಿನಲ್ಲಿ ನವಲಿ ಮತ್ತು ನವಲಿ ರೈಸ್‌ಟೆಕ್‌ ಸೇರ್ಪಡೆ ವಿವಾದ ಹೀಗೆ ಅನೇಕ ಘಟನೆಗಳು ತಂಗಡಗಿ ವರ್ಚಸ್ಸು ಕುಗ್ಗಿಸಿದವು ಎನ್ನಲಾಗುತ್ತಿದೆ.

ತಂಗಡಗಿ ಎದುರಿಸಿದ ಎರಡು ಚುನಾವಣೆಗಳಲ್ಲಿ ಬೆನ್ನಿಗೆ ನಿಂತಿದ್ದ ಮಾಜಿ ಶಾಸಕ ವೀರಪ್ಪ ಕೇಸರಹಟ್ಟಿ ಅವರ ಪುತ್ರ ಶ್ರೀಧರ ಗದ್ದಡಕಿಗೆ ರಾಯಚೂರು –ಕೊಪ್ಪಳ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಹಾಗೂ ಹೇರೂರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡದ ಕಾರಣ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದು, ಮತ್ತೊಬ್ಬ ಮಾಜಿ ಶಾಸಕ ಸಾಲೋಣಿ ನಾಗಪ್ಪ ಅವರನ್ನು 2013ರ ಚುನಾವಣೆಯಲ್ಲಿ ಬಳಸಿಕೊಂಡು ಆ ನಂತರ ನಿರ್ಲಕ್ಷ್ಯ ಮಾಡಿದರು ಎಂಬ ದೂರು ತಂಗಡಗಿ ಅವರ ಮೇಲಿದೆ.

ಈ ಎಲ್ಲಾ ಘಟನೆಗಳ ಮಧ್ಯೆಯೂ ತಂಗಡಗಿ ಅವರು ಗಂಗಾವತಿ ತಾಲ್ಲೂಕು ಪಂಚಾಯಿತಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಹಾಗೂ ಕಾರಟಗಿ– ಪುರಸಭೆ, ಕನಕಗಿರಿ– ಪಟ್ಟಣ ಪಂಚಾಯಿತಿ ಆಡಳಿತವನ್ನು ಕಾಂಗ್ರೆಸ್‌ ತೆಕ್ಕೆಗೆ ತಂದರು. ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿಯ ಏಳು ಕ್ಷೇತ್ರಗಳ ಪೈಕಿ ಐದು ಸ್ಥಾನ ಕಾಂಗ್ರೆಸ್‌ಗೆ ಒಲಿದಿವೆ.

ಪಟ್ಟಣ ಪಂಚಾಯಿತಿ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಶಾಸಕರಿಗಿಂತ ಅವರ ಸಹೋದರ ವೆಂಕಟೇಶ ತಂಗಡಗಿ ಅವರು ಹಸ್ತಕ್ಷೇಪ ನಡೆಸಿದ ಪರಿಣಾಮ ಮೂರು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಬಂದರೂ ಕೆಲ ವಾರ್ಡ್‌ಗಳಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡವರು, ತಂಗಡಗಿ ಕಾಲದಲ್ಲಿ ಅಧಿಕಾರ ಪಡೆದು ಬಿಜೆಪಿ ಸೇರ್ಪಡೆಗೊಂಡವರು ಈ ಚುನಾವಣೆಯಲ್ಲಿ ತಂಗಡಗಿ ವಿರುದ್ಧ ಮತ ಚಲಾಯಿಸಿ ಬಿಜೆಪಿ ಗೆಲುವಿನ ಅಂತರ ಹೆಚ್ಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ವಂಚಿತರು ಎಪಿಎಂಸಿ ಚುನಾವಣೆಯಲ್ಲಿ ತಂಗಡಗಿ ವಿರುದ್ಧ ತಿರುಗಿ ಬಿದ್ದು ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣರಾದರು.

ಕಾಂಗ್ರೆಸ್‌ನಲ್ಲಿ ಸಂಘಟನೆ ಕೊರತೆ, ಮುಖಂಡರ ಮಧ್ಯೆ ಆಂತರಿಕ ಜಗಳ, ಪ್ರಚಾರಕ್ಕೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಬಾರದೆ ಇರುವುದು ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಲಿಂಗಾಯತ, ದಲಿತರು, ವಾಲ್ಮೀಕಿ ನಾಯಕ, ಹಿಂದುಳಿದ ವರ್ಗದವರ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಅಭ್ಯರ್ಥಿ ಯಶಸ್ವಿಯಾಗಿದ್ದಾರೆ.

ನಾಯಕ ಸಮಾಜದ ಮೇಲೆ ಹಿಡಿತ ಸಾಧಿಸಿರುವ ಬಿ.ಶ್ರೀರಾಮುಲು ಅವರು ಮುಂದಿನ ಉಪ ಮುಖ್ಯಮಂತ್ರಿ ಎಂದು ಬಿಂಬಿಸಿರುವುದು, ಲಿಂಗಾಯತರೇ ಹೆಚ್ಚಾಗಿರುವ ಕಾರಟಗಿ ಪ್ರದೇಶದಲ್ಲಿ ಯಡಿಯೂರಪ್ಪ ಎರಡು ಸಲ ಪ್ರಚಾರ ನಡೆಸಿದ್ದು, ಚುನಾವಣೆಯ ಪೂರ್ವ ಅಭ್ಯರ್ಥಿಯ ಹೆಸರು ಘೋಷಣೆ, ರೈತರು, ಮತದಾರರು ಬಿಜೆಪಿ ಅಭ್ಯರ್ಥಿಗೆ ಚುನಾವಣೆಯಲ್ಲಿ ಹಣ, ಭತ್ತದ ಧಾನ್ಯಗಳ ಚೀಲ ಕುರಿ ದೇಣಿಗೆಯಾಗಿ ನೀಡಿರುವುದು ಅನುಕಂಪ ಸೃಷ್ಟಿಸಿರುವುದು, ಕ್ಷೇತ್ರದ ಗ್ರಾಮಗಳಿಗೆ ತೆರಳಿ ಸಮಸ್ಯೆ ಆಲಿಸಿದ್ದು ಕೂಡ ಬಿಜೆಪಿ ಗೆಲುವಿಗೆ ಕಾರಣವಾಯಿತು.

ಮೆಹಬೂಬ ಹುಸೇನ್‌ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT