ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪಾರಂಪರಿಕ ಮ್ಯೂಸಿಯಂ ಆರಂಭಕ್ಕೆ ಕ್ರಮ

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ: ಪ್ರಕೃತಿ ಚಿಕಿತ್ಸಾಲಯ ಕಾರ್ಯಾರಂಭಕ್ಕೆ ಸೂಚನೆ
Last Updated 14 ಜನವರಿ 2022, 13:47 IST
ಅಕ್ಷರ ಗಾತ್ರ

ಹಾವೇರಿ: ‘ಕಾಗಿನೆಲೆ ಉದ್ಯಾನದಲ್ಲಿ ಪ್ರಾಚ್ಯ, ಪಾರಂಪರಿಕ, ಶೈಕ್ಷಣಿಕ ಹಾಗೂ ಡಿಜಿಟಿಲ್ ಮ್ಯೂಸಿಯಂಗಳ ಆರಂಭಕ್ಕೆ ಅಗತ್ಯವಾದ ವಸ್ತುಗಳ ಸಂಗ್ರಹಕ್ಕೆ ಉಪ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಕಾಗಿನೆಲೆಯಲ್ಲಿ ಶುಕ್ರವಾರ ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಗಿನೆಲೆ ಉದ್ಯಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಕೃತಿ ಚಿಕಿತ್ಸಾಲಯದ ನಿರ್ವಹಣೆಗೆ ಉಜರೆ - ಶಿರಸಿಯ ಪ್ರಕೃತಿ ಚಿಕಿತ್ಸಾಲಯದಂತಹ ಖಾಸಗಿ ಆಡಳಿತ ಸಂಸ್ಥೆಗೆ ವಹಿಸಲು ಟೆಂಡರ್ ಕರೆದು ಕ್ರಮವಹಿಸುವುದು. ಅಲ್ಲಿಯವರೆಗೂ ಪ್ರಾಧಿಕಾರದಿಂದಲೇ ಪರ್ಯಾಯ ವ್ಯವಸ್ಥೆಯಾಗಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಸೇವೆಗಳನ್ನು ಆರಂಭಿಸಲು ಹೊರಗುತ್ತಿಗೆ ಸೇವೆಯಲ್ಲಿ ಆಯುಷ್ ವೈದ್ಯರು, ಥೆರೆಪಿಸ್ಟ್‌ಗಳನ್ನು ನೇಮಕ ಮಾಡಿಕೊಂಡು ಅಗತ್ಯ ಔಷಧಿಗಳ ಖರೀದಿಗೆ ನಿಯಮಾನುಸಾರ ಕ್ರಮವಹಿಸುವಂತೆ ಸಲಹೆ ನೀಡಿದರು.

ಕಾಗಿನೆಲೆ ಉದ್ಯಾನ ಆವರಣದಲ್ಲಿ ನಿರ್ಮಾಣಗೊಂಡಿರುವ ವಸ್ತು ಸಂಗ್ರಹಾಲಯ ಕಟ್ಟಡದಲ್ಲಿ ಪ್ರಾಚ್ಯವಸ್ತು, ಪಾರಂಪರಿಕ ವಸ್ತು ಸಂಗ್ರಹಾಲಯ, ಶೈಕ್ಷಣಿಕ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಅಂಗವಾಗಿ ಕನಕದಾಸರ ಜೀವನ ವೃತ್ತಾಂತ ಕುರಿತಂತೆ ಆಧುನಿಕ ಡಿಜಿಟಲ್ ಮ್ಯೂಸಿಯಂಗಳ ಪ್ರತ್ಯೇಕ ವಿಭಾಗಗಳ ಸ್ಥಾಪಿಸುವ ಪ್ರಾಧಿಕಾರದ ಪ್ರಸ್ತಾವನೆಗೆ ಸಭೆಯಲ್ಲಿ ಸಹಮತ ವ್ಯಕ್ತಪಡಿಸಲಾಯಿತು.

ಕುಂಬಾರಿಕೆ, ಬಡಗಿತನ, ಲಂಬಾಣಿ ಕಸೂತಿ ಸೇರಿದಂತೆ ಪಾರಂಪರಿಕ ಗ್ರಾಮೀಣ ವೃತ್ತಿ ಕೌಶಲಗಳ ಹಾಗೂ ಕರಕುಶಲತೆ ಪುನಶ್ಚೇತಗೊಳಿಸಲು ಆಸಕ್ತ ಜನರಿಗೆ ಕೌಶಲ ತರಬೇತಿಗಳಿಗೆ, ತಯಾರಿಕೆಗೆ ಮೂಲ ಸಾಮಗ್ರಿಗಳನ್ನು ಒದಗಿಸಿ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

ಸಭೆಗೆ ಕಾಗಿನೆಲೆ ಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮಲ್ಲೇಶಪ್ಪ ಹೊರಪೇಟೆ ಅವರು ಪ್ರಾಧಿಕಾರದ ಚಟುವಟಿಕೆಗಳ ಮಾಹಿತಿ ನೀಡಿ, ವಸ್ತು ಸಂಗ್ರಹಾಲಯಗಳ ಸ್ವರೂಪವನ್ನು ವಿವರಿಸಿದರು.

‘ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ’

ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಜಿಲ್ಲೆಯಲ್ಲಿರುವ ಪ್ರಾಚೀನ ಮೂರ್ತಿಗಳು, ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲು, ಕೆತ್ತನೆಯ ವಿಶೇಷ ಶಿಲ್ಪಗಳು ಹಾಗೂ ಪಾರಂಪರಿಕ ವಸ್ತು ಸಂಗ್ರಹಾಲಯದಲ್ಲಿ ಹಳೆಯ ಕಾಲದ ಪಾತ್ರೆಗಳು, ಆಲಂಕಾರಿಕ ವಸ್ತುಗಳು, ಕೆಲಸಕ್ಕೆ ಬಳಸುವ ಸಲಕರಣೆಗಳು, ಕೃಷಿ ಸಲಕರಣೆಗಳನ್ನು ಸಂಗ್ರಹಿಸಿ ಅವುಗಳನ್ನು ಸೂಕ್ತವಾಗಿ ವರ್ಗೀಕರಿಸಿ ಅಳವಡಿಸುವ ಕುರಿತಂತೆ ಕ್ರಮವಹಿಸಬೇಕು. ಈ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರನ್ನೊಳಗೊಂಡ ಉಪ ಸಮಿತಿಯನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶೈಕ್ಷಣಿಕ ವಸ್ತು ಸಂಗ್ರಹಾಲಯದ ವಿಭಾಗದಲ್ಲಿ ಅಪರೂಪದ ತಾಳೆಗರಿ ಹಸ್ತಪ್ರತಿ, ತಾಮ್ರಪತ್ರ ಕೋರಿ, ಕಾಗದ ಪತ್ರಗಳನ್ನು ಸಂಗ್ರಹಿಸುವುದು, ಈ ಉದ್ದೇಶಕ್ಕಾಗಿ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ತಜ್ಞರನ್ನು ನೇಮಕ ಮಾಡಿಕೊಂಡು ಸಂಗ್ರಹ ಮಾಡಲು ನಿರ್ಧರಿಸಲಾಯಿತು.

ದಕ್ಷಿಣ ಕನ್ನಡದ ಪಿಳಿಕುಳಿ ಮಾದರಿಯಲ್ಲಿ ಕನಕದಾಸರ ಜೀವನ ವೃತ್ತಾಂತ ಕುರಿತಂತೆ ಆಧುನಿಕ ಡಿಟಿಜಲ್ ಮ್ಯೂಸಿಯಂ ಅಭಿವೃದ್ಧಿಪಡಿಸಿ ನಮ್ಮ ಪರಂಪರೆ ಇತಿಹಾಸವನ್ನು ತಿಳಿಸುವಂತಹ ಕಾರ್ಯ ಕೈಗೊಳ್ಳಲು ಸಹಮತ ವ್ಯಕ್ತಪಡಿಸಿ ಇದಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿ.ವೈ.ಎಸ್.ಪಿ. ಶಂಕರ ಮಾರಿಹಾಳ, ಶಿಗ್ಗಾವಿ ತಹಶೀಲ್ದಾರ್‌ ಮಂಜುನಾಥ ಮುನ್ನೋಳ, ಸವಣೂರ ತಹಶೀಲ್ದಾರ್‌ ಜಿ.ಅನಿಲ್‍ಕುಮಾರ, ರಟ್ಟಿಹಳ್ಳಿ ತಹಶೀಲ್ದಾರ್‌ ಅರುಣಕುಮಾರ ಕಾರಗಿ, ಬ್ಯಾಡಗಿ ತಹಶೀಲ್ದಾರ್‌ ದ್ಯಾಮಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT