6
ಜಿಲ್ಲಾಡಳಿತದ ಎದುರು ಅಂಗನವಾಡಿ ಕಾರ್ಯಕರ್ತೆಯರು– ಸಹಾಯಕಿಯರ ಪ್ರತಿಭಟನೆ

ಎಲ್‌ಕೆಜಿ: ಅಂಗನವಾಡಿಯಲ್ಲಿ ಆರಂಭಿಸಲು ಆಗ್ರಹ

Published:
Updated:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ಹಾವೇರಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು 

ಹಾವೇರಿ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಸಿಐಟಿಯು ಜಿಲ್ಲಾ ಘಟಕದ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಎಲ್‌.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿರುವ ಅನಧಿಕೃತ ಎಲ್‌.ಕೆ.ಜಿ. ಹಾಗೂ ಯು.ಕೆ.ಜಿ. ಶಾಲೆಗಳನ್ನು ರದ್ದುಪಡಿಸಬೇಕು. ಅಂಗನವಾಡಿ ಸಿಬ್ಬಂದಿಗೆ ಪ್ರತಿ ತಿಂಗಳ ವೇತನವನ್ನು ಸರಿಯಾಗಿ ನೀಡಬೇಕು ಎಂದು ಒತ್ತಾಯಿಸಿದರು.  ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆ ರಜೆ, ವರ್ಗಾವಣೆ ಸೌಲಭ್ಯ, ಮುಂಬಡ್ತಿ ಹಾಗೂ ಅನಾರೋಗ್ಯಕ್ಕೆ ತುತ್ತಾದಾಗ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ವೇತನ ಜಾರಿಯಾಗಬೇಕು. ಅಲ್ಲದೇ, ಕನಿಷ್ಠ ವೇತನ ₨18 ಸಾವಿರ ನೀಡಬೇಕು ಎಂದರು.

ಸಿಐಟಿಯು ತಾಲ್ಲೂಕು ಘಟಕದ ಸಂಚಾಲಕ ಮಹಾಂತೇಶ ಎಲಿ ಮಾತನಾಡಿ, ಅಂಗನವಾಡಿ ಸಹಾಯಕಿಯರಿಗೆ ಕಾರ್ಯಕರ್ತೆಯಾಗಿ ಮುಂಬಡ್ತಿ ನೀಡಲು ವಿಧಿಸಿರುವ ವಯಸ್ಸು ಹಾಗೂ ಭೌಗೋಳಿಕ ವ್ಯಾಪ್ತಿ ಮಿತಿಯನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಪಿ. ಮಾತನಾಡಿ, ಅಂಗನವಾಡಿ ಸಿಬ್ಬಂದಿಗೆ ಹೊಸ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಬೇಕು. ಅಲ್ಲದೇ, ನಿವೃತ್ತಿ ಬಳಿಕದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.  ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಹೇಮಾವತಿ ಅಸಾದಿ ಮಾತನಾಡಿ, ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ 100ರಷ್ಟು ಮೀಸಲಾತಿ ಕೊಡಬೇಕು. ಅಲ್ಲದೇ, ವಿವಿಧ ಯೋಜನೆಗಳಿಗೆ ಡಿ.ಡಿ, ಡಿ.ಒ, ಸಿಡಿಪಿಒಗಳನ್ನು ನೇಮಕ ಮಾಡಬೇಕು. ಕೇಂದ್ರ ಸರ್ಕಾರದ ‘ಮಾತೃ ವಂದನಾ’ ಕಾರ್ಯಕ್ರಮಕ್ಕೆ ₨300 ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಭೇಟಿ ನೀಡಿ, ಮನವಿ ಆಲಿಸಿದರು. 

ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಗೌರಮ್ಮ ಎಚ್‌.ನಾಯ್ಕರ್‌, ಕಾರ್ಯದರ್ಶಿ ಹೇಮಾವತಿ ಎಂ.ಎಲಿ. ಸಹ ಕಾರ್ಯದರ್ಶಿ ಲೀಲಾವತಿ ಸಾತಣ್ಣನವರ, ಜಿ.ಟಿ. ನಾಯಕ, ವಿನೋದಾ ಪಾಟೀಲ, ರತ್ನಾ ಕಲ್ಕಣಿ, ಲೀಲಾ ಆಲದಕಟ್ಟಿ ಇದ್ದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಯ ಅರ್ಜಿಯಲ್ಲಿ ‘ಮದುವೆಯಾಗದ ಹೆಣ್ಣು ಮಕ್ಕಳಿಗೆ’ ಎಂದು ನಮೂದಿಸಿರುವ ಪದವನ್ನು ತೆಗೆದು ಹಾಕಬೇಕು
ಶಶಿಕಲಾ ಪಿ. ಜಿಲ್ಲಾ ಘಟಕದ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !