ಸೋಮವಾರ, ಸೆಪ್ಟೆಂಬರ್ 20, 2021
26 °C
ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಸೆ.16ರಂದು ಸಾಮಾನ್ಯ ಪ್ರವೇಶ ಪರೀಕ್ಷೆ

ಹಾವೇರಿ ಜಿಲ್ಲೆಯಲ್ಲಿ 8,784 ವಿದ್ಯಾರ್ಥಿಗಳು ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಸೆ.16ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪರೀಕ್ಷಾ ಮೇಲ್ವಿಚಾರಕರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರೀಕ್ಷೆ ಪೂರ್ವ ಸಿದ್ಧತೆ ಕುರಿತ ಎಲ್ಲ ತಾಲ್ಲೂಕು ಆಡಳಿತದೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪವಿಲ್ಲದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಥರ್ಮಲ್ ಸ್ಕ್ಯಾನರ್‌ ಬಳಸಿ ಜ್ವರ ತಪಾಸಣೆ ನಡೆಸಬೇಕು. ಪರೀಕ್ಷೆ ನಡೆಯುವ ಎಲ್ಲ ಕೊಠಡಿಗಳನ್ನು ಮುಂಚಿತವಾಗಿ ಸ್ಯಾನಿಟೈಸರ್ ಮಾಡಬೇಕು. ಕೋವಿಡ್ ಲಕ್ಷಣ ಹೊಂದಿದ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು. 24 ವಿದ್ಯಾರ್ಥಿಗಳಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕನ್ನು ನೇಮಿಸಬೇಕು ಎಂದು ಸೂಚನೆ ನೀಡಿದರು.

ನಿಷೇಧ:

ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪ್ಲೇಜರ್, ವೈರ್‌ಲೆಸ್‌ ಸೆಟ್, ಲಾಗ್ ಟೇಬಲ್, ಕ್ಯಾಲ್ಕುಲೇಟರ್‌ ಹಾಗೂ ರಿಸ್ಟ್‌ ವಾಚ್‌ಗಳನ್ನು ವಿದ್ಯಾರ್ಥಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯೊಳಗೆ ತರದಂತೆ ನಿಷೇಧಿಸಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ವ್ಯವಸ್ಥೆ ಮಾಡಬೇಕು. ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಪದ್ಧತಿ ಮೂಲಕ ನೇಮಕ ಮಾಡಬೇಕು. ಪರೀಕ್ಷಾ ಸಿಬ್ಬಂದಿಗೆ ಗುರುತುಪತ್ರ ನೀಡಬೇಕು ಎಂದು ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಡಿಡಿಪಿಯು ಎಚ್.ಉಮೇಶಪ್ಪ ಮಾತನಾಡಿ, ‘ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ 864, ಹಾನಗಲ್ ತಾಲ್ಲೂಕಿನಲ್ಲಿ 1,848, ಹಾವೇರಿ ತಾಲ್ಲೂಕಿನಲ್ಲಿ 1416, ಹಿರೇಕೆರೂರು ತಾಲ್ಲೂಕಿನಲ್ಲಿ 1,416, ರಾಣೆಬೆನ್ನೂರು ತಾಲ್ಲೂಕಿನಲ್ಲಿ 1,344, ಸವಣೂರ ತಾಲ್ಲೂಕಿನಲ್ಲಿ 912 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 984 ವಿದ್ಯಾರ್ಥಿಗಳು ಸೇರಿದಂತೆ 8,784 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. 

24 ಪರೀಕ್ಷಾ ಕೇಂದ್ರಗಳು 

ಬ್ಯಾಡಗಿ ಪಟ್ಟಣದ ನೂತನ ಪ್ರೌಢಶಾಲೆ ಹಾಗೂ ಸರ್ಕಾರಿ ಎಸ್.ಜೆ.ಜೆ.ಎಮ್ ಪದವಿ ಪೂರ್ವ ಕಾಲೇಜು, ಹಾನಗಲ್ ಪಟ್ಟಣದ ರೋಷನಿ ಪ್ರೌಢಶಾಲೆ, ಎನ್.ಸಿ ಪದವಿ ಪೂರ್ವ ಕಾಲೇಜು, ಅಂಜುಮನ್ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಎಲ್.ಇ. ಸ್ವತಂತ್ರ ಪದವಿ ಪೂರ್ವ ಕಾಲೇಜು, ಎನ್.ಸಿ.ಪ್ರೌಢ ಶಾಲೆ, ಹಜರತ್ ಮಖುಲೀಯಾ ಉರ್ದು ಪ್ರೌಢಶಾಲೆ, ಕುಮಾರೇಶ್ವರ ಪ್ರೌಢಶಾಲೆ, ಹಾವೇರಿ ನಗರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜು, ಎಸ್.ಜೆ.ಎಂ ಪದವಿ ಪೂರ್ವ ಕಾಲೇಜು, ರಾಚೋಟೆಶ್ವರ ಪದವಿ ಪೂರ್ವ ಕಾಲೇಜು, ಹಿರೇಕೆರೂರ ಪಟ್ಟಣದ ಕೆ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜು, ಡಿ.ಆರ್.ಟಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಣೆಬೆನ್ನೂರ ನಗರದ ರಾಜ ರಾಜೇಶ್ವರಿ ಪದವಿ ಪೂರ್ವ ಕಾಲೇಜು, ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಆಂಗ್ಲೊ ಉರ್ದು ಪ್ರೌಢಶಾಲೆ, ಬಿ.ಕೆ.ಗುಪ್ತಾ ಪದವಿ ಪೂರ್ವ ಕಾಲೇಜು, ಸವಣೂರ ಪಟ್ಟಣದ ಮಜೀದ್ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾಭಾರತಿ ಪದವಿ ಪೂರ್ವ ಕಾಲೇಜು, ಶಿಗ್ಗಾಂವ ಪಟ್ಟಣದ ಎಸ್.ಬಿ.ಬಿ.ಎಮ್ ಪದವಿ ಪೂರ್ವ ಕಾಲೇಜು, ಎಸ್.ಆರ್.ಜೆ.ವಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿವೆ.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸವರಾಜಪ್ಪ, ಹಾವೇರಿ ತಹಶೀಲ್ದಾರ್‌ ಗಿರೀಶ ಸ್ವಾದಿ, ವಿಡಿಯೊ ಸಂವಾದದಲ್ಲಿ ಆಯಾ ತಾಲ್ಲೂಕು ತಹಶೀಲ್ದಾರ್‌ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಾಂಶುಪಾಲರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು