ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರುಗದ್ದೆಯಂಥ ರಸ್ತೆಯಲ್ಲಿ ಸಂಚಾರದ ಸರ್ಕಸ್‌!

ಅತಿವೃಷ್ಟಿ ಮತ್ತು ನೆರೆಗೆ ಹಳ್ಳ ಹಿಡಿದ ಗ್ರಾಮೀಣ ರಸ್ತೆಗಳು, ಕುಸಿದ ಸೇತುವೆಗಳು: ಪ್ರಯಾಣಿಕರಿಗೆ ಪರದಾಟ
Last Updated 1 ಆಗಸ್ಟ್ 2022, 16:33 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಮತ್ತು ನೆರೆಗೆ ಗ್ರಾಮೀಣ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ. ರಸ್ತೆಗಳಲ್ಲಿ ಬಾಯ್ತೆರೆದಿರುವ ದೊಡ್ಡ ದೊಡ್ಡ ಗುಂಡಿಗಳು ಒಡಲಲ್ಲಿ ಮಳೆ ನೀರನ್ನು ಸಂಗ್ರಹಿಸಿಕೊಂಡು, ಸಂಚಾರಕ್ಕೆ ಸಂಚಕಾರ ಒಡ್ಡುತ್ತಿವೆ. ಬೈಕ್‌ ಸವಾರರಂತೂ ಜೀವ ಕೈಯಲ್ಲಿಡಿದು ಸಂಚಾರ ಮಾಡುವಂತಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಜುಲೈ ತಿಂಗಳಲ್ಲಿ 15 ದಿನ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆ ಮತ್ತು ಸೇತುವೆಗಳು ಹಾಳಾಗಿದ್ದು, ಅಪಾರ ನಷ್ಟ ಉಂಟಾಗಿದೆ.ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ವ್ಯಾಪ್ತಿಯ1,361 ಕಿ.ಮೀ. ಗ್ರಾಮೀಣ ರಸ್ತೆ ಹಾನಿಯಾಗಿದ್ದು, ಅಂದಾಜು ₹17 ಕೋಟಿ ಹಾನಿ ಅಂದಾಜಿಸಲಾಗಿದೆ.108 ಸೇತುವೆಗಳು ಹಾನಿಯಾಗಿದ್ದು, ₹1.88 ಕೋಟಿ ಹಾನಿಯಾಗಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ83 ಕಿ.ಮೀ. ರಾಜ್ಯ ಹೆದ್ದಾರಿ ಹಾನಿಯಾಗಿದ್ದು, ₹40 ಕೋಟಿ ನಷ್ಟ ಅಂದಾಜಿಸಲಾಗಿದೆ. 166 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾನಿಯಾಗಿದ್ದು, ₹138 ಕೋಟಿ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ31 ಸೇತುವೆಗಳು ಹಾಳಾಗಿದ್ದು, ₹10.90 ಕೋಟಿ ಮೊತ್ತದ ಹಾನಿ ಅಂದಾಜಿಸಲಾಗಿದೆ.

ರಸ್ತೆ ದುರಸ್ತಿಗೆ ನಾಗರಿಕರ ಆಗ್ರಹ

ಸವಣೂರು:ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿರುವ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರಸ್ತೆಗಳು ಮಾತ್ರ ಅಭಿವೃದ್ಧಿಯನ್ನು ಕಾಣದೇಇರುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಪ್ರತಿಭಟನೆ ಕೈಗೊಂಡರೂ ಪ್ರಯೋಜನ ಆಗಿಲ್ಲ. ಶಾಸಕರು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ತಾಲ್ಲೂಕಿನ 21 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 64 ಗ್ರಾಮಗಳಲ್ಲಿ 352 ಕಿ.ಮೀ ರಸ್ತೆ ಇದ್ದು ಅಭಿವೃದ್ಧಿಗೆ ₹9.43 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಎಇಇ ನಿಂಬಣ್ಣ ಹೊಸಮನಿ ಮಾಹಿತಿ ನೀಡುತ್ತಾರೆ.

ವರ್ಷದಲ್ಲೇ ಕಿತ್ತು ಹೋದ ರಸ್ತೆಗಳು

ಬ್ಯಾಡಗಿ: ತಾಲ್ಲೂಕಿನಾದ್ಯಂತ ರಸ್ತೆಗಳು ಹಾಳಾಗಿವೆ. ನೂರಾರು ಕೋಟಿ ಹಣ ಸುರಿದರೂ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

ತಾಲ್ಲೂಕಿನ ಸಿದ್ಧಾಪುರ–ಸೂಡಂಬಿ, ಗುಡ್ಡದ ಮಲ್ಲಾಪುರ–ತಿಳವಳ್ಳಿ, ಕಾಗಿನೆಲೆ–ಕಾಸಂಬಿ ರಸ್ತೆ, ಹೆಡಿಗ್ಗೊಂಡ–ಬ್ಯಾಡಗಿ, ಚಿಕ್ಕಬಾಸೂರ–ಘಾಳಪೂಜಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಚಿಕ್ಕಬಾಸೂರ–ಅತ್ತಿಕಟ್ಟಿ ರಸ್ತೆ ಕಿರಿದಾಗಿದ್ದು, ಅಲ್ಲಲ್ಲಿ ಹೆಚ್ಚು ತಿರುವುಗಳಿಂದ ಕೂಡಿದೆ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ರಸ್ತೆಗಳ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಜನರು ಆಗ್ರಹಿಸಿದರು.

ರಸ್ತೆ ಹಾಳು: ಪ್ರಯಾಣಿಕರ ಗೋಳು

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಸಾಕಷ್ಟು ತಗ್ಗು-ಗುಂಡಿಗಳಿಂದ ರಸ್ತೆಗಳು ಹಾಳಾಗಿದ್ದು ಪ್ರಯಾಣಿಕರು ಗೋಳು ಅನುಭವಿಸುತ್ತಿದ್ದಾರೆ.

ಪಟ್ಟಣದ ಹೊಸಬಸ್ ಸ್ಟ್ಯಾಂಡ್ ಸರ್ಕಲ್, ಕುರಬಗೇರಿ ರಸ್ತೆ, ಕುಮಾರೇಶ್ವರ ಹೈಸ್ಕೂಲ್ ರಸ್ತೆ ತುಮ್ಮಿನಕಟ್ಟಿ ರಸ್ತೆ ಮುಂತಾದ ಕಡೆಗಳಲ್ಲಿ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ವಿಶೇಷವಾಗಿ ಮಳೆಗಾಲದಲ್ಲಿ ಈ ತಗ್ಗು ಗುಂಡಿಗಳು ನೀರಿನಿಂದ ಆವರಿಸಿದ್ದು, ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಇಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ.

‘ರಟ್ಟೀಹಳ್ಳಿ-ಶಿಕಾರಿಪುರ ಮುಖ್ಯ ರಸ್ತೆ ಮಾರ್ಗದಲ್ಲಿ ರಾಮತೀರ್ಥ ಕ್ರಾಸ್ ಹತ್ತಿರ ತುಂಗಾ ಮೇಲ್ದಂಡೆ ಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ನಿತ್ಯ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಬಿ.ಎಂ. ಮುಳಕೊಪ್ಪದ.

ರಸ್ತೆಗಳು ಕೆಸರುಮಯ; ಸಂಚಾರ ಅಪಾಯ

ಶಿಗ್ಗಾವಿ:ತಾಲ್ಲೂಕಿನ ಬಾಡದಿಂದ ಹುಣಸಿಕಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಸಾಕು ಈ ರಸ್ತೆ ಕೆಸರುಮಯವಾಗಿ ಬಿಡುತ್ತದೆ. ಹೀಗಾಗಿ ಸಾಕಷ್ಟು ಬೈಕ್ ಸವಾರರು ಅಪಘಾತಕ್ಕೊಳಗಾಗಿದ್ದಾರೆ.

‘ಮಳೆಗಾಲದಲ್ಲಿ ಹುಣಸಿಕಟ್ಟಿ ಗ್ರಾಮದ ಜನರು ತಮ್ಮ ವಾಹನಗಳನ್ನು ಬಾಡದಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇಲ್ಲವೆ 8 ರಿಂದ 10 ಕಿ.ಮೀ. ದೂರ ಸುತ್ತಿ ಹೋಗುವಂತಾಗಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ಹಮ್ಮಿಕೊಳ್ಳಬೇಕು’ ಎಂದು ಬಾಡ ಗ್ರಾಮದ ಮಾಲತೇಶ ಕಮ್ಮಾರ ಆಗ್ರಹಿಸುತ್ತಾರೆ.

ತಾಲ್ಲೂಕಿನ ಬಂಕಾಪುರ ಪಟ್ಟಣದ ಸವಣೂರ ಕ್ರಾಸ್ ಬಳಿ ಸರ್ವಿಸ್ ರಸ್ತೆ ಸಂಪೂರ್ಣ ಹಾಳಾಗಿದೆ. ಶಿಗ್ಗಾವಿ ಪಟ್ಟಣದ ಮಿನಿ ವಿಧಾನಸೌಧ, ನ್ಯಾಯಾಲಯಕ್ಕೆ ಹೋಗುವ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ಜಾರಿ ಬೀಳುತ್ತಿರುವ ಬೈಕ್‌ ಸವಾರರು

ರಾಣೆಬೆನ್ನೂರು: ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹದಗೆಟ್ಟು ತೆಗ್ಗು ಗುಂಡಿಯಿಂದ ಕೂಡಿವೆ.ಗ್ರಾಮೀಣ ಪ್ರದೇಶದ ರಸ್ತೆಗಳು ಸತತ ಮಳೆಗೆ ಕಿತ್ತುಕೊಂಡು ಹೋಗಿವೆ.

‘‌ನಗರದೊಳಗಿನ ರಸ್ತೆಗಳು ಹದಗೆಟ್ಟಿದ್ದು, ಬೈಕ್‌ ಸವಾರರು ಜಾರಿ ಬೀಳುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಆಟೊಚಾಲಕರ ಸಂಘದ ಮುಖಂಡ ನಾಗರಾಜ ಹಾರೋಗೊಪ್ಪ.

ನಗರದ ಮೇಡ್ಲೇರಿ ಡಿವೈಡರ್‌ ರಸ್ತೆಯಲ್ಲಿ ಡಾ.ಆರ್‌.ಬಿ.ಪಾಟೀಲ ದವಾಖಾನೆಯಿಂದ ಚೌಡೇಶ್ವರಿ ದೇವಸ್ಥಾನದವರೆಗೆ ಪಿಡಬ್ಲ್ಯುಡಿ ರಸ್ತೆ ಮೇಲೆ ಯುಜಿಡಿ ನೀರು ಕಳೆದ ಎರಡ್ಮೂರು ವರ್ಷಗಳಿಂದ ರಸ್ತೆ ಮೇಲೆ ಹರಿಯುವುದರಿಂದ ರಸ್ತೆಯಲ್ಲಿ ದೊಡ್ಡ ತಗ್ಗುಗಳು ಬಿದ್ದಿವೆ.

ಮಳೆಯ ರಭಸಕ್ಕೆ ಕಿತ್ತುಹೋದ ರಸ್ತೆ

ಹಾನಗಲ್:ಅತಿವೃಷ್ಟಿಯ ಕಾರಣದಿಂದ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹಾನಿಗೊಂಡಿವೆ. ಕೆಲವು ಕಡೆಗಳಲ್ಲಿ ಕೆರೆ, ಹಳ್ಳದ ನೀರು ನುಗ್ಗಿ ಸೇತುವೆ, ಅಡ್ಡಮೋರಿ ಭಾಗದಲ್ಲಿ ಕೊರಕಲು ಸೃಷ್ಟಿಯಾಗಿದೆ.

‘ಪಿಡಬ್ಲುಡಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಸೇರಿ ಒಟ್ಟು 24 ಕಿ.ಮೀ. ರಸ್ತೆ ದುರಸ್ತಿಗೆ ಬಂದಿದೆ. ಜಿಲ್ಲಾ ಮುಖ್ಯ ರಸ್ತೆಯಲ್ಲಿನ 11 ಸೇತುವೆಗಳು ಸಣ್ಣ ಪ್ರಮಾಣದಲ್ಲಿ ಹಾನಿಗೊಂಡಿವೆ’ ಎಂದು ಪಿಡಬ್ಲುಡಿ ಎಇಇ ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

‘ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಹೆಚ್ಚು ಪ್ರಮಾಣದಲ್ಲಿ ಮಳೆ ರಭಸಕ್ಕೆ ಹಾನಿಗೊಂಡಿವೆ. ಸುಮಾರು 224 ಕಿ.ಮೀ. ರಸ್ತೆ ದುರಸ್ತಿಗೆ ಕಾದಿವೆ. ಮೂರು ಸಿ.ಡಿ ಹಾಳಾಗಿವೆ. 25 ಕೆರೆಗಳು ದುರಸ್ತಿಗೆ ಬಂದಿವೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ಎನ್‌.ಎಂ.ಪಾಟೀಲ ತಿಳಿಸಿದ್ದಾರೆ.

ತಾಲ್ಲೂಕಿನ ಶೃಂಗೇರಿ–ಸಾಗರವಳ್ಳಿ ಗ್ರಾಮ ನಡುವಿನ ರಸ್ತೆಯಲ್ಲಿ ಕೆರೆಯ ನೀರು ಹೊಕ್ಕು ಅಡ್ಡಮೋರಿ ಹಾಳಾಗಿದೆ. ಇದರಿಂದ ರಸ್ತೆ ಕಿರಿದಾಗಿದ್ದು, ಸಂಚಾರ ವ್ಯತ್ಯಯವಾಗುತ್ತಿದೆ.

‌60 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದೇವೆ.ಅನುದಾನ ಬಿಡುಗಡೆಯಾಗಬೇಕಿದೆ
– ಮಂಜುನಾಥ ನಾಯಕ, ಎಇಇ, ಲೋಕೋಪಯೋಗಿ ಇಲಾಖೆ, ರಾಣೆಬೆನ್ನೂರು

ಗ್ರಾಮೀಣ ಪ್ರದೇಶದಲ್ಲಿನ 95 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ಮಾಡಿ ಅನುದಾನ ಮಂಜೂರಾತಿಗೆ ಕಳುಹಿಸಲಾಗಿದೆ
– ರಾಮಣ್ಣ ಭಜಾರಿ, ಜಿಲ್ಲಾ ಪಂಚಾಯಿತಿ ಎಇಇ, ರಾಣೆಬೆನ್ನೂರು

ರಸ್ತೆಗಳ ದುರಸ್ತಿ ಕಾರ್ಯವನ್ನು 5 ವರ್ಷ ಗುತ್ತಿಗೆದಾರನೇ ನಿರ್ವಹಿಸಬೇಕು ಎನ್ನುವ ನಿಬಂಧನೆ ಕಾರ್ಯರೂಪಕ್ಕೆ ಬರದ ಕಾರಣ ಜನರಿಗೆ ತೊಂದರೆಯಾಗಿದೆ
– ಮಲ್ಲೇಶಪ್ಪ ಡಂಬಳ, ರೈತ ಮುಖಂಡ, ಬ್ಯಾಡಗಿ

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT