ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗದ ಕಣ್ಣಾಗಿ ಕಾರ್ಯನಿರ್ವಹಿಸಿ

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಚುನಾವಣಾ ವೀಕ್ಷಕಿ ಡಾ.ಶಾಲಿನಿ ರಜನೀಶ್‌ ಸೂಚನೆ
Last Updated 19 ಅಕ್ಟೋಬರ್ 2020, 16:03 IST
ಅಕ್ಷರ ಗಾತ್ರ

ಹಾವೇರಿ: ಮೈಕ್ರೊ ವೀಕ್ಷಕರು ಆಯೋಗದ ಕಣ್ಣಾಗಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಬೇಕು. ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿ ಹಾಗೂ ಆಯೋಗದ ಮಾರ್ಗಸೂಚಿಯಂತೆ ಮತದಾನದ ಪ್ರಕ್ರಿಯೆಗಳ ಮೇಲೆ ನಿಗಾವಹಿಸಿ ಕಾಲ ಕಾಲಕ್ಕೆ ಚುನಾವಣಾ ವೀಕ್ಷಕರಿಗೆ ವರದಿ ಮಾಡಬೇಕು ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ವೀಕ್ಷಕಿ ಡಾ.ಶಾಲಿನಿ ರಜನೀಶ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಮತಗಟ್ಟೆಗಳಿಗೆ ನೇಮಕ ಮಾಡಲಾದ ಮೈಕ್ರೊ ವೀಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಗಮ ಹಾಗೂ ಸುವ್ಯಸ್ಥಿತ ಚುನಾವಣೆಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಪ್ರತ್ಯೇಕ ಮಾರ್ಕಿಂಗ್ ಪೆನ್‌:ಈ ಬಾರಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಪೇಪರ್ ಬ್ಯಾಲೆಟ್‍ಗಳನ್ನು ಬಳಸಲಾಗುತ್ತದೆ. ಮತದಾನಕ್ಕೆ ನೀಲಿ ಶಾಹಿಯ ಮಾರ್ಕಿಂಗ್ ಪೆನ್‍ಗಳನ್ನು ನೀಡಲಾಗುತ್ತದೆ. ಒಬ್ಬರು ಬಳಸಿದ ಮಾರ್ಕಿಂಗ್ ಪೆನ್‍ಗಳನ್ನು ಮತ್ತೊಬ್ಬರು ಬಳಸುವ ಹಾಗಿಲ್ಲ. ಮತದಾನ ಪತ್ರದಲ್ಲಿ ಕಡ್ಡಾಯವಾಗಿ ಮೊದಲ ಪ್ರಾಶಸ್ತ್ಯದ ಮತ ನಮೂದಿಸಲೇಬೇಕು. ಮತಗಳನ್ನು ಅಂಕಿಗಳಲ್ಲಿ ತಮಗೆ ನೀಡಿದ ಬ್ಯಾಲೆಟ್‌ನಲ್ಲಿ ಬರೆಯಬೇಕು. ಇಲ್ಲವಾದರೆ ಮತದಾನ ತಿರಸ್ಕೃತವಾಗುತ್ತದೆ. ‘ನೋಟಾ’ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ದಾಖಲೆ ತೋರಿಸಿ:ಮತದಾನ ಮಾಡಲು ಭಾರತ ಚುನಾವಣಾ ಆಯೋಗ ನೀಡಿದ ಗುರುತು ಪತ್ರ ಅಥವಾ ಪಾನ್‍ಕಾರ್ಡ್ ಅಥವಾ ಚಾಲನಾ ಪತ್ರ ಸೇರಿದಂತೆ ಆಯೋಗ ನಿಗದಿಪಡಿಸಿದ ಒಂಬತ್ತು ದಾಖಲೆಗಳಲ್ಲಿ ಯಾವುದಾರು ಒಂದು ದಾಖಲೆಗಳನ್ನು ತೋರಿಸಿ, ಮತದಾನ ಮಾಡಬಹುದು ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಪ್ರಮಾಣಿಕೃತ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಕೊಠಡಿಯೊಳಗೆ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಒಬ್ಬ ಅಭ್ಯರ್ಥಿಯ ಒಬ್ಬ ಏಜೆಂಟ್‌ಗೆ ಮಾತ್ರ ಅವಕಾಶ ಕಲ್ಪಿಸಬೇಕು. ಮತದಾನ ಆರಂಭವಾಗುವ 15 ನಿಮಿಷದ ಮುನ್ನ ಮತಗಟ್ಟೆಗೆ ಹಾಜರಿರಬೇಕು ಎಂದು ಹೇಳಿದರು.

ಚಿಕಿತ್ಸೆ ವೆಚ್ಚ:ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ‘ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಕಾಯಂ ನೌಕರರು ಹಾಗೂ ಗುತ್ತಿಗೆ ನೌಕರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಒಂದೊಮ್ಮೆ ಕರ್ತವ್ಯದ ಸಂದರ್ಭದಲ್ಲಿ ಸೋಂಕಿಗೆ ಒಳಗಾದಲ್ಲಿ ಪೂರ್ಣ ಪ್ರಮಾಣದ ವೆಚ್ಚ ಭರಿಸಿ ಚಿಕಿತ್ಸೆ ಕೊಡಿಸಲಾಗುವುದು. ಸರದಿಯಂತೆ ವೈದ್ಯರು ಭೇಟಿ ನೀಡಲಿದ್ದಾರೆ, ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT