ಮಂಗಳವಾರ, ಸೆಪ್ಟೆಂಬರ್ 24, 2019
29 °C
ಪರೀಕ್ಷಾ ಕೇಂದ್ರಗಳಾದ ಪರಿಹಾರ ಕೇಂದ್ರಗಳು l ಹಾವೇರಿಯಲ್ಲಿ ಶೇ 99ರಷ್ಟು ಸಾಧನೆ

ವಯಸ್ಕರನ್ನು ‘ಪರೀಕ್ಷೆ’ಗೆ ದೂಡಿದ ಪ್ರವಾಹ!

Published:
Updated:
Prajavani

ಹಾವೇರಿ: ವರ್ಷವಿಡೀ ಪಾಠ ಕಲಿಯುತ್ತಿದ್ದ ವಯಸ್ಕರು, ನಾನಾ ಕಾರಣಗಳನ್ನು ನೀಡಿ ಪರೀಕ್ಷೆಗೆ ಚಕ್ಕರ್ ಹೊಡೆಯುತ್ತಿದ್ದರು. ಆದರೆ, ಈ ಬಾರಿ ಪರೀಕ್ಷಾ ಸಮಯದಲ್ಲೇ ಜಿಲ್ಲೆಗೆ ಬಂದ ಭೀಕರ ಪ್ರವಾಹ, ಅವರನ್ನೆಲ್ಲ ಸಂತ್ರಸ್ತರನ್ನಾಗಿ ಮಾಡಿ ಶಾಲಾ ಕೊಠಡಿಗಳಿಗೆ (ಪರಿಹಾರ ಕೇಂದ್ರ) ತಳ್ಳಿತು. ಇದರ ಲಾಭ ಪಡೆದ ಇಲಾಖೆ ಸಿಬ್ಬಂದಿ, ಅಲ್ಲೇ ಪರೀಕ್ಷೆ ಬರೆಸುವ ಮೂಲಕ ಶೇ 99ರಷ್ಟು ಹಾಜರಾತಿಯ ಸಾಧನೆ ಮಾಡಿದ್ದಾರೆ!

2018–19ನೇ ಸಾಲಿನಲ್ಲಿ 25,504 ಅನಕ್ಷರಸ್ಥರನ್ನು (15ರಿಂದ 60 ವರ್ಷದ ನಡುವಿನ) ‘ವಯಸ್ಕರ ಶಿಕ್ಷಣ’ದ ವ್ಯಾಪ್ತಿಗೆ ತರಲಾಗಿತ್ತು. ಅವರಿಗೆ ನಿತ್ಯ ಒಂದು ತಾಸು ಪಾಠ ಮಾಡಲು ಎರಡೂವರೆ ಸಾವಿರ ಶಿಕ್ಷಕರನ್ನು ನೇಮಿಸಲಾಗಿತ್ತು. ಶೈಕ್ಷಣಿಕ ವರ್ಷ ಪೂರ್ಣಗೊಂಡ ಬಳಿಕಕಲಿಕಾ ಸಾಮರ್ಥ್ಯ ಪರಿಶೀಲಿಸಲು ಆ. 11ರಂದು ಪರೀಕ್ಷೆ ನಿಗದಿ ಮಾಡಲಾಗಿತ್ತು.

‘ಜಿಲ್ಲೆಯಲ್ಲಿ 124 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದೆವು. ಎಲ್ಲರೂ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಕಲಿಕಾರ್ಥಿಗಳಿಗೆ ತಿಳಿಹೇಳುವ ಕೆಲಸ ಆ.1ರಿಂದಲೇ ನಡೆಯುತ್ತಿತ್ತು. ಅಷ್ಟರಲ್ಲಾಗಲೇ ಕೆಲವರು ಕೃಷಿ ಕೆಲಸಗಳಿಂದಾಗಿ ಪುನರಾವಲೋಕನ ತರಗತಿಗಳಿಗೂ ಗೈರಾಗುತ್ತಿದ್ದರು’ ಎಂದು ವಯಸ್ಕರ ಶಿಕ್ಷಣ ವಿಭಾಗದ ಅಧಿಕಾರಿಯೊಬ್ಬರು ವಿವರಿಸಿದರು.

‘ಕಲಿಕಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವ ಜವಾಬ್ದಾರಿಯನ್ನು ಶಿಕ್ಷಕರಿಗೇ ವಹಿಸಲಾಗಿತ್ತು. ಇದರ ನಡುವೆಯೇ, ಜಿಲ್ಲೆಯಲ್ಲಿ ಆ.2ರಂದು ಮೊದಲ ಮಳೆ ಸುರಿಯಿತು. ಅಷ್ಟು ದಿನ ಬರಗಾಲದಲ್ಲಿದ್ದ ರೈತರು, ಮಳೆ ಆಗುತ್ತಿದ್ದಂತೆಯೇ ಕಲಿಕೆ ನಿಲ್ಲಿಸಿ ಕೃಷಿ ಚಟುವಟಿಕೆ ಯತ್ತ ಚಿತ್ತ ಹರಿಸಿದರು’ ಎಂದೂ ಹೇಳಿದರು.

‘ಆದರೆ, ಮಳೆ ವಾರವಿಡೀ ಬಿಡದೆ ಸುರಿದಿದ್ದರಿಂದ ಹಾಗೂ ಪ್ರವಾಹ ಬಂದಿದ್ದರಿಂದ ಊರು, ಹೊಲ– ಗದ್ದೆಗಳು ಜಲಾವೃತವಾದವು. ಇದರಿಂದ ನಮ್ಮ ಕಲಿಕಾರ್ಥಿಗಳೂ (ಶೇ 75ರಷ್ಟು ಮಂದಿ) ಸಂತ್ರಸ್ತರಾಗಿ, ಶಾಲೆಗಳಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರಗಳನ್ನು ಸೇರಿದರು. ಆ.11ರಂದು ಅಲ್ಲೇ ಪರೀಕ್ಷೆ ಬರೆಸಿದೆವು. ಪರಿಹಾರ ಕೇಂದ್ರದಲ್ಲಿರದ ಕಲಿಕಾರ್ಥಿಗಳನ್ನು ಟ್ರಾಕ್ಟರ್, ಆಟೊ, ಟೆಂಪೊ ಹಾಗೂ ಟಂಟಂಗಳಲ್ಲಿ ಕರೆತಂದು ಪರೀಕ್ಷೆ ಬರೆಸಿದೆವು’ ಎಂದು ಮಾಹಿತಿ
ಕೊಟ್ಟರು.

₹ 3ಕ್ಕೆ ಮೌಲ್ಯಮಾಪನ!: ‘ಪ್ರತಿ ತಾಲ್ಲೂಕುಗಳಲ್ಲೂ ಮೌಲ್ಯಮಾಪನಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈಗಾಗಲೇ ಮೌಲ್ಯಮಾಪನ ನಡೆಯುತ್ತಿದೆ. ಈ ಕೆಲಸಕ್ಕೆ ಪ್ರತಿ ಶಿಕ್ಷಕನಿಗೆ ದಿನಕ್ಕೆ ₹3 ಗೌರವಧನ ಸಿಗುತ್ತದೆ. ಸದ್ಯದಲ್ಲೇ ಫಲಿತಾಂಶ ಬರಲಿದ್ದು, ಗೈರಾದವರಿಗೆ ಮತ್ತೆ ಪರೀಕ್ಷೆ ಬರೆಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ’ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

ಸಾಕ್ಷರತೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ

‘25,174 ವಯಸ್ಕರು ಪರೀಕ್ಷೆ ಬರೆದಿದ್ದು, 330 ಮಂದಿ ಮಾತ್ರ ಗೈರಾಗಿದ್ದಾರೆ. ಶೇ 99ರಷ್ಟು ಮಂದಿಯಿಂದ ಪರೀಕ್ಷೆ ಬರೆಸಿರುವುದೂ ರಾಜ್ಯದಲ್ಲಿ ದಾಖಲೆ. ಪ್ರವಾಹ ಎಲ್ಲವನ್ನೂ ನಾಶ ಮಾಡಿದರೂ, ಇದೊಂದು ವಿಚಾರದಲ್ಲಿ ಅನುಕೂಲ ಮಾಡಿಕೊಟ್ಟಿತು. ಈ ಬಾರಿ ಹಾವೇರಿಯಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಚಿಗುರಿದೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ‘ಪ‍್ರಜಾವಾಣಿ’ಗೆ ತಿಳಿಸಿದರು.

Post Comments (+)