ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಪ್ರಜಾವಾಣಿ ವರದಿಗೆ ಸ್ಪಂದನೆ: ನೆಗಳೂರು ಗ್ರಾಮಸ್ಥರಿಗೆ ಆಧಾರ್‌ ನೋಂದಣಿ

Published 11 ಅಕ್ಟೋಬರ್ 2023, 13:55 IST
Last Updated 11 ಅಕ್ಟೋಬರ್ 2023, 13:55 IST
ಅಕ್ಷರ ಗಾತ್ರ

ಗುತ್ತಲ: ಆಧಾರ್‌ ಕಾರ್ಡ್‌ ಇಲ್ಲದೆ ಪರದಾಡುತ್ತಿದ್ದ ನೆಗಳೂರು ಗ್ರಾಮದ 30ಕ್ಕೂ ಹೆಚ್ಚು ಮಂದಿಗೆ ಗುತ್ತಲ ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಹೊಸದಾಗಿ ಆಧಾರ್‌ ನೋಂದಣಿ ಮಾಡಿಸುವ ಮೂಲಕ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿತು. 

ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ ಮತ್ತು ಗ್ರಾಮ ಲೆಕ್ಕಾಧಿಕಾರಿ ಫಕ್ಕಿರೇಶ ಬಾರ್ಕಿ ಅವರು ಮಂಗಳವಾರ ನೆಗಳೂರ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರಿಗೆ ತಿಳಿವಳಿಕೆ ಪತ್ರ ನೀಡಿ, ಆಧಾರ್‌ ನೋಂದಣಿಗೆ ಬುಧವಾರ ಗುತ್ತಲಕ್ಕೆ ಬರುವಂತೆ ಮನವಿ ಮಾಡಿದರು. 

ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶದಂತೆ, ಜಿಲ್ಲಾ ಆಧಾರ್‌ ಸಂಯೋಜಕ ಬಿ.ವೀರೇಶ ಅವರು ಗುತ್ತಲದ ನೆಮ್ಮದಿ ಕೇಂದ್ರಕ್ಕೆ ಬಂದು ಸಮಸ್ಯೆಗಳನ್ನು ಪತ್ತೆಹಚ್ಚಿ ಗ್ರಾಮಸ್ಥರಿಗೆ ಹೊಸದಾಗಿ ನೋಂದಣಿ ಮಾಡಿಸಿದರು. 

‘2010–11ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌.ಪಿ.ಆರ್‌) ಸಂದರ್ಭದಲ್ಲಿ ಖಾಸಗಿ ಏಜೆನ್ಸಿಗಳು ಸಂಗ್ರಹಿಸಿದ  ದತ್ತಾಂಶಗಳಲ್ಲಿ ಕೆಲವು ತಪ್ಪುಗಳಾಗಿವೆ. ಕುಟುಂಬ ಸದಸ್ಯರ ಬಯೋಮೆಟ್ರಿಕ್‌ಗಳು ಅದಲು ಬದಲಾಗಿವೆ. ಈ ಮೂಲ ಮಾಹಿತಿಯನ್ನೇ ಆಧಾರ್‌ಗೆ ಬಳಸಿಕೊಂಡ ಪರಿಣಾಮ, ಜನರು ಆಧಾರ್‌ ನೋಂದಣಿ ಮಾಡಿಸಿದಾಗ ಬಯೋಮೆಟ್ರಿಕ್‌ಗಳು ಹೊಂದಾಣಿಕೆಯಾಗದೇ ಸಮಸ್ಯೆಗಳಾಗಿವೆ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು. 

‘ಆಧಾರ್‌ ನೋಂದಣಿ ಮಾಡಿಸಿದ ನಂತರ ಸ್ವೀಕೃತಿ ಪತ್ರವನ್ನು ಕಳೆದಿರುವುದು, ಆಧಾರ್‌ ಅಪ್‌ಡೇಟ್‌ಗೆ ಅವಧಿ ಮೀರಿದ ನಂತರ ಹೋಗಿರುವುದು ಸೇರಿದಂತೆ ಕೆಲವು ತಪ್ಪುಗಳು ಗ್ರಾಮಸ್ಥರಿಂದಲೂ ಆಗಿವೆ. ಕಾರ್ಮಿಕರ ಅಂಗೈಗೆರೆ ಅಳಿಸುವುದು, ಬದಲಾಗುವುದು ಸಾಮಾನ್ಯ. ಆದರೆ, ಕೈಗಳ 10 ಬೆರಳುಗಳನ್ನು ನಾಲ್ಕು ಬಾರಿ ಸ್ಯಾನ್‌ ಮಾಡಿ, ಕಣ್ಣಿನ ಸ್ಕ್ಯಾನ್‌ ಜೊತೆ ಹೊಂದಾಣಿಕೆ ಮಾಡಿ, ಆಧಾರ್‌ ಕಾರ್ಡ್‌ ಪಡೆಯಬಹುದು’ ಎಂದು ಜಿಲ್ಲಾ ಆಧಾರ್‌ ಸಂಯೋಜಕ ಬಿ.ವೀರೇಶ ಮಾಹಿತಿ ನೀಡಿದರು. 

‘ಈ ಹಿಂದೆ ತಪ್ಪಾಗಿ ಬಯೋಮೆಟ್ರಿಕ್‌ ಕೊಟ್ಟವರು, ಬೆಂಗಳೂರಿನ ಖನಿಜ ಭವನದ ಆಧಾರ್‌ ನೋಂದಣಿ ಕೇಂದ್ರಕ್ಕೆ ಹೋಗಿ ಹಿಂದಿನ ನೋಂದಣಿಗಳನ್ನು ರದ್ದುಪಡಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹಾವೇರಿಯ ಜಿಲ್ಲಾ ಆಧಾರ್‌ ಸಂಯೋಜಕರು, ಖನಿಜ ಭವನದ ಅಧಿಕಾರಿಗಳನ್ನು ಫೋನ್‌ನಲ್ಲಿ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಈ ಬಾರಿ ನಮಗೆಲ್ಲ ಆಧಾರ್‌ ಕಾರ್ಡ್‌ ಬರುವ ವಿಶ್ವಾಸ ಮೂಡಿದೆ’ ಎಂದು ಫಕ್ಕೀರಪ್ಪ ಶಿಡ್ಲಣ್ಣನವರ ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. 

ಅ.8ರಂದು ‘ಪ್ರಜಾವಾಣಿ’ಯಲ್ಲಿ ‘ಅಳಿಸಿದ ಅಂಗೈಗೆರೆ; ಸೌಲಭ್ಯಗಳಿಗೆ ಬರೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ನೆಗಳೂರು ಗ್ರಾಮಸ್ಥರಿಗೆ ಹೊಸದಾಗಿ ಆಧಾರ್‌ ನೋಂದಣಿ ಮಾಡಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಸೇವಾ ಕೇಂದ್ರದ ಆಪರೇಟರ್‌ಗಳಿಗೆ ಪುನಶ್ಚೇತನಾ ತರಬೇತಿ ಆಯೋಜಿಸುತ್ತೇವೆ

– ರಘುನಂದನ ಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ

[object Object]

ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT