ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಆಂಬುಲೆನ್ಸ್‌: ಸಚಿವ ಶಿವರಾಮ ಹೆಬ್ಬಾರ್‌

ಕೋಚಿಂಗ್‌ ನೀಡಲು 500 ಅಭ್ಯರ್ಥಿಗಳ ಆಯ್ಕೆ: ಸಚಿವ ಶಿವರಾಮ ಹೆಬ್ಬಾರ್‌
Last Updated 7 ಫೆಬ್ರುವರಿ 2022, 15:13 IST
ಅಕ್ಷರ ಗಾತ್ರ

ಹಾವೇರಿ: ಕಾರ್ಮಿಕ ಕಲ್ಯಾಣಕ್ಕಾಗಿ ಹೃದಯ, ಕಣ್ಣಿನ ಚಿಕಿತ್ಸೆ, ರಕ್ತ ಪರೀಕ್ಷೆ ಮಾಡಲು ಲ್ಯಾಬೊರೇಟರಿ ಸಿಸ್ಟಂ ಆರಂಭ ಮಾಡಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಆಂಬುಲೆನ್ಸ್‌ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್‌ ಹೇಳಿದರು.

ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಕಾರ್ಮಿಕರಿಗೆ ದೊಡ್ಡ ಶಕ್ತಿ ನೀಡಿದೆ.ಮಧ್ಯವರ್ತಿಗಳ ಹಾವಳಿ ತಿಪ್ಪಿಸುವ ನಿಟ್ಟಿನಲ್ಲಿ ಹೊಸ ಪದ್ಧತಿ ಜಾರಿಗೆ ತರಲಾಗಿದ್ದು, ₹175 ಕೋಟಿಯನ್ನು ನೇರವಾಗಿ ಕಾರ್ಮಿಕರ ಮಕ್ಕಳ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲಾಗುತ್ತಿದೆ. ಅತಿ ಶಿಘ್ರವಾಗಿ ‘ಡೈರೆಕ್ಟ್ ಬೆನಫಿಟ್ ಟಾಸ್ಕ್’ (ಡಿಬಿಟಿ) ಮೂಲಕ ₹225 ಕೋಟಿಯನ್ನು ವಿದ್ಯಾರ್ಥಿಗಳಿಗೆ ಖಾತೆಗೆ ಜಮೆ ಮಾಡಲಾಗುವುದು. ಒಟ್ಟಾರೆ ₹400 ಕೋಟಿ ಮಿಸಲಿಡಲಾಗಿದೆ. ಒಂದನೇ ತರಗತಿಯಿಂದ ಕಾಲೇಜು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲಿದ್ದಾರೆ ಎಂದರು.

ಮಾರ್ಚ್‌ 1ರಿಂದ ಕೋಚಿಂಗ್‌:

ದೇಶದಲ್ಲೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು. ಐ.ಎ.ಎಸ್. ಮತ್ತು ಕೆ.ಎ.ಎಸ್. ಕೋಚಿಂಗ್ ಪಡೆಯಲು ಪರೀಕ್ಷೆ ಪ್ರಾಧಿಕಾರದ ಮೂಲಕ 2060 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ವರ್ಷ 500 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಹೈದ್ರಾಬಾದ್, ದೆಹಲಿ ಹಾಗೂ ಚೆನ್ನೈ ಸೇರಿ ಐದು ಸ್ಥಳಗಳಲ್ಲಿ ತರಬೇತಿ ನೀಡಲಾಗುವುದು. ಐ.ಎ.ಎಸ್. ತರಬೇತಿಗೆ ₹6,000 ಮತ್ತು ಕೆ.ಎ.ಎಸ್. ತರಬೇತಿಗೆ ₹5,000 ಸ್ಟೈಫಂಡ್ ನೀಡಲಾಗುತ್ತಿದೆ. ಮಾರ್ಚ್ 1ರಿಂದ ಕೋಚಿಂಗ್ ಆರಂಭವಾಗಲಿದೆ ಎಂದರು.

ಫೆ.14ರಿಂದ ಅಧಿವೇಶನ ಆರಂಭವಾಗಲಿದ್ದು, ಮೆಡಿಕಲ್ ಕಾಲೇಜು ತರಗತಿಗಳ ಆರಂಭದ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ತ್ವರಿತವಾಗಿ ಕಾರ್ಯಾರಂಭಕ್ಕೆ ಕ್ರಮವಹಿಸಲಾಗುವುದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾತಿ, ಅನುದಾನ ಬಿಡುಗಡೆ ಸೇರಿದಂತೆ ಸಮಗ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಎರಡು ತಾಲ್ಲೂಕಿಗೂ ಸೌಲಭ್ಯ:

ಜಿಲ್ಲೆಯ ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರಗತಿ ಮಾಹಿತಿ ಪಡೆದ ಸಚಿವರು, ಉದ್ಯೋಗ ಖಾತ್ರಿ ಯೋಜನೆಯಡಿ, ಅಡಿಕೆ ಬೆಳೆ ನಾಟಿಗೆ ಹಾವೇರಿ ಮತ್ತು ರಾಣೇಬೆನ್ನೂರು ತಾಲೂಕಿನಲ್ಲೂ ನೆರವು ನೀಡುವ ಕುರಿತಂತೆ ಪ್ರಸ್ತಾವ ಸಲ್ಲಿಸಿದರೆ ಮಂಜೂರಾತಿ ದೊರಕಿಸಿಕೊಡುವುದಾಗಿ ತಿಳಿಸಿದರು.

ಕೋವಿಡ್‍ನಿಂದ ಮೃತರಾದ ಕುಟುಂಬಗಳಿಗೆ ಪರಿಹಾರ ಹಣ ಬಾಕಿ ಉಳಿದಿರುವುದಕ್ಕೆ ಕಾರಣ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಜಂಟಿಯಾಗಿ ಪರಿಶೀಲಿಸಿ ತ್ವರಿತವಾಗಿ ಹಣ ಪಾವತಿಸಲು ಕ್ರಮವಹಿಸಬೇಕು. ಆಂಬುಲೆನ್ಸ್‌ ಚಾಲಕರ ಕೊರತೆ ಕುರಿತಂತೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT