ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ರೈತನ ಬದುಕು ಅರಳಿಸಿದ ಚೆಂಡು ಹೂ

ಮಿಶ್ರ ಬೆಳೆ ಪದ್ಧತಿಯಲ್ಲಿ ಖುಷಿ ಕಂಡ ಗುರುರಾಜ ಸಿದ್ದೋಜಿ
Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

ತಿಳವಳ್ಳಿ:ಹಾನಗಲ್‌ ತಾಲ್ಲೂಕು ತಿಳವಳ್ಳಿ ಗ್ರಾಮದ ರೈತ ಗುರುರಾಜ ಸಿದ್ದೋಜಿ ಅವರು ಅಡಿಕೆ ಸಸಿಗಳ ನಡುವೆ ಚೆಂಡು ಹೂ, ಶುಂಠಿ ಬೆಳೆಯುವ ಮೂಲಕ ಕೈ ತುಂಬ ಆದಾಯ ಗಳಿಸುತ್ತಿದ್ದಾರೆ.

ಗ್ರಾಮದ ದೊಡ್ಡಕೆರೆಗೆ ಹೊಂದಿಕೊಂಡಂತೆ ಇವರಿಗೆ 4 ಎಕರೆ ಹೊಲವಿದೆ. ತಮ್ಮ ಹೊಲದಲ್ಲಿ ಮೊದಲು ಮಾವಿನ ಗಿಡಗಳನ್ನು ನಾಟಿ ಮಾಡಿದ್ದರು. ಬರಗಾಲದಿಂದಾಗಿ ಸರಿಯಾಗಿ ಗಿಡಗಳು ಬೆಳೆಯಲಿಲ್ಲ. ನಂತರ, ಅದೇ ಜಾಗಕ್ಕೆ ಅಡಿಕೆ ಸಸಿಗಳನ್ನು ನಾಟಿ ಮಾಡಿದರು. ಅದರ ನಡುವೆಯೇ ಚೆಂಡು ಹೂ ಹಾಗೂ ಶುಂಠಿ ಬೆಳೆಯುತ್ತಿದ್ದಾರೆ.

ನರ್ಸರಿಯಿಂದಚೆಂಡು ಹೂವಿನ ಸಸಿಗಳನ್ನು ತಂದು ಎರಡು ಎಕರೆ ಜಮೀನಿನಲ್ಲಿ ಬೆಳೆಯುತ್ತಿದ್ದೇನೆ. ನಾಟಿ ಮಾಡುವ ಪೂರ್ವದಲ್ಲಿಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿಕೊಳ್ಳಬೇಕು. ನಂತರ ನಾಲ್ಕೈದು ದಿನಗಳವರೆಗೆ ನೀರು ಕಟ್ಟಬೇಕು. ಗಿಡದಿಂದ ಗಿಡಕ್ಕೆ ಒಂದರಿಂದ ಎರಡು ಅಡಿಯಷ್ಟು ಅಂತರ ಬಿಟ್ಟಿದ್ದೇನೆ. ನೀರಾವರಿ ವ್ಯವಸ್ಥೆಯಿದ್ದರೆ ವರ್ಷದಲ್ಲಿ ಎರಡು ಅಥವಾ ಮೂರು ಬೆಳೆ ಬೆಳೆಯಬಹುದು ಎನ್ನುತ್ತಾರೆ ಗುರುರಾಜ ಸಿದ್ದೋಜಿ.

ಗಿಡ ದೊಡ್ಡದಾಗುವ ತನಕ ನಿತ್ಯ ನೀರು ನೀಡಬೇಕು. ನಂತರ ವಾರದಲ್ಲಿ ಎರಡು ಬಾರಿಯಂತೆ ಸ್ಪಿಂಕ್ಲರ್ ಮೂಲಕ ನೀರನ್ನು ಬಿಡಬೇಕು. ಇದಕ್ಕೆ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳಬಳಕೆ ಮಾಡಲಾಗುತ್ತಿದೆ. ನಾಟಿ ಹಂತದಲ್ಲಿ ಮತ್ತು ತಿಂಗಳಲ್ಲಿ ಎರಡು ಬಾರಿ ಗಿಡಗಳಿಗೆ ಗೊಬ್ಬರ ನೀಡುತ್ತೇವೆ ಎನ್ನುತ್ತಾರೆ ಗುರುರಾಜರ ತಂದೆ ನಾಗರಾಜ ಸಿದ್ದೋಜಿ.

ಚೆಂಡು ಹೂ ಒಮ್ಮೆ ನಾಟಿ ಮಾಡಿದರೆ 40 ದಿನಗಳ ನಂತರ ಇಳುವರಿ ಆರಂಭವಾಗುತ್ತದೆ. ಇದು ಮೂರು ತಿಂಗಳ ಬೆಳೆಯಾಗಿದೆ. ಎಲ್ಲ ಸಮಯದಲ್ಲಿಯೂ ಇದಕ್ಕೆ ಬೇಡಿಕೆ ಇದೆ. ಹಬ್ಬದ ದಿನಗಳಲ್ಲಿ ಹೆಚ್ಚಾಗಿ ಬೇಡಿಕೆ ಇರುತ್ತದೆ. ನಾವು ಎರಡು ದಿನಕ್ಕೊಮ್ಮೆ ಹೂವು ಕಟಾವು ಮಾಡಿ, ಹಾವೇರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ವಾರಕ್ಕೆ ₹ 3 ಸಾವಿರ ಆದಾಯ ಬರುತ್ತದೆ ಎಂದು ಅವರು ವಿವರಿಸಿದರು.

ಚೆಂಡು ಹೂವು ಬೆಳೆಯುವುದು ಅಷ್ಟು ಸುಲಭವಲ್ಲ. ಗಿಡಗಳ ಮಧ್ಯೆ ಕಳೆಗಳು ಬಂದ ತಕ್ಷಣ ತೆಗೆಯಬೇಕು. ಒಂದು ಗಿಡದಲ್ಲಿ ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಔಷಧ ಸಿಂಪಡಿಸಬೇಕು. ಬೆಳಗ್ಗೆ ಅಥವಾ ಸಂಜೆ ವೇಳೆ ಕಟಾವು ಮಾಡಬೇಕು. ಮಾರುಕಟ್ಟೆಯಬಗ್ಗೆಯೂ ಅನುಭವ ಇರಬೇಕು ಎನ್ನುತ್ತಾರೆ ಗುರುರಾಜ ಸಿದ್ದೋಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT