ಭಾನುವಾರ, ಮೇ 22, 2022
29 °C
ಕೃಷಿ ಸಚಿವ ಬಿ.ಸಿ.ಪಾಟೀಲ ಮಾಹಿತಿ

6.83 ಲಕ್ಷ ಮೆ.ಟನ್ ರಸಗೊಬ್ಬರ ದಾಸ್ತಾನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಈ ವರ್ಷ ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಿಲ್ಲ. 6.83 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ರೈತರ ಅಗತ್ಯಕ್ಕನುಗುಣವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಹಿರೇಕೆರೂರು ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾವುದೇ ವ್ಯಾಪಾರಸ್ಥರು ರಸಗೊಬ್ಬರ ಅಕ್ರಮವಾಗಿ ಸಂಗ್ರಹ ಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ನಕಲಿ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪರವಾನಿಗೆ ರದ್ದು ಮಾಡಲು ಜಾಗೃತದಳದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಡಿ.ಎ.ಪಿ 88 ಸಾವಿರ ಮೆಟ್ರಿಕ್ ಟನ್, ಎಂ.ಓ.ಪಿ 19 ಸಾವಿರ ಮೆಟ್ರಿಕ್ ಟನ್, ಎನ್.ಪಿ.ಕೆ.ಎಸ್ 2.36 ಲಕ್ಷ ಮೆಟ್ರಿಕ್ ಟನ್, ಯೂರಿಯಾ 3.37 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ಕೇಂದ್ರ ಸಚಿವರು ನಡೆಸಿದ ಸಭೆಯಲ್ಲಿ ರಾಜ್ಯಕ್ಕೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಸುವ ಭರವಸೆ ನೀಡಿದ್ದಾರೆ. ಈಗಾಗಲೇ 26 ಸಾವಿರ ಮೆಟ್ರಿಕ್ ಟನ್ ಡಿ.ಎ.ಪಿ ರಸಗೊಬ್ಬರ ಮಂಗಳೂರು ಬಂದರು ತಲುಪಿದ್ದು, ಎಲ್ಲ ಕಡೆ ವಿತರಿಸುವ ಕಾರ್ಯ ನಡೆಯುತ್ತಿದೆ. ರೈತರು ಖರೀದಿಸಿದ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದರು.

ಅಕ್ರಮವಾಗಿ ಸಂಗ್ರಹಿಸಿದ ಬೀಜ ಮತ್ತು ರಸಗೊಬ್ಬರ ಸಂಬಂಧಿಸಿದಂತೆ 750 ಪ್ರಕರಣಗಳು ದಾಖಲಿಸಿ ₹24 ಕೋಟಿ ಮೊತ್ತದ ನಕಲಿ ಗೊಬ್ಬರ ಮತ್ತು ಬೀಜ ಜಪ್ತಿ ಮಾಡಲಾಗಿದೆ ಎಂದರು.

ರೈತರು ಗೊಬ್ಬರ ಖರೀದಿಸುವಾಗ ಮಾರಾಟಗಾರರು ಯಾವುದೇ ಕಾರಣಕ್ಕೂ ಅನಗತ್ಯ ಗೊಬ್ಬರ ಖರೀದಿಸುವಂತೆ ಷರತ್ತು ವಿಧಿಸಿ ರೈತರಿಗೆ ಆರ್ಥಿಕ ಹೊರೆ ಮಾಡಬಾರದು. ಒಂದೊಮ್ಮೆ ಈ ರೀತಿ ಘಟನೆಗಳು ನಡೆದರೆ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃಷಿಯೇತರ ಉದ್ದೇಶಕ್ಕಾಗಿ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ 400 ಮೆಟ್ರಿಕ್ ಟನ್ ಗೊಬ್ಬರ ವಶಪಡಿಸಿಕೊಂಡು ಕಾನೂನಾತ್ಮಕ ಕ್ರಮ ಜರುಗಿಸಲಾಗಿದೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು