ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರ: ಅಭಿವೃದ್ಧಿ ಕಾಣದ ಧರ್ಮರಾಜ ನಗರ

ಸ್ವಚ್ಛತೆ ಮತ್ತು ಮೂಲಸೌಕರ್ಯದ ಕೊರತೆ: ರಸ್ತೆ ಮತ್ತು ಚರಂಡಿ ದುರಸ್ತಿಗೆ ಒತ್ತಾಯ
Last Updated 31 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಸವಣೂರ: ಸ್ವಚ್ಛತೆ ಹಾಗೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ ಸವಣೂರ ಪುರಸಭೆಯ ಧರ್ಮರಾಜ ನಗರ. ಸಾಂಕ್ರಾಮಿಕ ರೋಗದ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.

ಸವಣೂರ ಪುರಸಭೆಯ 3 ಮತ್ತು 4ನೇ ವಾರ್ಡ್‌ ವ್ಯಾಪ್ತಿಯ ಧರ್ಮರಾಜ ನಗರದಲ್ಲಿ ಜನರಿಗೆ ಸಮರ್ಪಕವಾಗಿ ಓಡಾಡಲು ರಸ್ತೆ, ಚರಂಡಿಗಳಿಲ್ಲದೆ ಎಲ್ಲೆಂದರಲ್ಲಿ ತ್ಯಾಜ್ಯದ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಜನರು ರಾತ್ರಿ ಸಮಯದಲ್ಲಿ ನಿರ್ಭಯವಾಗಿ ಓಡಾಡಲು ಬೀದಿ ದೀಪದ ವ್ಯವಸ್ಥೆಯನ್ನು ಪುರಸಭೆ ವತಿಯಿಂದ ಒದಗಿಸಿ ಅನುಕೂಲವನ್ನು ಕಲ್ಪಿಸಬೇಕು. ಆದರೆ, ಪುರಸಭೆ ಅಧಿಕಾರಿ ಹಾಗೂ ಸದಸ್ಯರು ಹಾಗೂ ಆಡಳಿತ ಮಂಡಳಿಯ ನಿಷ್ಕಾಳಜಿಯಿಂದ ಕತ್ತಲಲ್ಲೇ ಆತಂಕದಿಂದ ಓಡಾಡುವಂತಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನಾಗೇಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಕೆಸರುಗದ್ದೆಗಳಾಗುವ ರಸ್ತೆ:ಧರ್ಮರಾಜ ನಗರ ಬಡಾವಣೆಯ ಕೆಲ ರಸ್ತೆಗಳನ್ನು ನಗರೋತ್ಥಾನ ಯೋಜನೆಯಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಮಾಡಲಾಗಿದೆ. ಆದರೆ, ರಸ್ತೆಯಲ್ಲಿನ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆಗಳು ಕೆಸರುಗದ್ದೆಗಳಾಗಿ ಪರಿವರ್ತನೆಯಾಗುತ್ತವೆ. ಮಹಿಳೆಯರು ಮತ್ತು ಮಕ್ಕಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಅಸಮರ್ಪಕ ಚರಂಡಿ:ಕೆಲ ಭಾಗಗಳಲ್ಲಿ ಚರಂಡಿಗಳು ತ್ಯಾಜ್ಯದಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಹಂದಿಗಳ ಹಾವಳಿ ಹೆಚ್ಚಾಗಿ ಅನೈರ್ಮಲ್ಯ ವಾತಾವರಣ ಉಂಟಾದರೂ ಪುರಸಭೆ ಸ್ವಚ್ಛತೆಗೆ ಮುಂದಾಗಿಲ್ಲ. ಇದರಿಂದ, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಬಡಾವಣೆ ನಿವಾಸಿಗಳಾದ ಮಾನಿಂಗಪ್ಪ ಆಲದಕಟ್ಟಿ ಹಾಗೂ ಈರಣ್ಣ ಕುಂಬಾರ ಸಮಸ್ಯೆ ತೋಡಿಕೊಂಡರು.

ಕುಡಿಯುವ ನೀರಿನ ಅನುಕೂಲಕ್ಕೆ ವರದಾ ನದಿಯ ನೀರನ್ನು ನಿರಂತರವಾಗಿ ಹರಿಸಿದರೂ ಕೂಡಾ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸರಿಯಾದ ಸಮಯಕ್ಕೆ ಪೂರೈಕೆ ಆಗುತ್ತಿಲ್ಲ. ತಿಂಗಳಲ್ಲಿ ಒಂದೆರಡು ಬಾರಿ ಕ್ಲೋರೈಡ್‌ಯುಕ್ತ ನೀರನ್ನು ಕುಡಿಯುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಪುರಸಭೆಯ 5ನೇ ವಾರ್ಡ್‌ ವ್ಯಾಪ್ತಿಯ ಅಧ್ಯಾಪಕ ನಗರದ ಕೆಲ ಭಾಗಗಳಲ್ಲಿ ಸಾರ್ವಜನಿಕರಿಗೆ ಓಡಾಡಲು ಸಮರ್ಪಕವಾದ ರಸ್ತೆಗಳಿಲ್ಲ. ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.

ಪಾಳುಬಿದ್ದ ಉದ್ಯಾನ:ಬೀದಿದೀಪ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಉದ್ಯಾನ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗುವ ಜನರು ಪುರಸಭೆ ವಿರುದ್ಧ ಹಿಡಿ ಶಾಪವನ್ನು ಹಾಕುತಿದ್ದಾರೆ. ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಬಡಾವಣೆ ನಿವಾಸಿಗಳಿಗೆ ಅನುಕೂಲವನ್ನು ಕಲ್ಪಿಸಬೇಕು ಎಂದು ಅಧ್ಯಾಪಕ ನಗರ ಬಡಾವಣೆ ನಿವಾಸಿ ಜಿ.ಬಿ. ಹೊಳೆಮ್ಮನವರ ಮನವಿ ಮಾಡಿಕೊಂಡಿದ್ದಾರೆ.

ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಡಾವಣೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT