ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ವಿಭಾಗಕ್ಕೆ ₹ 8 ಕೋಟಿ ಆದಾಯ ಕಡಿತ

15 ದಿನಗಳ ಮುಷ್ಕರದಿಂದ ತತ್ತರಿಸಿದ ಸಾರಿಗೆ ಸಂಸ್ಥೆ: ಗಾಯದ ಮೇಲೆ ಬರೆ ಎಳೆದ ಕೋವಿಡ್‌
Last Updated 23 ಏಪ್ರಿಲ್ 2021, 16:05 IST
ಅಕ್ಷರ ಗಾತ್ರ

ಹಾವೇರಿ: ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರು ನಡೆಸಿದ ಹದಿನೈದು ದಿನಗಳ (ಏ.7ರಿಂದ ಏ.21) ಮುಷ್ಕರದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಹಾವೇರಿ ವಿಭಾಗಕ್ಕೆ ₹ 7.69 ಕೋಟಿ ಆದಾಯ ಕಡಿತವಾಗಿದ್ದು, ಒಟ್ಟಾರೆ ₹ 1.28 ಕೋಟಿ ನಷ್ಟವಾಗಿದೆ.

ಸಾರಿಗೆ ಮುಷ್ಕರದ ನಡುವೆಯೂ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಧಿಕಾರಿಗಳು ನಡೆಸಿದ ಮನವೊಲಿಸುವ ಪ್ರಯತ್ನಕ್ಕೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಿಗಲಿಲ್ಲ. ಬೆರಳೆಣಿಕೆ ಸಾರಿಗೆ ಬಸ್‌ಗಳು ಮಾತ್ರ ಸಂಚರಿಸಿದವು.ಹೀಗಾಗಿ ಖಾಸಗಿ ವಾಹನಗಳು ರಸ್ತೆಗಿಳಿದದ್ದು ಅಷ್ಟೇ ಅಲ್ಲ, ಅಧಿಕೃತವಾಗಿ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಗಳನ್ನು ಪ್ರವೇಶಿಸಿದವು.

ವಜಾದ ಅಸ್ತ್ರ: ಸಾರಿಗೆ ಬಸ್‌ಗಳ ಸಂಚಾರ ರದ್ದಾದ ಕಾರಣ ಪ್ರಯಾಣಿಕರು ತೀವ್ರ ಪರದಾಡಿದರು. ಆಗ ನಿಗಮವು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ನೌಕರರ ವರ್ಗಾವಣೆ, ಅಮಾನತು ಮತ್ತು ವಜಾದ ಅಸ್ತ್ರಗಳನ್ನು ಪ್ರಯೋಗಿಸಿತು. ಹಾವೇರಿ ವಿಭಾಗದ 36 ಟ್ರೈನಿಗಳು ಮತ್ತು 43 ಪ್ರೊಬೆಷನರಿ ಸಿಬ್ಬಂದಿಯನ್ನು ಸೇವೆಯಿಂದ ಮುಕ್ತ (ವಜಾ) ಮಾಡಲಾಯಿತು. ಹಿರೇಕೆರೂರು ಘಟಕ ಮತ್ತು ಬ್ಯಾಡಗಿ ಘಟಕದ ತಲಾ ಇಬ್ಬರು ಕಾಯಂ ನೌಕರರನ್ನು ಇತರ ಕಾರಣಗಳಿಗೆ ‘ವಜಾ’ ಕೂಡ ಮಾಡಲಾಯಿತು.

ವರ್ಗಾವಣೆ, ಅಮಾನತು: ಸಾರಿಗೆ ಮುಷ್ಕರ ಬೆಂಬಲಿಸಿ, ಕರ್ತವ್ಯಕ್ಕೆ ಗೈರು ಹಾಜರಾದಹಾವೇರಿ ವಿಭಾಗದ 107 ಸಿಬ್ಬಂದಿಯನ್ನು ಬೆಳಗಾವಿ, ಉತ್ತರ ಕನ್ನಡ, ಚಿಕ್ಕೋಡಿ, ಗದಗ, ಧಾರವಾಡ ಮುಂತಾದ ವಿಭಾಗ/ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ. ಹಾನಗಲ್‌–3, ಹಿರೇಕೆರೂರು–4, ಸವಣೂರು ಮತ್ತು ಹಾವೇರಿ ಘಟಕಗಳ ತಲಾ 2 ಸಿಬ್ಬಂದಿ ಸೇರಿದಂತೆ 11 ನೌಕರರನ್ನು ‘ಅಮಾನತು’ ಮಾಡಲಾಗಿದೆ.

ಲಾಕ್‌ಡೌನ್‌ನಿಂದ ₹ 24 ಕೋಟಿ ನಷ್ಟ: 2020ರಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಾದ ಪರಿಣಾಮ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ‌43 ದಿನ ರದ್ದಾಗಿತ್ತು. ಇದರಿಂದ ಹಾವೇರಿ ವಿಭಾಗಕ್ಕೆ ₹ 24 ಕೋಟಿ ನಷ್ಟವಾಗಿತ್ತು. ಲಾಕ್‌ಡೌನ್‌ ಮುಗಿದ ನಂತರವೂ ಕೊರೊನಾ ಅಲೆ ಇದ್ದ ಕಾರಣ ಜನರು ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣ ಮಾಡಲಿಲ್ಲ. ಹೀಗಾಗಿ 2021ರ ಫೆಬ್ರುವರಿವರೆಗೆ ಹಾವೇರಿ ವಿಭಾಗಕ್ಕೆ ₹ 64 ಕೋಟಿ ನಷ್ಟವಾಗಿದೆ.

ಇಂಧನ ದರ ಏರಿಕೆ: ‘2020ರ ಫೆಬ್ರುವರಿಯಲ್ಲಿ ಬಸ್‌ ಟಿಕೆಟ್‌ ದರವನ್ನು ಏರಿಕೆ ಮಾಡಲಾಗಿತ್ತು. ಹೀಗಾಗಿ ಒಂದು ವರ್ಷದಲ್ಲಿ ಹಾವೇರಿ ವಿಭಾಗವು ‘ಆದಾಯದ ಹಾದಿ’ ಹಿಡಿಯುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಮಾರ್ಚ್‌ 24ರಿಂದ ಎದುರಾದ ಲಾಕ್‌ಡೌನ್‌ನಿಂದ ನಿರೀಕ್ಷೆ ಹುಸಿಯಾಯಿತು. ಟಿಕೆಟ್‌ ದರ ಏರಿಕೆ ಮಾಡಿದ್ದಾಗ ಡೀಸೆಲ್‌ ದರ ಲೀಟರ್‌ಗೆ ₹ 59 ಇತ್ತು. ಈಗ ಲೀಟರ್‌ಗೆ ₹ 86 ತಲುಪಿದ್ದರೂ, ಬಸ್‌ ಟಿಕೆಟ್‌ ದರ ಏರಿಕೆಯಾಗಿಲ್ಲ. ಹೀಗಾಗಿ ಇಂಧನ ದರ ಏರಿಕೆ ಸಂಸ್ಥೆಯ ಆದಾಯಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಸಾರಿಗೆ ನೌಕರರ ಮುಷ್ಕರ ಮತ್ತು ಕೋವಿಡ್‌ ಎರಡನೇ ಅಲೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ ತಿಳಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT