ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಭರದಿಂದ ಸಾಗಿದ ಮುಂಗಾರು ಕೃಷಿ ಚಟುವಟಿಕೆ

ತಾಲ್ಲೂಕಿನಲ್ಲಿ 53,931 ಹೆಕ್ಟೇರ್‌ ಬಿತ್ತನೆ ಗುರಿ; ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ
Last Updated 7 ಜೂನ್ 2021, 3:12 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಬಿತ್ತನೆಗೆ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ರೈತರು ಹೊಲ ಹಸನು ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈರುಳ್ಳಿ, ಬೆಳ್ಳುಳ್ಳಿ ಹೈಬ್ರೀಡ್‌ ಜೋಳ, ಸೊಯಾಬಿನ್‌ ಸೇರಿದಂತೆ ಇತರೆ ತೃಣ ಧಾನ್ಯಗಳ ಬಿತ್ತನೆಗೆ ಮತ್ತು ಗೋವಿನ ಜೋಳ, ಹತ್ತಿ ಬಿತ್ತಲು ರಂಟಿ ಸಾಲು ಬಿಡಲು ರೈತರು ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ಮೇಡ್ಲೇರಿ, ಕುಪ್ಪೆಲೂರು ಮತ್ತು ರಾಣೆಬೆನ್ನೂರು 3 ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಹಾಗೂ 5 ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.

ನಗರದ ಎಪಿಎಂಸಿ ಆವರಣದಲ್ಲಿ ವಾಗೀಶನಗರದ ಕಡೆ ಇರುವ ಗೇಟ್‌ ಸಮೀಪದಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ಅರುಣಕುಮಾರ ಪೂಜಾರ ಮೇ 31 ರಂದು ಚಾಲನೆ ನೀಡಿದ್ದಾರೆ. ರೈತರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಬಿತ್ತನೆ ಬೀಜ ಖರೀದಿಸಬೇಕು. ಮುಗಿ ಬೀಳಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ 53,931 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಭತ್ತ 6,250 ಹೆಕ್ಟೇರ್‌, ಗೋವಿನಜೋಳ 39,000 ಹೆಕ್ಟೇರ್‌, ಹತ್ತಿ 970 ಹೆಕ್ಟೇರ್‌, ಶೇಂಗಾ 900 ಹೆಕ್ಟೇರ್‌, ಹೆಸರು ಕಾಳು 200 ಹೆಕ್ಟೇರ್‌, ಸೂರ್ಯಕಾಂತಿ 115 ಹೆಕ್ಟೇರ್‌, ತೊಗರೆ 2,575 ಹೆಕ್ಟೇರ್‌, ಜೋಳ 400 ಹೆಕ್ಟೇರ್‌, ರಾಗಿ 50 ಹೆಕ್ಟೇರ್‌, ತೃಣಧಾನ್ಯ 100 ಹೆಕ್ಟೇರ್‌ ಹಾಗೂ ಇತರೆ ಬೆಳೆಗಳು 3,000 ಹೆಕ್ಟೇರ್‌, ಕಬ್ಬು ಹೊಸದು 200 ಹೆಕ್ಟೇರ್‌ ಮತ್ತು ಕುಳೆ ಕಬ್ಬು 1,450 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಇದೆ. ಯೂರಿಯಾ 10 ಸಾವಿರ ಟನ್‌, ಡಿಎಪಿ 4353 ಟನ್‌, ಎಂಒಪಿ 1092 ಮೆಟ್ರಿಕ್‌ ಟನ್‌ ಗೊಬ್ಬರ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಿತ್ತನೆಗೆ ಹೊಲವನ್ನು ಉಳುಮೆ ಮಾಡುತ್ತಿದ್ದೇವೆ. ಕಳೆದ ವರ್ಷ ಗೋವಿನಜೋಳ ಮತ್ತು ಹತ್ತಿ, ಈರುಳ್ಳಿ ಉತ್ತಮ ಬೆಳೆ ಬಂದರೂ ಸೂಕ್ತ ಬೆಲೆ ಸಿಗಲಿಲ್ಲ. ಹೆಚ್ಚಿನ ಮಳೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊದಲ್ಲಿಯೇ ಕೊಳೆತು ಹೋಯಿತು. ದರ ಕೂಡ ಸಿಗಲಿಲ್ಲ. ಲಾಕ್‌ಡೌನ್‌ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುಂತಾಯಿತು. ಈ ವರ್ಷವಾದರೂ ಉತ್ತಮ ಮಳೆ, ಬೆಳೆ ಬಂದು ಬೆಲೆ ಸಿಕ್ಕರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಬಿತ್ತನೆಗೆ ಹೊಲ ಸಿದ್ದಪಡಿಸುತ್ತಿದ್ದ ತಾಲ್ಲೂಕಿನ ಅಸುಂಡಿಯ ಕಾಂತೇಶ ಹಾಗೂ ಯತ್ತಿನಹಳ್ಳಿ ರೈತ ಭರಮರಡ್ಡಿ ಶಿ. ದೇವರಡ್ಡಿ ಹೇಳಿದರು.

‘ಈ ಬಾರಿ ಈರುಳ್ಳಿ 4,200 ಹೆಕ್ಟೇರ್‌ ಹಾಗೂ ಬೆಳ್ಳುಳ್ಳಿ 1,250 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಹಾವೇರಿ ಜಿಲ್ಲೆ ದೇವಿಹೊಸೂರ ತೋಟಗಾರಿಕೆ ವಿಸ್ತರಣ ಕೇಂದ್ರದಲ್ಲಿ ಬೆಳ್ಳುಳ್ಳಿ ಬೀಜ ದರ ಪ್ರತಿ ಕೆ.ಜಿಗೆ ₹ 100 ಇದೆ’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ರಾಮಚಂದ್ರ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT